ಬೆಂಗಳೂರು: ನಗರದಲ್ಲಿ ಸೋಮವಾರ ಮತ್ತೆ ಮಳೆ ಅಬ್ಬರಿಸಿದೆ. ಪರಿಣಾಮ ಬಿಸಿಲಿನಿಂದ ಕಂಗೆಟ್ಟಿದ್ದ ನಗರ ಸಂಜೆ ಹೊತ್ತಿಗೆ “ಕೂಲ್’ ಆಯಿತು. ಕಳೆದ ಮೂರ್‍ನಾಲ್ಕು ದಿನಗಳಿಗೆ ಹೋಲಿಸಿದರೆ, ಸಂಜೆ ಮಳೆಯ ಆರ್ಭಟ ತುಸು ಜೋರಾಗಿತ್ತು. ಅಲ್ಲದೆ, ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ ಮಳೆ, ಸೋಮವಾರ ನಗರದ ಬಹುತೇಕ ಪ್ರದೇಶಗಳಲ್ಲಿ ತಂಪೆರೆಯಿತು.
ಈ ಮಧ್ಯೆ ಮಾರ್ಚ್ ಅಂತ್ಯಕ್ಕೆ ವಾಡಿಕೆಗಿಂತ ಐದು ಪಟ್ಟು ಹೆಚ್ಚು ಮಳೆಯಾಗಿದೆ. ನಗರದ ವಾಡಿಕೆ ಮಳೆ 9.4 ಮಿ.ಮೀ. ಆದರೆ, ಬಿದ್ದದ್ದು 47.6 ಮಿ.ಮೀ. ಈ ನಡುವೆ ಸೋಮವಾರ ಸಂಜೆ ಗರಿಷ್ಠ 31 ಮಿ.ಮೀ. ಮಳೆ ಬಿದ್ದಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?: ಅದರಲ್ಲೂ ಪೂರ್ವ ಮತ್ತು ಪಶ್ಚಿಮದಲ್ಲಿ ಮಳೆ ಪ್ರಮಾಣ ಅಧಿಕವಾಗಿತ್ತು. ಈ ಪೈಕಿ ಮಂಡೂರಿನಲ್ಲಿ 31 ಮಿ.ಮೀ., ಎಚ್‌ಎಸ್‌ಆರ್ ಲೇಔಟ್‌ನಲ್ಲಿ 24, ಕುಮಾರಸ್ವಾಮಿ ಲೇಔಟ್ 21.5, ಬಸವನಗುಡಿ 17, ಲಾಲ್‌ಬಾಗ್ 7, ಬೊಮ್ಮನಹಳ್ಳಿ 18, ಹಾಲನಾಯಕನಹಳ್ಳಿ 12, ಕಗ್ಗಲೀಪುರ 14.5, ಕೆಂಗೇರಿ 4.5, ನಾಗರಬಾವಿ 8.5, ಕೋರಮಂಗಲ 21, ಬಿದರಹಳ್ಳಿ 27, ಕೆ.ಆರ್. ಪುರ 1.5, ರಾಜರಾಜೇಶ್ವರಿ ನಗರ 1.5, ಸೊನ್ನೇಹಳ್ಳಿ 15, ಚಿಕ್ಕಬಾಣಾವರ 3.5 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಮಳೆಯಿಂದ ಎರಡು ಮರ ಧರೆಗೆ: ನಗರದಲ್ಲಿ ಸೋಮವಾರ ಸಂಜೆ ಸುರಿದ ದಿಢೀರ್ ಮಳೆಯಿಂದಾಗಿ ಎರಡು ಮರಗಳು ಧರೆಗುರುಳಿದಿದ್ದು, ಮಳೆ ನೀರು ರಸ್ತೆಗಳಲ್ಲಿ ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಯಿತು.
ಸೋಮವಾರ ಸಂಜೆ 4 ಸುಮಾರಿಗೆ ಜೋರಾದ ಗಾಳಿಯೊಂದಿಗೆ ಸುರಿದ ಮಳೆಯಿಂದಾಗ ಸಹಕಾರನಗರ ಹಾಗೂ ಸುಲ್ತಾನ್ ಪಾಳ್ಯದಲ್ಲಿ ಮರಗಳು ಉರುಳಿವೆ. ಕೂಡಲೇ ಸ್ಥಳಕ್ಕೆ ತೆರಳಿದ ಪಾಲಿಕೆಯ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.
ಕಾವೇರಿ ಜಂಕ್ಷನ್ ಅಂಡರ್‌ಪಾಸ್, ಸ್ಯಾಂಕಿ ರಸ್ತೆ ಅಂಡರ್‌ಪಾಸ್, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಚಾಲುಕ್ಯ ವೃತ್ತ ಜಂಕ್ಷನ್ ಸೇರಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.