Advertisement
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಭಾನುವಾರ ರೆಡ್ ಅಲರ್ಟ್ ನೀಡಿದ್ದು, 11ರ ವರೆಗೆ ಆರೆಂಜ್ ಅಲರ್ಟ್ ನೀಡಿದೆ. ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
Related Articles
Advertisement
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.
ಜಿಲ್ಲಾದ್ಯಂತ ಮೂರ್‍ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಶೃಂಗೇರಿ ಸುತ್ತಮುತ್ತ ನಿರಂತರ ಮಳೆಯಾಗುತ್ತಿದೆ. ತುಂಗಾನದಿ ಹರಿವಿನಲ್ಲಿ ಏರಿಕೆಯಾಗಿದೆ. ಶುಕ್ರವಾರ ಕಪ್ಪೆಶಂಕರ ಮುಳುಗಿ ಬೈಪಾಸ್ ರಸ್ತೆವರೆಗೂ ನೀರುಬಂದಿತ್ತು. ಶನಿವಾರ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾದ ಪರಿಣಾಮ ನದಿ ನೀರು ಇಳಿಕೆಯಾಗಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಮಳೆಯಾಗಿದ್ದು, ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿ ಹೊರನಾಡು ಕಳಸ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಿದೆ. ಚಾರ್ಮಾಡಿಘಾಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿದೆ. ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಬಾಳೆಹೊನ್ನೂರು ಭಾಗದಲ್ಲೂ ಮಳೆ ಮುಂದುವರಿದಿದೆ.
ಮೂಡಿಗೆರೆ ತಾಲೂಕು ದೇವರಮನೆ, ಗುತ್ತಿ ಸುತ್ತಮುತ್ತ ಭಾರೀ ಮಳೆಯಾಗಿದೆ. ನಿರಂತರ ಮಳೆಗೆ ಹಳ್ಳಕೊಳ್ಳ ಕೆರೆಕಟ್ಟೆಗಳು ತುಂಬಿಕೊಂಡಿದೆ. ಕಳಸ ತಾಲೂಕು ನೆಲ್ಲಿಬೀಡು ಗ್ರಾಮದ ಮನೋಜ್ ಎಂಬುವರಿಗೆ ಸೇರಿದ ಗದ್ದೆಯಲ್ಲಿ ಭೂಕುಸಿತ ಉಂಟಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗೆ ಕೊಳೆರೋಗ ತಗುಲುವ ಆತಂಕ ರೈತರಲ್ಲಿ ಮೂಡಿಸಿದೆ.