Advertisement

ಉತ್ಸವದ ಉತ್ಸಾಹಕ್ಕೆ ಮಳೆ ನೀರು

11:30 AM Aug 16, 2017 | |

ಬೆಂಗಳೂರು: ಮಳೆ ರಾಡಿಯಂತಾಗಿದ್ದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸೇನಾ ಪೊಲೀಸ್‌ ತಂಡದ “ಮೋಟರ್‌ ಬೈಕ್‌ ಸಾಹಸ’ ಪ್ರದರ್ಶನ ರದ್ದುಗೊಂಡು ನಿರಾಶೆ ಮೂಡಿದರೂ, ಸಾಧ್ಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಮೆರಗು ನೀಡಿದವು. 

Advertisement

ಸೋಮವಾರ ತಡ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಡೀ ಮಾಣಿಕ್‌ಷಾ ಪರೇಡ್‌ ಮೈದಾನ ಗದ್ದೆಯಂತಾಗಿತ್ತು. ಹೀಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಬಗ್ಗೆ ಅನುಮಾನ ಮೂಡಿತ್ತು. ಆದರೆ, 9 ಗಂಟೆ ವೇಳೆಗೆ ಮಳೆ ನಿಂತಿದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಸೆ ಚಿಗುರಿತು. ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆದರೆ, ಬೈಕ್‌ ಸಾಹಸ ಪ್ರದರ್ಶನ ನಡೆಯಲಿಲ್ಲ. 

ಉಳಿದಂತೆ ಆಕರ್ಷಕ ಪಥಸಂಚಲನ, ನಾಡಗೀತೆ, ರೈತ ಗೀತೆ, ವಿವಿಧ ಶಾಲಾ ಮಕ್ಕಳು ಸಾದರಪಡಿಸಿದ ಸ್ವಾತಂತ್ರ್ಯ ಸಂಗ್ರಾಮದ ಕಥಾನಕಗಳು, ರಾಷ್ಟ್ರಾಭಿಮಾನ ಇಮ್ಮಡಿಗೊಳಿಸುವ ನೃತ್ಯರೂಪಕಗಳು ನೆರೆದವರು ಮನಸೊರೆಗೊಳಿಸಿದವು. 

ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿಯವರು ಧ್ವಜಾರೋಹಣ ನೆರವೇರಿಸಿ, ತೆರೆದ ಜೀಪ್‌ನಲ್ಲಿ ತೆರಳಿ ಪರೇಡ್‌ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿದರು. ಇದಾದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಸ್ವಾತಂತ್ರೋತ್ಸವ ಭಾಷಣ ಮಾಡಿದರು. ಈ ವೇಳೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್‌, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್‌ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗುವ ಮೊದಲು ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ಮೊಳಗಿತು. 

ಪಥಸಂಚಲನದಲ್ಲಿ ಬಿಎಸ್‌ಎಫ್, ಸಿಆರ್‌ಪಿಎಫ್, ಸಿಎಆರ್‌, ಕೇರಳ ಪೊಲೀಸ್‌ ತಂಡ, ಅಗ್ನಿಶಾಮಕದಳ, ಅಬಕಾರಿ, ಗೃಹರಕ್ಷಕ ದಳ, ಭಾರತ್‌ ಸ್ಕೌಟ್‌ ಆ್ಯಂಡ್‌ ಗೈಡ್‌, ಎನ್‌ಎಸ್‌ಎಸ್‌, ಎನ್‌ಸಿಸಿ, ಸೇವಾದಳ, ಶ್ವಾನದಳದ ತುಕಡಿಗಳು ಸೇರಿದಂತೆ ರಮಣಮಹಿರ್ಷಿ ಹಾಗೂ ಸಮರ್ಥನಂ ಅಂಧಮಕ್ಕಳ ಶಾಲೆ ಒಳಗೊಂಡಂತೆ ವಿವಿಧ ಶಾಲಾ ಮಕ್ಕಳ ತಂಡಗಳು ಪಾಲ್ಗೊಂಡಿದ್ದವು. ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ. ಯೋಗೇಶ್‌ ಕುಮಾರ್‌ ಈ ಬಾರಿಯ ಪರೇಡ್‌ ಕಮಾಂಡರ್‌ ಆಗಿದ್ದರು. 

Advertisement

ಬೈಕ್‌ ಸಾಹಸ ಪ್ರದರ್ಶನ ರದ್ದು
ಬೈಕ್‌ ಸಾಹಸ ಪ್ರದರ್ಶನ ಪ್ರತಿ ಬಾರಿಯ ಸ್ವಾತಂತ್ರೋತ್ಸವದ ಆಕರ್ಷಣೆ ಆಗಿರುತ್ತಿತ್ತು. ಆದರೆ, ಈ ಬಾರಿ ಬೈಕ್‌ ಸಹಾಸ ಪ್ರದರ್ಶನ ನಡೆಯಲಿಲ್ಲ. ಲೆಫ್ಟಿನೆಂಟ್‌ ಕರ್ನಲ್‌ ವಿಕ್ರಂ ರಾಜೆ ಭೋಸ್ಲೆ ನೇತೃತ್ವದ 30 ಮಂದಿ ಸದಸ್ಯರ ಮಿಲಿಟರಿ ಪೊಲೀಸ್‌ ಸಿಬ್ಬಂದಿಗಳ ತಂಡ  “ಶ್ವೇತ ಅಶ್ವ’ ಮೋಟಾರು ಸೈಕಲ್‌ ಸಾಹಸ ಪ್ರದರ್ಶನ ನೀಡಬೇಕಿತ್ತು. ಆದರೆ, ಮಳೆಯ ಕಾರಣಕ್ಕೆ ಪ್ರದರ್ಶನ ಸಾಧ್ಯವಾಗಿಲ್ಲ. ಮಳೆಯಿಂದ ನೆಲ ಒದ್ದೆ ಆಗಿರುವುದರಿಂದ ಬೈಕ್‌ ಚಾಲನೆ ಕಷ್ಟ. ಅದರಲ್ಲೂ ಸಾಹಸ ಭಂಗಿಗಳಲ್ಲಿ ಬೈಕ್‌ ಚಾಲನೆ ಮಾಡುವುದು ಅಪಾಯಕಾರಿ ಆಗಬಹುದು ಎಂಬ ಕಾರಣಕ್ಕೆ ಪ್ರದರ್ಶನ ರದ್ದುಪಡಿಸಲಾಯಿತು ಎಂದು ಆಯೋಜಕರು ತಿಳಿಸಿದರು. 

ಬಹುಮಾನ ವಿತರಣೆ
ಪಥಸಂಚಲನದಲ್ಲಿ ಗ್ರೂಪ್‌ 1ರಲ್ಲಿ ಬಿಎಸ್‌ಎಫ್ ಮೊದಲ ಮತ್ತು ಸಿಆರ್‌ಪಿಎಫ್ 2ನೇ ಸ್ಥಾನ ಪಡೆಯಿತು. ಗ್ರೂಪ್‌ 2ರಲ್ಲಿ ಅಗ್ನಿಶಾಮಕ ದಳ, ಅಬಕಾರಿ ದಳ ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದವು. ಗ್ರೂಪ್‌ 3ರಲ್ಲಿ ಕ್ಲಾರೆನ್ಸ್‌ ಪಬ್ಲಿಕ್‌ ಶಾಲೆ ಪ್ರಥಮ ಮತ್ತು ಎನ್‌ಸಿಸಿ ಬಾಲಕಿಯರ ತಂಡ ದ್ವೀತಿಯ ಸ್ಥಾನ, ಗ್ರೂಪ್‌ 4ರಲ್ಲಿ ಲೇಡಿ ವೆಲಂಕಣಿ ಶಾಲೆ, ಲಿಟಲ್‌ ಫ್ಲವರ್‌ ಪಬ್ಲಿಕ್‌ ಶಾಲೆ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದವು.

ವಾದ್ಯ ವೃಂದದಲ್ಲಿ ಬಿಎಸ್‌ಎಫ್ ಇಂಗ್ಲಿಷ್‌ ಬ್ಯಾಂಡ್‌ ತಂಡ ಮೊದಲ ಮತ್ತು ಪ್ರಸಿಡೆನ್ಸಿ ಶಾಲೆ ದ್ವೀತಿಯ ಬಹುಮಾನಕ್ಕೆ ಪಾತ್ರವಾದವು. ಕೇರಳ ಪೊಲೀಸ್‌ ತಂಡ, ಶ್ವಾನದಳ, ಅಂಧಮಕ್ಕಳ ಶಾಲೆಗಳ ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು. ಸಾಂಸೃತಿ ಕಾರ್ಯಕ್ರಮ ವಿಭಾಗದಲ್ಲಿ “ವೀರ ಸಿಂಧೂರ ಲಕ್ಷ್ಮಣ’ ನೃತ್ಯ ರೂಪಕಕ್ಕೆ ಪ್ರಥಮ ಬಹುಮಾನ ಸಿಕ್ಕಿತು. ಉಳಿದಂತೆ ಜೈ ಜವಾನ್‌-ಜೈ ಕಿಸಾನ್‌ ನೃತ್ಯಕ್ಕೆ ದ್ವೀತಿಯ, ವೀರಯೋಧ ಮುಂಡರಗಿ ಭೀಮರಾಯ ಪ್ರದರ್ಶನಕ್ಕೆ ತೃತೀಯ ಹಾಗೂ ವಸುದೈವ ಕುಂಟುಂಬಕಂ ನೃತ್ಯಕ್ಕೆ ನಾಲ್ಕನೆ ಬಹುಮಾನ ಸಿಕ್ಕಿತು. 

ವಿಶೇಷ ಪುರಸ್ಕಾರ
ಹಿರಿಯ ಐಪಿಎಸ್‌ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಕಾಂತರಾಜು, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಎಂ.ಎಸ್‌. ಜಗದೀಶ್‌ ಹಾಗೂ ಸರ್ಕಾರಿ ನೌಕರ ನವೀನ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ವಿಶೇಷ ಸೇವಾ ಪುರಸ್ಕಾರ ನೀಡಿ ಗೌರವಿಸಿದರು. 

ಜನ ಕಡಿಮೆ 
ಈ ಬಾರಿಯ ಸ್ವಾತಂತ್ರೋತ್ಸವ ಸಮಾರಂಭದ ವೀಕ್ಷಣೆಗೆ ಆಯೋಜಕರು ಅತಿಗಣ್ಯ ವ್ಯಕ್ತಿಗಳಿಗೆ 2,500, ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳಿಗೆ 2,500, ಇತರೆ ಎಲ್ಲ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗೆ 3 ಸಾವಿರ ಹಾಗೂ ಸಾರ್ವಜನಿಕರಿಗಾಗಿ 4 ಸಾವಿರ ಸೇರಿದಂತೆ ಒಟ್ಟು 12 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದರು. ಆದರೆ, ಸೋಮವಾರ ರಾತ್ರಿ ಆರಂಭವಾದ ಮಳೆ ಬೆಳಿಗ್ಗೆವರೆಗೆ ಮುಂದುವರಿದ ಪರಿಣಾಮವಾಗಿ ಕಡಿಮೆ ಜನ ಬಂದಿದ್ದರು. ಹೀಗಾಗಿ ಎಲ್ಲ ಗ್ಯಾಲರಿಗಳಲ್ಲಿ ಖಾಲಿ ಕುರ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದವು.

ಪೂನಂ ಮಹಾಜನ್‌ ಅಸಮಾಧಾನ
ಬೆಂಗಳೂರು:
ಸ್ವಾತಂತ್ರ ದಿನದ ಅಂಗವಾಗಿ ಬಿಜೆಪಿ ರಾಜ್ಯ ಯುವಮೋರ್ಚಾ ಹಮ್ಮಿಕೊಂಡಿದ್ದ ಮಿಡ್‌ನೈಟ್‌ ಮ್ಯಾರಥಾನ್‌ ಮತ್ತು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸದೇ ಇರುವ ಬಗ್ಗೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಪೂನಂ ಮಹಾಜನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸ್ವಾತಂತ್ರ ದಿನದ ಅಂಗವಾಗಿ ಸೋಮವಾರ ಮಧ್ಯರಾತ್ರಿ ಫ್ರೀಡಂ ಪಾರ್ಕ್‌ನಲ್ಲಿ ಯುವ ಮೋರ್ಚಾ ವತಿಯಿಂದ ಮಿಡ್‌ನೈಟ್‌ ಮ್ಯಾರಥಾನ್‌ ಮತ್ತು ಧ್ವಜಾರೋಹಣ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪೂನಂ ಮಹಾಜನ್‌ ಅವರನ್ನು ಅಹ್ವಾನಿಸಲಾಗಿತ್ತು. ಆದರೆ, ಅವರಿಗೆ ಅಲ್ಲಿ ಹೆಚ್ಚು ಮಾತನಾಡಲು ಅವಕಾಶ ನೀಡದೇ ಇದ್ದುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ತಮ್ಮ ಭಾಷಣಕ್ಕೆ ಕೇವಲ ಐದು ನಿಮಿಷ ಮಾತ್ರ ಕಾಲಾವಕಾಶ ನೀಡಿದ್ದರಿಂದ ಬೇರಸಗೊಂಡ ಪೂನಂ ಮಹಾಜನ್‌, ಐದು ನಿಮಿಷ ಮಾತನಾಡಲು ನಾನು ಮುಂಬೈನಿಂದ ಬರಬೇಕಾಗಿತ್ತೇ? ಸರಿಯಾಗಿ ಏಕೆ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್‌ ಸಿಂಹ ಸೇರಿದಂತೆ ಪದಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಡಿಸಿದರು ಎನ್ನಲಾಗಿದೆ.

ಉಚಿತ ಆರೋಗ್ಯ ಶಿಬಿರ
ಬೆಂಗಳೂರು:
ದೇಶದ 71ನೇ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು “ಅನಾರೋಗ್ಯದಿಂದ ಸ್ವಾತಂತ್ರ್ಯ ಪಡೆಯೋಣ-ಆರೋಗ್ಯ ಮತ್ತು ಕ್ಷೇಮವನ್ನು ಸಂಭ್ರಮಿಸೋಣ’ ಎಂಬ ಘೋಷವಾಕ್ಯದಲ್ಲಿ ರಾಜ್ಯಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿತ್ತು. 

ಸರ್ಕಾರದ ವತಿಯಿಂದ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ನಡೆಯುವ ಸಾರ್ವಜನಿಕ ಸ್ವಾತಂತ್ರೋತ್ಸವ ಸಮಾರಂಭಗಳ ಸ್ಥಳದಲ್ಲಿ ಈ ವಿಶೇಷ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ರಾಜ್ಯದ 30 ಜಿಲ್ಲೆಗಳಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಈ ಶಿಬಿರಗಳ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next