ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದಲ್ಲಿ ಮಳೆ ನೀರು ಕಾಲುವೆ ನಿರ್ಮಾಣಕ್ಕೆ ತೆಗೆಯಲಾಗಿರುವ ಮಣ್ಣನ್ನು ಆಟದ ಮೈದಾನಲ್ಲಿ ಸುರಿಯಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಪುತ್ತೂರು ತಹಶೀಲ್ದಾರ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಬಗ್ಗೆ ನೆಕ್ಕಿಲಾಡಿ ನಿವಾಸಿ ಎ. ಜತೀಂದ್ರ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸ್ವಲ್ಪ ಹೊತ್ತು ವಾದ ಆಲಿಸಿದ ಬಳಿಕ ಪುತ್ತೂರು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಪಿಡಿಒಗೆ ನೋಟಿಸ್ ಜಾರಿಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಕೇತನ್ ಕುಮಾರ್ ಅವರು, ನೆಕ್ಕಿಲಾಡಿ ಗ್ರಾಮದ ಸರ್ವೇ ನಂಬರ್ 88/1 ಮತ್ತು 34ರ ಜಾಗವನ್ನು ಆಟದ ಮೈದಾನಕ್ಕೆ ಮೀಸಲಿರಿಸಿ 2021ರ ಜು. 29ರಂದು ಸರಕಾರ ಆದೇಶಿಸಿದೆ. ಆದರೆ, ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಅವರು 2021ರ ಮೇ ತಿಂಗಳಲ್ಲಿ ಗ್ರಾಮದಲ್ಲಿ ಮಳೆನೀರು ಕಾಲುವೆ ಕಾಮಗಾರಿ ಕೈಗೊಂಡಿದ್ದರು. ಕಾಲುವೆ ನಿರ್ಮಾಣಕ್ಕೆ ತೆಗೆದಿದ್ದ ಮಣ್ಣನ್ನು ಆಟದ ಮೈದಾನಕ್ಕೆ ಮೀಸಲಿಸಿರುವ ಜಾಗದಲ್ಲಿ ಸುರಿಯಲಾಗಿದೆ. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಮಣ್ಣು ತುಂಬಿರುವುದರಿಂದ ಮೈದಾನವನ್ನು ಗ್ರಾಮಸ್ಥರು ಬಳಸಲು ಆಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಮನವಿ ತಿರಸ್ಕರಿಸಿದ ಆರೋಪ:
ಮೈದಾನದಲ್ಲಿ ಹಾಕಲಾಗಿರುವ ಮಣ್ಣನ್ನು ತೆರವುಗೊಳಿಸಿ ಮೊದಲಿನ ಸ್ಥಿತಿಗೆ ತರುವಂತೆ ಕೋರಿ 2021ರ ಜುಲೈ 20ರಂದು ನೀಡಿರುವ ಮನವಿ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಹೇಳಿದರು.
ಸರಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ತಿಳಿಸಿರುವಂತೆ ಒಂದು ವೇಳೆ ಮಳೆ ನೀರು ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಎಂದಾದರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.