ಹೈದರಾಬಾದ್: ತೆಲಂಗಾಣದಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ವಾರಂಗಲ್ ಪೊಲೀಸ್ ಕಮಿಷನರ್ ತರುಣ್ ಜೋಶಿ ಅವರ ಪ್ರಕಾರ, ಶುಕ್ರವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯ ಕಟ್ಟಡವೊಂದು ಕುಸಿದು ಪಕ್ಕದ ಗುಡಿಸಲಿನ ಮೇಲೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.
ಇದು ಹಳೆಯ ಕಟ್ಟಡ . ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡವು ಕುಸಿದಿದ್ದು, ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೇದಕ್ ಜಿಲ್ಲೆಯ ಚೇಗುಂಟಾದಲ್ಲಿ ಶನಿವಾರ ನಸುಕಿನ ವೇಳೆ ಮಳೆಯಿಂದಾಗಿ ಕಾರ್ಖಾನೆಯ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೇದಕ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಗಿ-ವಲ್ಲಭಾಪುರ ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನೀರು ನಿಂತಿದ್ದರಿಂದ ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ತಲೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದ್ದು, ನಗರ ಮತ್ತು ರಾಜ್ಯದ ಇತರೆಡೆಗಳಲ್ಲಿ ಹಲವಾರು ಸ್ಥಳಗಳು ಜಲಾವೃತವಾಗಿದೆ. ಹವಾಮಾನ ವರದಿಯ ಪ್ರಕಾರ, ಇಂದು ವಿಕಾರಾಬಾದ್, ಮುಲುಗು, ಪೆದ್ದಪಲ್ಲಿ, ಕರೀಂನಗರ, ಜಯಶಂಕರ್ ಬೂಪಲ್ಲಪಲ್ಲಿ, ಕಾಮರೆಡ್ಡಿ, ಮೇದಕ್, ಸಂಗಾರೆಡ್ಡಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.