ಉಡುಪಿ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ ಅಕ್ಷರಶಃ ಬೆಚ್ಚಿಬಿದ್ದಿದೆ. ಕಳೆದೊಂದು ದಶಕದಿಂದ ನಗರದಲ್ಲಿ ಇಂತಹ ಮಳೆಯನ್ನು ಕಂಡುಕೇಳಿರದಿದ್ದ ಜನತೆ ಮನೆಯಿಂದ ಹೊರಬರಲಾರದೆ ಪರದಾಡುವಂತಾಗಿದೆ. ಉತ್ತರಾ ನಕ್ಷತ್ರದ ಈ ಭಾರಿ ಮಳೆಗೆ ಉಡುಪಿ ನಗರ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.
ಶನಿವಾರ ಬೆಳಿಗ್ಗೆಯಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಉಡುಪಿ ಗುಂಡಿಬೈಲು, ಅಂಬಲಪಾಡಿ, ಮಠದ ಬೆಟ್ಟು, ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಪ್ರದೇಶದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ.
ಇದನ್ನೂ ಓದಿ: ಮಲ್ಪೆ: 3 ಬೋಟ್ ಮುಳುಗಡೆ, ಕಲ್ಲುಬಂಡೆಯ ಆಶ್ರಯ ಪಡೆದು ದಡ ಸೇರಿದ ಮೀನುಗಾರರು
ಭೀಕರ ಮಳೆಯ ಪರಿಣಾಮ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ, ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ನಗರದ ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಗಳು ದೋಣಿಯಲ್ಲಿ ರಕ್ಷಣೆ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಲ್ಸಂಕ ಬೈಲಕೆರೆ ಬಳಿ ಕ್ರೇನ್ ಮೂಲಕ ಅಪಾಯದಲ್ಲಿದ್ದವರ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ
ಭಾರಿಯ ಮಳೆಯ ಪರಿಣಾಮ ಸ್ವರ್ಣ, ಸೀತನದಿ ಉಕ್ಕಿ ಹರಿಯುತ್ತಿದೆ. ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಪುತ್ತಿಗೆ ಭಾಗದಲ್ಲಿ ಕೃತಕ ನೆರೆಯಿಂದಾಗಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಮನೆಯೊಳಗೆ ನೀರು ನುಗ್ಗಿ ಗೋಡೆ ಕುಸಿದ ಘಟನೆ ಸಂಭವಿಸಿದೆ
ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.