ಎಂದಿಗೂ ನಾನು ಮರೆಯಲಾಗದ ಮಳೆ ಎಂದ ಕ್ಷಣ ನೆನಪಾಗುವ ನೆನಪೊಂದು ಹೇಳ ಹೊರಟಿರುವೆ. ನನ್ನ ಊರು ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಕೊಡಗಿನ ಗಡಿ. ಎಲ್ಲೆಂದರಲ್ಲಿ ಹಸುರೇ ತುಂಬಿರುವ ಮಲೆನಾಡಿನವನು. ನಿಮ್ಮ ಮನದಲ್ಲಿ ಈಗೊಂದು ಮಳೆಯ ಬಗ್ಗೆ ಸವಿಯಾದ ಭಾವ ಮೂಡಿರುತ್ತದೆ. ಏಕೆಂದರೆ ಮಲೆನಾಡಿನ ಸೊಬಗಿಗು ಮಳೆಗೂ ಇರುವ ಅವಿನಾಭಾವ ಸಂಬಂಧವೇ ಅಂತಹದು.
ನನ್ನ ಪಾಲಿಗೆ ಮಳೆಯೆಂದರೆ ಗದ್ದೆ ಮತ್ತು ತೋಟದ ಕೆಲಸಗಳ ಚುರುಕಿನಿಂದ ಮಾಡು ಎಂಬ ಮುನ್ಸೂಚನೆ, ಮತ್ತು ರೈತನ ಬಾಳಿಗೆ ಭರವಸೆಯ ಭಾವವೇ ಮಳೆ ಎಂದು ನನ್ನಜ್ಜನಿಂದ ಕೇಳಿ ತಿಳಿದಿದ್ದೆ. ಬೇಸಗೆಯಲ್ಲಿ ಮಳೆ ಬಂತೆಂದರೆ ಎಲ್ಲಿಲ್ಲದ ಚುರುಕು. ಕೃಷಿ ಮೂಲದ ಕುಟುಂಬವಾದ್ದರಿಂದ ತಂದೆಯು ಕೂಡ ಕೃಷಿಯನ್ನು ಅವಲಂಬಿಸಿದ್ದರು. ನನಗೂ ಬೇಸಗೆಯಲ್ಲಿ ಕಾಲೇಜಿಗೆ ರಜೆ ಇರುತ್ತಿತ್ತು. ಹಾಗಾಗಿ ನಾನು ಕೂಡ ತಂದೆಗೆ ಸಹಾಯ ಮಾಡುತ್ತಿದ್ದೆ.
ಹಾಗೆ ಬೇಸಗೆ ರಜೆಯಲ್ಲಿ ಮೊಮ್ಮಕ್ಕಳು ತಮ್ಮ ಅಜ್ಜಿಯ ಮನೆಗೆ ಹೋಗುವುದು ಒಂದು ರೂಢಿ. ಹಾಗೆಯೇ ಬೆಂಗಳೂರಲ್ಲಿ ಹುಟ್ಟಿ ಬೆಳೆದಿದ್ದ ನನ್ನ ಅತ್ತೆಯ ಮಗಳು ಅಜ್ಜಿ ಮನೆಯ ಜಾಡ ಹಿಡಿದು ಬಂದಿದ್ದಳು. ತುಂಬಾ ವರ್ಷಗಳ ಅನಂತರ ಬಂದವಳಿಗೆ ಮಲೆನಾಡಿನ ಪ್ರತಿಯೊಂದು ಅಣುವು ವಿಸ್ಮಯದಂತೆ ಗೋಚರವಾಗುತ್ತಿತ್ತು.
ನಾನು ಹಗಲೆಲ್ಲ ತಂದೆಯೊಂದಿಗೆ ತೋಟ ಮತ್ತು ಗದ್ದೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದೆ. ಸಂಜೆಯಾದರೆ ನನ್ನ ಅತ್ತೆಯ ಮಗಳು ಮತ್ತು ಅಕ್ಕಪಕ್ಕದ ಮನೆಯ ಚಿಕ್ಕಮಕ್ಕಳು ಸೇರಿಕೊಂಡು ಆಟವಾಡುವುದು. ಅದೊಂದು ದಿನ ಆಟವಾಡುವಾಗಲೇ ಇದ್ದಕ್ಕಿದ್ದಂತೆ. ಎಲ್ಲಿಲ್ಲದ ಜೋರು ಗಾಳಿ. ಕತ್ತಲನ್ನು ಮೀರಿಸುವ ಕಾರ್ಮೋಡ. ಇದೆಲ್ಲ ಮಳೆಯ ಮುನ್ಸೂಚನೆ ಎಂದು ಅರಿತು ನಾನು ಮತ್ತು ಮಕ್ಕಳೆಲ್ಲ ಓಡಿ ಹೋಗಿ ಸೂರಿನಡಿ ಬಂದಿಯಾದೆವು. ಆದರೆ ಅವಳು ಮಾತ್ರ ನಿಂತ ಜಾಗದಿಂದ ಅಲುಗಾಡದೆ ಅಲ್ಲೇ ಮಳೆಯ ಸ್ವಾಗತಿಸಲು ನಿಂತಿದ್ದಳು. ಆದರೆ ಅವಳಿಗೆ ಮಳೆಯಲ್ಲಿ ನೆನೆದ ಅನಂತರ ಆಗುವ ಪರಿಣಾಮದ ಬಗ್ಗೆ ಅರಿವಿಲ್ಲ. ನಿಂತು ನೋಡುತ್ತಿದ್ದವರಾರು ಅವಳಿಗೆ ಅರಿವು ಮೂಡಿಸಲಿಲ್ಲ. ಎಣ್ಣೆಯಿಲ್ಲದ ದೀಪಕ್ಕೆ ಬತ್ತಿ ಇಟ್ಟಿ ಬತ್ತಿಗೆ ಬೆಂಕಿ ಹಚ್ಚಿ ಮಜಾ ನೋಡುವವರೇ ಎಲ್ಲರೂ ಎಂದು ನಾನೇ ಮನದೊಳಗೆ ಗೊಣಗಿಕೊಳ್ಳುತ್ತಾ, ಅವಳ ಕೈ ಹಿಡಿದು ಸೂರಿನಡೆ ನಡೆ ಎಂದು ಕೈ ಎಳೆದೆ. ಆದರೆ ಅವಳು ಹಿಡಿದ ಕೈಬಿಡಿಸಿ ನನ್ನ ಕೈ ಹಿಡಿದು “ಇಲ್ಲಿ ಕೇಳು ಮಳೆಯು ಇಳೆಯ ಮುಟ್ಟುವ ಮುನ್ನ ನಾವು ಮಳೆಯ ಮುಟ್ಟುವ ನಿಲ್ಲು’ ಎಂದಳು. ನನಗೆ ಈ ಮಳೆಯ ಮುಟ್ಟುವುದು ಹೊಸದೇನು ಆಗಿರಲಿಲ್ಲ. ಆದರೆ ಅವಳು ಮನೆಯಿಂದ ಆಚೆ ಬಂದು ಮಳೆಯಲ್ಲಿ ನಿಂತು ಮಳೆಯ ನೋಡಿದ್ದು ತೀರ ಕಡಿಮೆ. ಹಾಗೆ ಅನಿವಾರ್ಯವೆಂಬಂತೆ ಜತೆ ನಿಂತೆ.
ಮಳೆಹನಿಯೊಂದು ಕಾರ್ಮೋಡದ ಕಣ್ಗಾವಲ ತಪ್ಪಿಸಿಕೊಂಡು ಬಂದು ಇವಳ ಮೂಗಿನ ಮೇಲೆ ಬಿದ್ದು ಬಾಯಿಯೊಳಗೆ ಜಾರಿತು. ಅವಳು ಆಗ ನವಿಲಿನಂತೆ ಕುಣಿಯಲು ಆರಂಭಿಸಿದ್ದಳು, ಇವಳ ಕುಣಿತಕ್ಕೆ ಮಳೆಯು ಕೂಡ ತಾಳ ಹಾಕುತ್ತಿತ್ತು. ವರುಣ ನನ್ನ ಕೋಪಕ್ಕೆ ಹೆದರಿ ಹೋದಂತೆ ಮಳೆಯು ನಿಂತುಹೋಯಿತು. ಆದರೆ ಹೂವಿನ ಜತೆ ನಾರು ಕೂಡ ಸ್ವರ್ಗ ಸೇರಿದಂತೆ ಅವಳೊಟ್ಟಿಗೆ ಸೇರಿ ನಾನು ಕೂಡ ಪೂರ್ಣ ಚಂಡಿಯಾಗಿದ್ದೆ.
ಮಳೆ ಬಂದು ಹೋದ ಮೇಲೆ ಮಲೆನಾಡಿನ ಸೊಬಗು ವರ್ಣಿಸಲು ಪದ ಪುಂಜವೇ ಸಾಲದು. ಹಾಗೆ ಅಲ್ಲಿಯೇ ಇದ್ದ ಹೂವಿನ ತುದಿಯಿಂದ ತೊಟ್ಟಿಕ್ಕುವ ನೀರ ಹನಿಗೆ ಮಯ್ಯೊಡಿª ನಿಂತಿದ್ದಳು. ಅದನ್ನು ಸವಿದ ಆ ಕ್ಷಣವೇ ಆ ಗಿಡವ ಜೋರಾಗಿ ಅಲುಗಾಡಿಸಿ ಹನಿಯುವ ನೀರಿಗೆ ಮುಖವೊಡ್ಡಿ ನಿಂತು. ನನ್ನ ನೋಡಿ ನಗುವ ಬೀರಿದಳು. ಮಳೆಯೆಂದರೆ ಮಳೆಯಷ್ಟೇ ಅಂದುಕೊಂಡಿದ್ದ ನನ್ನ ಮನದ ಭಾವನೆಗಳು ಬದಲಾದವು.
ಈ ಬೇಸಗೆಯ ಮಳೆಯೇ ಸಾಕ್ಷಿಯಾಯಿತು. ಅವಳ ಮಿತಿ ಇಲ್ಲದ ನಗುವಿಗೆ ಅಂಜಿಕೆ ಇಲ್ಲದ ನುಡಿಗಳಿಗೆ. ನಾಚಿಕೆ ಇಲ್ಲದ ನಾಟ್ಯಕ್ಕೆ… ಹಾಗೆ ಇದೆ ಮಳೆ ಕಾರಣವಾಯಿತು. ನನ್ನ ನಿದ್ದೆ ಬಾರದ ರಾತ್ರಿಗಳಿಗೆ. ಕನಸಲ್ಲೇ ದಿನ ಸಾಗಿಸುವ ಪರಿಸ್ಥಿತಿಗೆ. ಈ ನೆನಪುಗಳೇ ಎಷ್ಟು ಸುಂದರ. ಎಷ್ಟು ಬಾರಿ ನೆನೆದರೂ ಹೊಸತನದ ಭಾವ. ಹಾಗೆಯೇ ಪ್ರತಿ ಬಾರಿ ಬಂದು ಹೋಗುವ ಬೇಸಗೆ ಮಳೆಯು ಎಲ್ಲರ ಬಾಳಿಗೆ ಒಂದು ಹೊಸ ಉಲ್ಲಾಸ ತುಂಬಿಸುತ್ತದೆ. ಈ ಬಾರಿ ನನ್ನದೊಂದೇ ಬೇಡಿಕೆ ಬಂದ ಮಳೆಯೇನೋ ಒಳ್ಳೆಯದೇ ಮಾಡಿದೆ ಹೋಗುವಾಗಲೂ ಧರೆಯಿಂದ ಕೊರೊನಾವನ್ನು ಕರೆದೊಯ್ದರೆ ಇನ್ನೂ ಉತ್ತಮ.
-ಕೃತನ್ ವಕ್ಕಲಿಗ ಬೆಂಬಳೂರು
ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು,
ಪುತ್ತೂರು