ಬೆಂಗಳೂರು: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ದಕ್ಷಿಣ ಒಳನಾಡಿನ ಹಲವು ಕಡೆ, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿವೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಹಗುರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ ?
ನಾಪೋಕ್ಲು (ಕೊಡಗು) 5, ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ), ಸರಗೂರು (ಮೈಸೂರು ಜಿಲ್ಲೆ), ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ) ತಲಾ 3, ಅರಕಲಗೂಡು (ಹಾಸನ ಜಿಲ್ಲೆ), ಮೂರ್ನಾಡು (ಕೊಡಗು ಜಿಲ್ಲೆ) ತಲಾ 2, ಬೀದರ್, ಟಿ.ನರಸೀಪುರ (ಮೈಸೂರು ಜಿಲ್ಲೆ), ಕಳಸ, ಮೂಡಿಗೆರೆ ಕೆವಿಕೆ (ಚಿಕ್ಕಮಗಳೂರು ಜಿಲ್ಲೆ), ಮೈಸೂರು ತಲಾ 1 ಸೆಂ.ಮೀ. ಮಳೆಯಾಗಿದೆ. ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 42 ಡಿ.ಸೆ. ಕಲಬುರಗಿಯಲ್ಲಿ ದಾಖಲಾಗಿದೆ.