ಬೆಂಗಳೂರು: ನಗರದಲ್ಲಿ ವಾರದ ಮಟ್ಟಿಗೆ ಬಿಡುವು ನೀಡಿದ್ದ ಮಳೆ ಭಾನುವಾರ ಮತ್ತೆ ಶುರುವಾಗಿದ್ದು, ಇನ್ನೂ ಎರಡು ದಿನಗಳು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಬೆಳಗಿನ ಜಾವದಲ್ಲೇ ನಗರದಾದ್ಯಂತ ಆಗಮಿಸಿದ ಜಿಟಿಜಿಟಿ ಮಳೆ, ವೀಕೆಂಡ್‌ಗೆ ಸೂರ್ಯನಿಗೂ ವಿಶ್ರಾಂತಿ ನೀಡಿತು. ಸುಮಾರು ಒಂದು ತಾಸು ಸುರಿಯಿತು. ಆಗಾಗ್ಗೆ ವಿರಾಮ ನೀಡಿದಂತೆ ಕಂಡುಬಂತು. ಆದರೆ, ಕೆಲವೇ ಹೊತ್ತಿನಲ್ಲಿ ಮತ್ತೆ ಧಾರಾಕಾರವಾಗಿ ಸುರಿಯಿತು. ಸಂಜೆವರೆಗೂ ಈ ಸ್ಥಿತಿ ಮುಂದುವರಿಯಿತು.
ಮಳೆಯಿಂದ ವಾರಾಂತ್ಯದ ವೀಕೆಂಡ್ ಮಂಕಾಗಿತ್ತು. ದಿನದ ಆರಂಭ ತಡವಾಗಿ ಆಯಿತು. ಮಧ್ಯಾಹ್ನದವರೆಗೂ ಹೊರಬರಲಾಗದೆ, ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಮನೆಯೊಳಗೂ ಕುಳಿತುಕೊಳ್ಳಲಾಗದೆ ಜನ ಚಡಪಡಿಸಿದರು. ಇನ್ನು ಕೆಲವರು ರಸ್ತೆಗಿಳಿದವರಿಗೆ ಸಂಚಾರದಟ್ಟಣೆ ಎದುರಾಯಿತು. ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು.
ಈ ಮಧ್ಯೆ ಮಳೆ ನಗರದ ತಗ್ಗುಪ್ರದೇಶಗಳಲ್ಲಿರುವ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತು. ಈ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆ ಅಬ್ಬರಕ್ಕೆ ಹತ್ತಾರು ಕಡೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ನಾಲ್ವರು ಬಲಿ ಕೂಡ ಆಗಿದ್ದರು. ವಾರದ ಮಟ್ಟಿಗೆ ಬಿಡುವು ನೀಡಿದ್ದರಿಂದ ತುಸು ನಿರಾಳವಾಗಿದ್ದರು. ಇನ್ನು ಮಳೆಯಿಂದ ಯಾವುದೇ ಅನಾಹುತಗಳು, ನೀರು ನಿಂತ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಸ್ಪಷ್ಟಪಡಿಸಿದೆ.
ಇನ್ನೂ ಎರಡು ದಿನ ಮಳೆ?
ಈ ನಡುವೆ ನಗರವು ಸೇರಿದಂತೆ ರಾಜ್ಯಾದ್ಯಂತ ಸೋಮವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕೊಂಕಣದಿಂದ ಕೇರಳದ ನಡುವೆ ಆಫ್ಶೋರ್ ಟ್ರಫ್ ಉಂಟಾಗಿದ್ದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆ ಆಗಲಿದೆ. ಅದೇ ರೀತಿ, ಕರಾವಳಿಯಲ್ಲಿ ಕೂಡ ಮೂರು ದಿನ ಮತ್ತು ಉತ್ತರ ಒಳನಾಡಿನಲ್ಲಿ ಒಂದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸುಂದರ್ ಎಂ. ಮೇತ್ರಿ ಮಾಹಿತಿ ನೀಡಿದ್ದಾರೆ.