ಬೆಂಗಳೂರು: ರಾಜ್ಯದ ಕೆಲವೆಡೆ ಸುರಿದ ಧಾರಾಕಾರ ಮಳೆ, ನೆರೆಯಿಂದಾಗಿ ಕೃಷಿ ಪಂಪ್‌ಸೆಟ್ ಬಳಕೆ ಕಡಿಮೆಯಾಗಿದ್ದು, ಸರಾಸರಿ 2,500ರಿಂದ 3000 ಮೆಗಾವ್ಯಾಟ್‌ನಷ್ಟು ಬೇಡಿಕೆ ಇಳಿಕೆಯಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನಾ ಘಟಕಗಳ ಮೇಲಿನ ಒತ್ತಡವೂ ತಗ್ಗಿದೆ.
ರಾಜ್ಯದಲ್ಲಿ ಕಳೆದ ಮಾರ್ಚ್‌ನಲ್ಲಿ ಗರಿಷ್ಠ 12,881 ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಏರಿಕೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಬೇಸಿಗೆ ಕಳೆದು ಮುಂಗಾರು ಆರಂಭವಾದರೂ ಮಳೆ ಬಾರದ ಕಾರಣ ಕೃಷಿ ಪಂಪ್‌ಸೆಟ್ ಬಳಕೆ ಹೆಚ್ಚಾಗಿ ವಿದ್ಯುತ್ ಬೇಡಿಕೆಯೂ ಏರುಮುಖವಾಗಿಯೇ ಇತ್ತು. ಮಳೆ ಬಾರದಿದ್ದರೆ ವಿ ದ್ಯುತ್ ಕ್ಷಾಮ ತಲೆದೋರುವ ಭೀತಿಯೂ ಎದುರಾಗಿತ್ತು.
ತಗ್ಗಿದ ಬೇಡಿಕೆ: ಆದರೆ, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಕೃಷ್ಣಾ ನದಿಗೆ ಹರಿಸಿದ ಪರಿಣಾಮ ರಾಜ್ಯದ ಆಲಮಟ್ಟಿ, ನಾರಾಯಣಪುರ ಸೇರಿದಂತೆ ಹಲವು ಜಲಾಶಯಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿತ್ತು. ಲಕ್ಷಾಂತರ ಜನರ ಆಸ್ತಿಪಾಸ್ತಿ ಜತೆಗೆ ಸಾಕಷ್ಟು ಬೆಳೆಯೂ ಕೊಚ್ಚಿ ಹೋಗಿದೆ. ಜತೆಗೆ, ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. ಇದರಿಂದಾಗಿ ಕೃಷಿ ಪಂಪ್‌ಸೆಟ್ ಬಳಕೆ ಪ್ರಮಾಣ ತಗ್ಗಿದ್ದು, ವಿದ್ಯುತ್ ಬೇಡಿಕೆಯಲ್ಲೂ 2,500 ಮೆಗಾವ್ಯಾಟ್ನಿಂದ 3000 ಮೆಗಾವ್ಯಾಟ್‌ನಷ್ಟು ಇಳಿಕೆಯಾಗಿದೆ. ಸದ್ಯ ಸರಾಸರಿ 8,500 ಮೆಗಾವ್ಯಾಟ್‌ನಷ್ಟು ವಿದ್ಯುತ್ ಬೇಡಿಕೆ ಇದೆ. ನಿತ್ಯ ಹಂಚಿಕೆಯಾಗುವ ವಿದ್ಯುತ್ ಪ್ರಮಾಣಕ್ಕಿಂತಲೂ ಬಳಕೆ ಪ್ರಮಾಣ ಕಡಿಮೆ ಇದೆ.
ಜಲಾಶಯಗಳಿಗೆ ನೀರು: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಅಂದರೆ, ಜುಲೈ ಅಂತ್ಯದವರೆಗೂ ಜಲವಿದ್ಯುತ್ ಘಟಕಗಳಿರುವ ಜಲಾಶಯಗಳಿಗೆ ನೀರಿನ ಒಳಹರಿವು ಉತ್ತಮವಾಗಿರಲಿಲ್ಲ. ಜುಲೈ 30ಕ್ಕೆ ಲಿಂಗನಮಕ್ಕಿಯಲ್ಲಿ ಶೇ.31.94, ಸೂಫಾ ಜಲಾಶಯದಲ್ಲಿ ಶೇ.51.55 ಹಾಗೂ ಮಾಣಿಯಲ್ಲಿ ಶೇ.25.47ರಷ್ಟು ನೀರು ಸಂಗ್ರಹವಿತ್ತು. ಆದರೆ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಭರ್ತಿಯಾಗಿದೆ. ಆ.3ರಂದು ಸೂಫಾ ಜಲಾಶಯದಲ್ಲಿ ಶೇ.98.23 ಹಾಗೂ ಮಾಣಿಯಲ್ಲಿ ಶೇ.65.4ರಷ್ಟು ನೀರು ಸಂಗ್ರಹವಾಗಿದೆ. ಹಾಗಾಗಿ, ಜಲವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ.
Advertisement
ಬೆಂಗಳೂರು ಒಳಗೊಂಡ ಬೆಸ್ಕಾಂ ವ್ಯಾಪ್ತಿಯಲ್ಲೂ ಸರಾಸರಿ 1,000 ಮೆಗಾವ್ಯಾಟ್‌ನಷ್ಟು ಬೇಡಿಕೆ ಇಳಿಕೆಯಾಗಿದೆ. ಆದರೆ, ಕೈಗಾರಿಕೆಗಳು ಸೇರಿದಂತೆ ವಾಣಿಜ್ಯ ಬಳಕೆಯ ಹೈಟೆನ್ಷನ್ ವಿದ್ಯುತ್ ಬಳಕೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಸದ್ಯ ತುಸು ಹೆಚ್ಚು ಇರುವುದು ಗಮನಾರ್ಹ.
Related Articles
Advertisement
ಉಷ್ಣ ವಿದ್ಯುತ್ ಉತ್ಪಾದನೆ ಕಡಿತ: ರಾಜ್ಯದಲ್ಲಿ ಒಟ್ಟಾರೆ ವಿದ್ಯುತ್ ಬೇಡಿಕೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಉಷ್ಣ ವಿದ್ಯುತ್ ಉತ್ಪಾದನೆಯೂ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬಳ್ಳಾರಿಯ ಬಿಟಿಪಿಎಸ್ ಹಾಗೂ ವೈಟಿಪಿಎಸ್ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ. ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮೂರು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, ಬೇಡಿಕೆಗೆ ಅನುಗುಣವಾಗಿ 700- 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಒಟ್ಟಾರೆ ಉತ್ತಮ ಮಳೆಯಿಂದಾಗಿ ವಿದ್ಯುತ್ ಬೇಡಿಕೆ ತಗ್ಗಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಒತ್ತಡ ತಗ್ಗಿದೆ. ಇದರಿಂದಾಗಿ ಸದ್ಯ 25 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಶೇಖರಣೆಯಾಗಿದ್ದು, ರಾಜ್ಯವನ್ನು ಬಾಧಿಸುತ್ತಿದ್ದ ಕಲ್ಲಿದ್ದಲು ಕೊರತೆ ಸಮಸ್ಯೆ ಸದ್ಯ ನಿವಾರಣೆಯಾದಂತಾಗಿದೆ.
ಬೇಡಿಕೆ ಇಳಿಕೆ: ರಾಜ್ಯದಲ್ಲಿ ಸದ್ಯ ಸರಾಸರಿ ವಿದ್ಯುತ್ ಬೇಡಿಕೆ 2,500ದಿಂದ 3,000 ಮೆಗಾವ್ಯಾಟ್‌ನಷ್ಟು ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ದಾಖಲೆ ಪ್ರಮಾಣದ ಬೇಡಿಕೆಯಷ್ಟು ವಿದ್ಯುತ್ ಪೂರೈಸಲಾಗಿದೆ. ಹಾಗಾಗಿ, ಬೇಡಿಕೆಯಷ್ಟು ವಿದ್ಯುತ್ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಕೆಪಿಟಿಸಿಎಲ್ ನಿರ್ದೇಶಕ (ತಾಂತ್ರಿಕ) ಕೆ.ವಿ.ಶಿವಕುಮಾರ್ ತಿಳಿಸಿದ್ದಾರೆ.
ಕೃಷಿ ಪಂಪ್‌ಸೆಟ್‌ನ ವಿದ್ಯುತ್ ಬಳಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಿದೆ. ಸದ್ಯ ಬೇಡಿಕೆ ಸರಾಸರಿ 4,000 ಮೆಗಾವ್ಯಾಟ್‌ನಷ್ಟಿದ್ದು, 1000 ಮೆಗಾವ್ಯಾಟ್‌ನಷ್ಟು ಬೇಡಿಕೆ ತಗ್ಗಿದೆ. ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಎಚ್ಟಿ ವಿದ್ಯುತ್ ಬಳಕೆ ಪ್ರಮಾಣ ತುಸು ಹೆಚ್ಚು ಇದೆ.
-ಸಿ. ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
-ಸಿ. ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
ಜಲವಿದ್ಯುತ್ ಘಟಕವಿರುವ ಕೆಲ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸಲಾಗುತ್ತಿದ್ದು, ಜಲವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಬೇಡಿಕೆ ತಗ್ಗಿರುವುದರಿಂದ ಮೂರು ಉಷ್ಣ ಸ್ಥಾವರಗಳಲ್ಲಿನ ಒಟ್ಟು 13 ಘಟಕಗಳ ಪೈಕಿ ಆರ್‌ಟಿಪಿಎಸ್‌ನ ಮೂರು ಘಟಕವಷ್ಟೇ ಕಾರ್ಯ ನಿರ್ವಹಿಸುತ್ತಿವೆ. 25 ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ.
-ಪೊನ್ನುರಾಜ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ
-ಪೊನ್ನುರಾಜ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ
-ಎಂ. ಕೀರ್ತಿಪ್ರಸಾದ್