Advertisement

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

08:41 PM Apr 18, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಿಡಿಲಬ್ಬರದ ಬಿರುಗಾಳಿ ಸಹಿತ ಮಳೆಯಾಗಿದ್ದು, ಓರ್ವ ಬಲಿಯಾಗಿದ್ದು, ಜಾನುವಾರುಗಳು ಪ್ರಾಣಕಳೆದುಕೊಂಡಿದೆ.

Advertisement

ಸಿಡಿಲು ಬಡಿದು ರೈತ ಬಲಿ

ಕೊಪ್ಪಳ ಜಿಲ್ಲೆ‌ ಕುಷ್ಟಗಿ ತಾಲೂಕಿನ ಜೂಲಕಟ್ಟಿಯಲ್ಲಿ ಹೊಲದಲ್ಲಿ ಕೂಲಿಕಾರರೊಂದಿಗೆ ಕೆಲಸಕ್ಕೆ‌ ತೆರಳಿದ್ದ ರೈತ ಅಮೋಘಸಿದ್ದಯ್ಯ ಗುರುವಿನ್(32) ಸಿಡಿಲು ಬಡಿದು ಮೃತ ಪಟ್ಟಿದ್ದಾರೆ.

ಸಂಜೆ ಏಕಾ ಏಕಿ ಬೀಸಿದ ಗಾಳಿ, ಮಳೆ‌ಯಿಂದ‌ ರಕ್ಷಿಸಿಕೊಳ್ಳಲು ಗಿಡದ‌ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ. ಜತೆಗಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದು ಘಟನಾ ಸ್ಥಳಕ್ಕೆ ಕುಷ್ಟಗಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐತಿಹಾಸಿಕ ಮೆಹತರ್ ಮಹಲ್ ಸ್ಮಾರಕಕ್ಕೆ ಹಾನಿ

Advertisement

ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಸಂಜೆ ಭಾರಿ ಸದ್ದಿನೊಂದಿಗೆ ಗುಡುಗು-ಸಿಡಿಲ ಅಬ್ಬರ ಆರಂಭಗೊಂಡಿದ್ದು, ವಿಜಯಪುರ ನಗರದಲ್ಲಿರುವ ಐತಿಹಾಸಿಕ ಮೆಹತರ್ ಮಹಲ್ ಸ್ಮಾರಕಕ್ಕೆ ಹಾನಿಯಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಬಿಸಿಲ ಧಗೆಯಿಂದ ತ್ತರಿಸಿದ್ದ ಜನರಿಗೆ ಮಳೆ ಕೊಂಚ ನೆಮ್ಮದಿ ತಂದಿದೆ.

ಸಿಡಿಲಿನ ಹೊಡೆತಕ್ಕೆ ಮೆಹತರ ಪಾರಂಪರಿಕ ಸ್ಮಾರಕದ ಪ್ರವೇಶ ದ್ವಾರದ ಕಮಾನಿನ ಮೇಲ್ಭಾಗದ ಕಲ್ಲುಗಳು ಕಳಚಿ ಬಿದ್ದು ಹಾನಿಯಾಗಿದೆ. ಸ್ಮಾರಕದ ಮೇಲಿನಿಂದ ಕಲ್ಲುಗಳು ಬಿದ್ದ ಪರಿಣಾಮ ಸ್ಮಾರಕಕ್ಕೆ ಹೊಂದಿಕೊಂಡು ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದೆ.

ಗುರುವಾರ ಬೆಳಗ್ಗೆಯಿಂದ ಬಿಸಿಲ ಝಳ ಹೆಚ್ಚಾಗಿದ್ದು, ಸಂಜೆಯ ವೇಳೆಗೆ ಏಕಾಏಕಿ ಸಾಧಾರಣ ಮಳೆ ಸುರಿಸುತ್ತ ಆರಂಭಗೊಂಡ ಮಿಂಚು-ಗುಡುಗು-ಸಿಡಿಲು ಜೋರಾಗಿತ್ತು. ಏಕಾಏಕಿ ಸುರಿದ ಮಳೆಯಿಂದ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರಿಗೆ ಕೊಂಚ ನೆಮ್ಮದಿ ಸಿಗುವಂತಾಯಿತು.

ಮಳೆಯ ಸಂದರ್ಭದಲ್ಲೇ ಬೀಸಿದ ಬಿರುಗಾಳಿಗೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಮರವೊಂದು ವಿದ್ಯುತ್ ಕಂಬಗಳ ಮೇಲೆ ಉರುಳಿಬಿದ್ದಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಾಗಿದ್ದರೂ ಯಾವುದೇ ಅಪಾಯ, ಜೀವಹಾನಿ ಆಗಿಲ್ಲ

ಗದಗ-ಬೆಟಗೇರಿಯಲ್ಲಿ ಮಳೆ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.

ಹಾತಲಗೇರಿ ನಾಕಾ, ಜೆಟಿ ಕಾಲೇಜ್, ಬಳ್ಳಾರಿ ಗೇಟ್, ಹಳೇ ಡಿಸಿ ಆಫೀಸ್ ಸರ್ಕಲ್, ತೋಂಟದಾರ್ಯ ಮಠದ ರಸ್ತೆ ಸೇರಿ ಹಲವೆಡೆ ಮೊಣಕಾಲುದ್ದ ನೀರು ಹರಿಯಿತು. ಅಲ್ಲಲ್ಲಿ ಗಿಡ-ಮರಗಳು ಧರೆಗುರುಳಿದ್ದರಿಂದ ಬೈಕ್ ಸವಾರರು, ಆಟೋ ಚಾಲಕರು, ವಾಹನ ಸವಾರರು ರಸ್ತೆ ಮೇಲೆ ಸಂಚರಿಸಲು ಪರದಾಡಿದರು.

ಕಳೆದ ಕೆಲ ದಿನಗಳಿಂದ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದಂತೆಯೇ, ಬಿಸಿಲಿನ ಬೇಗೆಯೂ ಏರತೊಡಗಿತ್ತು. ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನವೂ ದಾಖಲಾಗಿತ್ತು. ಇದರಿಂದ ಸಾರ್ವಜನಿಕರು ಕಂಗಾಲಾಗುವಂತೆ ಮಾಡಿತ್ತು. ಗುರುವಾರ ವರುಣನ ಆಗಮನದಿಂದ ಬಿಸಿಲಿನಿಂದ ಬಸವಳಿದಿದ್ದ ನಗರದ ಜನರಿಗೆ ತುಸು ಆಹ್ಲಾದಕರ ಅನುಭವ ನೀಡಿತು.

ಹಾವೇರಿಯಲ್ಲಿ ಭಾರಿ ಗಾಳಿ ಮಳೆ

ಗಾಳಿ ಮಳೆಯ ಅಬ್ಬರಕ್ಕೆ ಹಾವೇರಿ ಹೊರವಲಯದಲ್ಲಿ ಅಜ್ಜಯ್ಯನ ಗುಡಿ ಬಳಿ ಚುನಾವಣೆ ಹಿನ್ನೆಲೆ ನಿರ್ಮಿಸಿದ್ದ ಚೆಕ್ ಪೋಸ್ಟ್ ಚೆಲ್ಲಾಪಿಲ್ಲಿಯಾಗಿದೆ. ಚೆಕ್ ಪೊಸ್ಟ್ ನಲ್ಲಿ ಹಾಕಿದ್ದ ತಗಡು, ಖುರ್ಚಿ, ಟೇಬಲ್ ಚೆಲ್ಲಾಪಿಲ್ಲಿಯಾಗಿದೆ.
ದಿಡಗೂರು ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಕುರಿಗಳ ಸಾವನ್ನಪ್ಪಿವೆ.

ದಾವಣಗೆರೆ ಸಿಡಿಲಿನ ಅಬ್ಬರ

ತಾಲೂಕಿನ ಆನಗೋಡು ಸಮೀಪದ ಈಚಘಟ್ಟ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು 16 ಹೆಣ್ಣು ಮೇಕೆ, 9 ಗಂಡು ಮೇಕೆ ಮೃತಪಟ್ಟಿವೆ.

ದಾವಣಗೆರೆ ತಾಲೂಕಿನ ಸುತ್ತಮುತ್ತ ಗುರುವಾರ ಸಂಜೆ ಭಾರೀ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಿತು. ಈಚಘಟ್ಟ ಗ್ರಾಮದ ರೈತ ಪಾಪ್ಯಾನಾಯ್ಕ ಮತ್ತು ರೇವತಿಬಾಯಿ ಎಂಬುವರು ಮೇಕೆಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ಮಳೆ ಆರಂಭವಾದಾಗ ಮೇಕೆಗಳು ಮರದ ಕೆಳಗೆ ಬಂದು ನಿಂತ ವೇಳೆ ಸಿಡಿಲು ಬಡಿದು ಮೇಕೆಗಳು ಮೃತಪಟ್ಟಿವೆ.

ಅಂದಾಜು 5 ಲಕ್ಷ ನಷ್ಟ ಸಂಭವಿಸಿದ್ದು, ಪಾಪ್ಯಾನಾಯ್ಕ ಅವರು ಉಳಿದ ಮೇಕೆಗಳನ್ನು ಹೊಡೆದುಕೊಂಡು ಬರಲು ಸಿಡಿಲು ಬಡಿದ ಸ್ಥಳದಿಂದ ದೂರ ಹೋಗಿದ್ದರಿಂದ ಪಾಪ್ಯಾನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕಂದಾಯ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next