Advertisement

ಬಿಟ್ಟು ಬಿಟ್ಟು ಸುರಿವ ಮಳೆ; ವೈರಲ್‌ ಜ್ವರದ ಆತಂಕ

03:25 AM Jul 07, 2020 | Sriram |

ವಿಶೇಷ ವರದಿ-  ಮಹಾನಗರ: ಕರಾವಳಿಯಲ್ಲಿ ಮಳೆ ಬಿರುಸಾಗಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿದೆ. ಇದರ ಪರಿಣಾಮ ಸಾಮಾನ್ಯ ಶೀತ ಜ್ವರ ಸೇರಿದಂತೆ ವೈರಲ್‌ ಜ್ವರ ಹೆಚ್ಚಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಅಗತ್ಯ. ಜಿಲ್ಲಾಡಳಿತದ ಮಾಹಿತಿಯಂತೆ ಕಳೆದ ಮೂರು ತಿಂಗಳಿನಲ್ಲಿ 7,291 ಮಂದಿ ಫೀವರ್‌ ಕ್ಲಿನಿಕ್‌ಗಳಲ್ಲಿ ಜ್ವರ ತಪಾಸಣೆ ಮಾಡಿಸಿಕೊಂಡಿದ್ದಾರೆ.

Advertisement

ಸಾಮಾನ್ಯ ಜ್ವರ, ತಲೆನೋವು ಬಾಧಿಸಿದರೂ ಅವುಗಳು ಕೋವಿಡ್ ಲಕ್ಷಣವೂ ಆಗಿರುವುದರಿಂದ ಇತ್ತೀಚೆಗೆ ಮೆಡಿಕಲ್‌ ಅಥವಾ ಸಮೀಪದ ಕ್ಲಿನಿಕ್‌ಗಳಲ್ಲಿ ಔಷಧ ದೊರೆಯುವುದಿಲ್ಲ. ಜ್ವರ ತಪಾಸಣೆಗೆಂದು ಜಿಲ್ಲೆಯ 13 ಕಡೆಗಳಲ್ಲಿ ಫೀವರ್‌ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ.

ಮೋಡ, ಬಿಸಿಲಿನ ನಡುವೆ ಬಿಟ್ಟು ಬಿಟ್ಟು ಮಳೆ ಸುರಿದ ಕಾರಣ ವೈರಲ್‌ ಜ್ವರ ಹರಡುತ್ತಿದೆ. ಈ ಬಗ್ಗೆ ಆತಂಕ ಅನಗತ್ಯ. ಆದರೆ ನಿರ್ಲಕ್ಷ್ಯ ಸಲ್ಲದು. ಲಕ್ಷಣ ಕಾಣಿಸಿಕೊಂಡ ಕೂಡಲೇ ಫೀವರ್‌ ಕ್ಲಿನಿಕ್‌ಗೆ ತೆರಳಿ ಸೂಕ್ತ ಔಷಧ ಪಡೆದುಕೊಳ್ಳಬೇಕು.

ನಿರ್ಲಕ್ಷ್ಯ ಮಾಡದಿರಿ
ಬಿಟ್ಟು ಬಿಟ್ಟು ಮಳೆ ಬರುವುದರಿಂದ ಮಳೆ ನೀರು ಅಲ್ಲಲ್ಲಿ ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತದೆ. ಇದರಿಂದ ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ವೈದ್ಯ ಡಾ| ಸಚ್ಚಿದಾನಂದ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಯಾವುದೇ ರೀತಿಯ ಜ್ವರ ಬಂದರೂ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಂಕ್ರಾಮಿಕ ರೋಗದ ಬಗ್ಗೆಯೂ ಎಚ್ಚರದಿಂದಿರಿ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ’ ಎಂದು ಹೇಳಿದ್ದಾರೆ.

145 ಡೆಂಗ್ಯೂ ಪ್ರಕರಣ
ಕೋವಿಡ್ ನಡುವೆಯೇ ಡೆಂಗ್ಯೂ ಕೂಡ ಅಸ್ತಿತ್ವವನ್ನು ತೋರಿಸುತ್ತಿದೆ. ಜಿಲ್ಲೆಯಲ್ಲಿ ಸದ್ಯ 145 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಭಾಗದಲ್ಲೇ ಡೆಂಗ್ಯೂ ಪ್ರಕರಣಗಳು ಅಧಿಕ. ಪುತ್ತೂರಿನ ಬೆಟ್ಟಂಪಾಡಿ, ಪಾಣಾಜೆ ಸುತ್ತಮುತ್ತ ಅತ್ಯಧಿಕ ಪ್ರಕರಣಗಳಿವೆ ಎಂದು ಜಿಲ್ಲಾ ಮಲೇರಿಯಾ, ಡೆಂಗ್ಯೂ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ತಿಳಿಸಿದ್ದಾರೆ.

Advertisement

13 ಫೀವರ್‌ ಕ್ಲಿನಿಕ್‌ಗಳು
ಜಿಲ್ಲೆಯ 13 ಕಡೆಗಳಲ್ಲಿ ತೆರೆಯಲಾದ ಫೀವರ್‌ ಕ್ಲಿನಿಕ್‌ಗಳ ವಿವರ ಇಂತಿದೆ: ಎ.ಜೆ. ಮೆಡಿಕಲ್‌ ಕಾಲೇಜು ಕುಂಟಿಕಾನ, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಕಂಕನಾಡಿ, ಕೆಎಂಸಿ ಅತ್ತಾವರ, ಯೇನಪೊಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಶ್ರೀನಿವಾಸ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮುಕ್ಕ, ಕೆ.ಎಸ್‌. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಕಣಚೂರು ಆಸ್ಪತ್ರೆ ಮುಡಿಪು, ವೆನ್ಲಾಕ್‌ ಜಿಲ್ಲಾಸ್ಪತ್ರೆ ಹಂಪನಕಟ್ಟೆ, ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಪುತ್ತೂರು ಸರಕಾರಿ ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಸುಳ್ಯ ಕೆವಿಜಿ ಆಸ್ಪತ್ರೆ ಮತ್ತು ಸುಳ್ಯ ಸಮುದಾಯ ಆರೋಗ್ಯ ಕೇಂದ್ರ.

 ಸೂಕ್ತ ಮುನ್ನೆಚ್ಚರಿಕೆ
ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಜತೆಗೆ ಮಲೇರಿಯಾ, ಡೆಂಗ್ಯೂ ವ್ಯಾಪಿಸುತ್ತಿದ್ದು, ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿರುವ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳಗಳಲ್ಲಿ ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
– ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next