ಭರಮಸಾಗರ: ಮಳೆ ನಿಂತಿದೆ, ಆದರೆ ಮಳೆಯ ಅನಾಹುತದಿಂದ ಹತ್ತಿ ಗಿಡಗಳಲ್ಲಿನ ಕಾಯಿ ಕೊಳೆಯುತ್ತಿದೆ. ಮತ್ತೂಂದೆಡೆ ಅರಳಿದ ಹತ್ತಿ ತೊಯ್ದು ತನ್ನ ಗುಣಮಟ್ಟ ಕಳೆದುಕೊಂಡಿರುವುದರಿಂದ ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಪ್ರಮುಖ ಬೆಳೆಗಳ ಸಾಲಿಗೆ ಹತ್ತಿ ಬೆಳೆ ಸೇರುತ್ತದೆ. ಚಿತ್ರದುರ್ಗ ನಗರದಲ್ಲೇ ನಾಲ್ಕಾರು ಹತ್ತಿ ಮಿಲ್‌ಗಳು ಕೆಲಸ ಮಾಡುತ್ತಿದ್ದ ಕಾಲಕ್ಕೆ “ಹತ್ತಿ ಕಣಜ; ಎನ್ನಿಸಿಕೊಂಡಿತ್ತು.
ಕಳೆದ ಹಲವು ವರ್ಷಗಳಿಂದ ಹತ್ತಿ ಬೆಳೆಯುವವರ ಸಂಖ್ಯೆ ನಾನಾ ಕಾರಣಗಳಿಂದ ಇಳಿಮುಖವಾಗಿದೆ. ಹತ್ತಿ ಮಿಲ್‌ಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಹತ್ತಿ ಬೆಳೆಗೆ ಹದ ಮಳೆಗಿಂತ ಹತ್ತಿ ಅರಳುವ ಸಮಯಕ್ಕೆ ಎಡಬಿಡದೆ ಮಳೆ ಆಗುತ್ತಿರುವ ಕಾರಣಗಳಿಂದ ಹತ್ತಿ ಬೆಳೆ ನೆಲಕ್ಕೆ ಬಿದ್ದು ಮೊಳಕೆ ಒಡೆದು ನಷ್ಟಕ್ಕೆ ಸಿಲುಕಿದೆ. ಜೂನ್-63 ಮಿಮೀ, ಜುಲೈ-74, ಆಗಸ್ಟ್-133, ಸೆಪ್ಟೆಂಬರ್-166, ಅಕ್ಟೋಬರ್-149 ಮಿಮೀ ಮಳೆಯಾಗಿದೆ. ಒಟ್ಟಾರೆ ಭರಮಸಾಗರ ಹೋಬಳಿಯಲ್ಲಿ 429 ಮಿಮೀ ವಾಡಿಕೆ ಮಳೆ ಅಂದಾಜಿಸಲಾಗಿತ್ತು. ಆದರೆ ಇದುವರೆಗೆ 585 ಮಿಮೀ ಮಳೆ ಆಗಿದೆ ಎಂದು ಮಳೆಮಾಪನ ಇಲಾಖೆ ವರದಿ ತಿಳಿಸುತ್ತದೆ.
ಇಷ್ಟೊಂದು ಪ್ರಮಾಣದ ಮಳೆ ಹತ್ತಿ ಬೆಳೆಗೆ ಸೂಕ್ತವಲ್ಲ ಎಂಬುದು ಕೃಷಿ ತಜ್ಞರ ಅಭಿಪ್ರಾಯ. ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯಲ್ಲಿ 418 ಹೆಕ್ಟೇರ್, ಭರಮಸಾಗರ 510, ಹಿರೇಗುಂಟನೂರು 186, ತುರುವನೂರು 240 ಹೆಕ್ಟೇರ್ ಸೇರಿದಂತೆ ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಖುಷ್ಕಿ ಜಮೀನಿನಲ್ಲಿ 1354 ಹೆಕ್ಟೇರ್ ಹಾಗೂ ನೀರಾವರಿ ಪ್ರದೇಶದಲ್ಲಿ 87 ಹೆಕ್ಟೇರ್ ಸೇರಿದಂತೆ 1441 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಭರಮಸಾಗರ, ನಂದಿಹಳ್ಳಿ, ಇಸಾಮುದ್ರ, ನೆಲ್ಲಿಕಟ್ಟೆ, ಕೊಳಹಾಳು, ಲಕ್ಷ್ಮೀಸಾಗರ, ವಿಜಾಪುರ, ಹಿರೇಬೆನ್ನೂರು ಇತರೆ ಪ್ರಮುಖ ಭಾಗಗಳಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ಕಾಣಬಹುದು.
ಹುಸಿಯಾಯಿತು ನಿರೀಕ್ಷೆ: ಒಂದು ಎಕರೆ ಹತ್ತಿ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಇತರೆ ಕೃಷಿ ಖರ್ಚುಗಳು ಸೇರಿ ಬರೋಬ್ಬರಿ 15 ರಿಂದ 20 ಸಾವಿರ ರೂಗಳ ಖರ್ಚು ತಗಲುತ್ತದೆ. ಬಿತ್ತನೆ ಮಾಡಿ 4-5 ತಿಂಗಳುಗಳು ಕಳೆದಿದೆ. ಈಗಾಗಲೇ ಗಿಡ ಒಂದಕ್ಕೆ ಗರಿಷ್ಠ 70 ರಿಂದ 80 ಕಾಯಿಗಳನ್ನು ಕಟ್ಟಿದ್ದರಿಂದ ಬಂಪರ್ ಬೆಳೆಯಾಗಬಹುದು ಎಂದು ಬೆಳೆಗಾರರು ನಿರೀಕ್ಷಿಸಿದ್ದರು.
ಆದರೆ ಮಳೆ ಆರ್ಭಟ ಶುರುವಾಗುತ್ತಿದ್ದಂತೆ ಹತ್ತಿ ಕಾಯಿಗಳು ಕೊಳೆಯಲು ಶುರುವಾಗಿದೆ. ಇನ್ನೇನು ಬಿಸಿಲಿಗೆ ಹತ್ತಿ ಅರಳಿ ಬಿಡಸಬೇಕೆಂಬ ಸ್ಥಿತಿಯಲ್ಲಿದ್ದ ಹತ್ತಿ ತೊಯ್ದು ಹಾಳಾಗಿದೆ. ಇಂದು ಎಕರೆಗೆ 10, 12, 15 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದವರಿಗೆ, ಈಗ ಮಳೆ ಕಡಿಮೆಯಾದರೆ ಮಾತ್ರ ಎಕರೆಗೆ 3 ರಿಂದ 4 ಕ್ವಿಂಟಲ್ ಹತ್ತಿ ದೊರೆತರೆ ಹೆಚ್ಚು ಎನ್ನಲಾಗುತ್ತಿದೆ. ನಾಲ್ಕಾರು ದಿನಗಳಿಂದ ಮಳೆ ನಿಂತಿದೆ. ಅಳಿದುಳಿದ ಹತ್ತಿ ಕಾಯಿ ಬಿಸಿಲಿನಿಂದ ಅರಳಿದರೆ, ಅರಳಿದ ಹತ್ತಿಯನ್ನು ಸಂಗ್ರಹಿಸುವತ್ತ ರೈತರು ಚಿತ್ತ ಹರಿಸಿದ್ದಾರೆ.
ಹತ್ತಿಗೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 6 ರಿಂದ 7 ಸಾವಿರ ರೂ. ದರವಿದೆ. ಪ್ರಸ್ತುತ ಅಕ್ಟೋಬರ್ ತಿಂಗಳಲ್ಲಿ ಮಳೆ ಒಂದಷ್ಟು ಬಿಡುವು ನೀಡಿ ಬಿಸಿಲು ಬಂದಿದ್ದರೆ ಉತ್ತಮವಾಗಿ ಹತ್ತಿ ಅರಳುತ್ತಿತ್ತು. ಅರಳಿದ ಹತ್ತಿ ಬಿಡಿಸಿ ಮಾರಾಟ ಮಾಡಿದ ಹಣ ಬೆಳೆಗಾರರ ಜೇಬು ಸೇರಬೇಕಿತ್ತು. ಆದರೆ ಮಳೆಯಿಂದಾಗಿ ಬೆಳೆ ಅನ್ನದಾತನ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹತ್ತಿ ಬೆಳೆಗೆ ವಿಮೆ ಕಟ್ಟಿಸಿಕೊಂಡ ಕಂಪನಿಗಳು ರೈತನಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಮುಂದಾಗಬೇಕು. ಸರ್ಕಾರ ನಷ್ಟಕ್ಕೆ ತುತ್ತಾದ ಹತ್ತಿ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂಬುದು ಅನ್ನದಾತರ ಆಗ್ರಹ.
-ಎಚ್.ಬಿ. ನಿರಂಜನ ಮೂರ್ತಿ