Advertisement
ಕಾರ ಹುಣ್ಣಿಮೆಗೆ ಮಲೆನಾಡಿನ ರೈತರು ತಮ್ಮ ಭತ್ತದ ಹೊಲದಲ್ಲಿ ಮಣ್ಣಿನ ಗಡಗಿ(ಬೆಚ್ಚು) ಇಟ್ಟು ಭೂ ನಮನ ಸಲ್ಲಿಸಬೇಕಿತ್ತು. ಇನ್ನು ಕರಿಭೂಮಿಯ ಬೆಳವಲದವರ ಹೊಲದಲ್ಲಿ ಶೇಂಗಾ, ಉದ್ದು, ಹೆಸರು, ಆಲುಗಡ್ಡೆ, ಜೋಳ ಸೇರಿ ಎಂಟಕ್ಕೂ ಹೆಚ್ಚು ಬೆಳೆಗಳು ರಂಗೋಲಿ ಹಾಕಿದಂತೆ ಮೊಳಕೆಯೊಡೆಯಬೇಕಿತ್ತು. ಆದರೆ ಎಲ್ಲವೂ ಮಳೆರಾಯನ ಅವಕೃಪೆಯಾಗಿ ಕಾರ ಹುಣ್ಣಿಮೆ ಮುಗಿದು ಮಣ್ಣೆತ್ತಿನ ಅಮಾವಾಸ್ಯೆ ಸಮೀಪಿಸಿದ್ದು, ಇನ್ನು ಮಳೆಯಾದರೂ ರೈತರು ಹಿಡಿ ಕಾಳನ್ನು ಕೂಡ ಹೊಲಗಳಲ್ಲಿ ಹಾಕುವುದಿಲ್ಲ. ಹೀಗಾಗಿ ಈ ವರ್ಷದ ಮುಂಗಾರಿ ಬೆಳೆ ಕಥೆ ಹೆಚ್ಚು ಕಡಿಮೆ ಇಲ್ಲಿಗೆ ಮುಗಿದಂತೆಯೇ.
Related Articles
Advertisement
ಈ ವರೆಗೂ ಪಶ್ಚಿಮಘಟ್ಟದ ಸೆರಗಿನುದ್ದಕ್ಕೂ ಉತ್ತಮ ಮಳೆಯಾಗುತ್ತಿದ್ದರಿಂದ ಇಲ್ಲಿ ದೇಶಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷದಿಂದ ಇಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಬಯಲು ಸೀಮೆಯಲ್ಲಿ ಕಡಿಮೆ ಮಳೆ ಆಧಾರಿತವಾಗಿ ಬೆಳೆಯಲಾಗುತ್ತಿದ್ದ ಸೋಯಾ ಅವರೆ ಮತ್ತು ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ವರ್ಷ ಕೂಡ ಜಿಲ್ಲೆಯಲ್ಲಿ ಈ ವರೆಗೂ ಬಿತ್ತನೆಯಾದ ಬೆಳೆಗಳ ಪೈಕಿ ಶೇ.40 ಬರೀ ಸೋಯಾ ಮತ್ತು ಗೋವಿನಜೋಳವೇ ಬಿತ್ತನೆಯಾಗಿದೆ. ಧಾರವಾಡ, ಕಲಘಟಗಿ ತಾಲೂಕಿನಲ್ಲಿ ದೇಶಿ ಭತ್ತಕ್ಕೆ ಪರ್ಯಾಯವಾಗಿ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೋಯಾ ಮತ್ತು ಗೋವಿನಜೋಳದ ಬೀಜ ಬಿತ್ತನೆ ಮಾಡಿದ್ದಾರೆ. ಕಡಿಮೆ ಮಳೆ ಮತ್ತು ಅತೀ ಬೇಗವಾಗಿ ಬೆಳೆದು ನಿಲ್ಲುವ ದೊಡಗ್ಯಾ, ಚಂಪಾಕಲಿ ಮತ್ತು ಸಾಳಿ ಭತ್ತದ ತಳಿಯನ್ನೇ ರೈತರು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿದರೂ ಮಳೆ ಕೊರತೆ ಎದುರಾಗಿದ್ದರಿಂದ ಆ ಬೆಳೆಗಳು ಸರಿಯಾಗಿ ಹುಟ್ಟಿಲ್ಲ.
ಜಾನುವಾರು ಮೇವು ತಲೆನೋವು: ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮುಂಗಾರು ವಿಳಂಬ ಜಾನುವಾರುಗಳಿಗೆ ಮೇವಿನ ಕೊರತೆಯ ಆತಂಕವನ್ನುಂಟು ಮಾಡಿದೆ. ರೈತರು ಈಗಾಗಲೇ ತಮ್ಮ ಜಾನುವಾರುಗಳನ್ನು ರಸ್ತೆ, ಹೊಲದ ಬದುಗಳಲ್ಲಿ ಮೇಯಿಸುತ್ತಿದ್ದಾರೆ. ಮುಂಗಾರಿನಲ್ಲಿ ಭತ್ತ, ಸೋಯಾ ಅವರೆ, ಶೇಂಗಾ ಹೊಟ್ಟು, ಜಾನುವಾರುಗಳಿಗೆ ಉತ್ತಮ ಮೇವಾಗುತ್ತದೆ. ಆದರೆ ಮುಂಗಾರು ಕೈ ಕೊಟ್ಟರೆ ರೈತರಿಗೆ ಮೇವಿನ ಕೊರತೆ ಉಂಟಾಗಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆರು ಕಡೆ ಮೇವು ಬ್ಯಾಂಕ್ ಇದ್ದು ಇನ್ನಷ್ಟು ಮೇವು ಬ್ಯಾಂಕ್ ಹೆಚ್ಚಿಸುವ ಅನಿವಾರ್ಯತೆ ಜಿಲ್ಲಾಡಳಿತದ ಮುಂದಿದೆ.
•ಬಸವರಾಜ ಹೊಂಗಲ್