ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಹತ್ತು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಶುಕ್ರವಾರ(ನವೆಂಬರ್ 12)ವೂ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಡುವಂತಾಗಿದೆ. ಅಲ್ಲದೇ, ರಾಜ್ಯದಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಈವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಪೊಲೀಸ್, ಕೋರ್ಟ್ ಅಗತ್ಯವಿಲ್ಲವೇ? PM ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಸಿದ್ದರಾಮಯ್ಯ ಪ್ರಶ್ನೆ
ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಗುರುವಾರ ಸಂಜೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯನ್ನು ದಾಟಿರುವ ಕಾರಣ, ಮುಂದಿನ 3-4 ದಿನಗಳ ಕಾಲ ಇಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಗಾಳಿ, ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಬೆಳೆಗಳು ನಾಶವಾಗಿದ್ದು, ಮರಗಳು ಧರೆಗುರುಳಿವೆ. ಅಲ್ಲದೇ ಒಂದು ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.
ಇದೇ ವೇಳೆ ಚೆನ್ನೈನಲ್ಲಿ ಘೋಷಿಸಲಾಗಿದ್ದ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಗುರುವಾರ ವಾಪಸ್ ಪಡೆದಿತ್ತು. ಆದರೆ ಚೆನ್ನೈ, ರಾಣಿಪೇಟ್, ವಿಲ್ಲುಪುರಂ, ಕಾಂಚಿಪುರಂ, ತಿರುವಳ್ಳೂರ್, ಚೆಂಗಲ್ ಪಟ್ಟು ಮತ್ತು ತಿರುಪತ್ತೂರ್ ನಲ್ಲಿ ಭಾರಿ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕೆಕೆ ನಗರ್ ಮತ್ತು ಕ್ರೋಮ್ ಪೇಟ್ ನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ನೀರು ನುಗ್ಗಿದ್ದು, ರಾತ್ರೋರಾತ್ರಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕಂದಾಯ, ಪೊಲೀಸ್ ಹಾಗೂ ಅಗ್ನಿಶಾಮಕದಳದ ಸಿಬಂದಿಗಳು ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನೆರವು ನೀಡುತ್ತಿದ್ದಾರೆ.