Advertisement

ಮಳೆ: ತೋಡುಗಳಂತಾದ ಸುಳ್ಯದ ಹಲವು ರಸ್ತೆಗಳು!

10:31 AM Jun 25, 2018 | |

ಸುಳ್ಯ : ಜಡಿ ಮಳೆ ಬೇಡ, ಸಾಧಾರಣ ಮಳೆ ಬಿದ್ದರೂ ಸಾಕು. ಇಲ್ಲಿನ ನಗರ ಮತ್ತು ಗ್ರಾಮಾಂತರ ಸಂಪರ್ಕ ರಸ್ತೆ ಮಳೆಗಾಲದ ತೋಡಾಗಿ ಬದಲಾಗುತ್ತದೆ. ಸಮಸ್ಯೆ ಸರಿಪಡಿಸಿ ಎಂದು ಶಾಸಕ ಎಸ್‌. ಅಂಗಾರ ಅವರು ಸಭೆಯಲ್ಲಿ ತಾಕೀತು ಮಾಡಿದ್ದರೂ ಇಲಾಖಾಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಮಳೆಗಾಲ ಬಂತೆಂದರೆ, ನಗರದ ರಸ್ತೆಯ ಕೆಲವಡೆ ಪಯಸ್ವಿನಿ ನದಿಯ ಹರಿವಿನಂತಾಗುತ್ತದೆ.

Advertisement

ಸೂಚನೆ ನೀಡಿದ್ದರು
ಜೂ. 18ರಂದು ನಡೆದ ಪಾಕೃತಿಕ ವಿಕೋಪ ಸಂಬಂಧಿಸಿದ ಸಭೆಯಲ್ಲಿ ಶಾಸಕ ಎಸ್‌. ಅಂಗಾರ ಅವರು ಚರಂಡಿ ಸರಿಪಡಿ ಸುವಂತೆ ಸೂಚನೆ ನೀಡಿದ್ದರು. ಮನೆ, ವಾಣಿಜ್ಯ ಕಟ್ಟಡಗಳಿಂದ ಹರಿದು ಬರುವ ಮಳೆ ನೀರು ಕೂಡ ರಸ್ತೆ ಸೇರುತ್ತಿದ್ದು, ಸೂಕ್ತ ಚರಂಡಿ ನಿರ್ಮಿಸುವಂತೆ ಪಂಚಾಯತ್‌ ರಾಜ್‌, ಲೋಕೋಪಯೋಗಿ, ಕೆಆರ್‌ಡಿಸಿಎಲ್‌ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಇದಕ್ಕೆ ಸಭೆಯಲ್ಲಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು. ಸಭೆ ಮುಗಿದು ಒಂದು ವಾರ ಕಳೆದಿದೆ. ಚರಂಡಿ ನಿರ್ಮಾಣ ಗಗನ ಕುಸುಮವಾಗಿದೆ.

ಇದರಿಂದ ಸಣ್ಣ ಮಳೆ ಬಂದರೂ, ರಾಜ್ಯ ಹೆದ್ದಾರಿ ಸಹಿತ ಇತರೆ ಸಂಪರ್ಕ ರಸ್ತೆಗಳು ತೋಡಾಗಿ ಪರಿರ್ವತನೆಗೊಳ್ಳುತ್ತಿದೆ. ಮಳೆ ನೀರು ರಸ್ತೆಯಲ್ಲಿ ಸಾಗುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಅದಾಗ್ಯೂ ಇಲಾಖೆಗಳು ಅವ್ಯವಸ್ಥೆಗೂ, ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. 

ರಾಜ್ಯ ಹೆದ್ದಾರಿ ಚಿತ್ರಣ
ಮಾಣಿ-ಮೈಸೂರು ರಸ್ತೆಯ ಸಂಪಾಜೆಯಿಂದ ಕನಕಮಜಲು ಸುಳ್ಯದ ಗಡಿ ತನಕ 10ಕ್ಕಿಂತ ಅಧಿಕ ಕಡೆಗಳಲ್ಲಿ ಮಳೆ ನೀರು ಹರಿಯಲು ಚರಂಡಿಯೇ ಇಲ್ಲ. ಕೆಲವೆಡೆ ಮುಚ್ಚಿ ಹೋಗಿವೆ. ಸಣ್ಣ ಮಳೆ ಬಂದರೂ ರಸ್ತೆಯಲ್ಲೇ ಕೃತಕ ನೆರೆ ಸೃಷ್ಟಿಸುತ್ತಿದೆ. ಕೆಆರ್‌ಡಿಸಿಎಲ್‌ ವ್ಯಾಪ್ತಿಗೆ ಸೇರಿದ ಈ ರಸ್ತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 275 ಆಗಿ ಪರಿವರ್ತನೆಗೊಳ್ಳಬೇಕಿತ್ತು. ಆದರೆ ಚರಂಡಿ, ರಸ್ತೆ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಸುಪರ್ದಿಗೆ ಪಡೆದುಕೊಳ್ಳಲು ಒಪ್ಪಿಲ್ಲ.

ಪೈಚಾರು ಹೊಂಡ-ಗುಂಡಿ
ಪಾಕೃತಿಕ ವಿಕೋಪ ಸಭೆಯ ಮರು ದಿನ ಪೈಚಾರು ಬಳಿ ರಾಜ್ಯ ಹೆದ್ದಾರಿ ಹೊಂಡಕ್ಕೆ ಮರಳು-ಜಲ್ಲಿ ಮಿಶ್ರಣವನ್ನು ಸುರಿಯಲಾಗಿತ್ತು. ಒಂದೆರೆಡು ದಿನ ಅಲ್ಲಿ ಸಮತಟ್ಟಾಗಿತ್ತು. ಈಗ ಮತ್ತೆ ಅದೇ ಹಳೆಯ ರಾಗ. ಇನ್ನಷ್ಟು ಹೊಂಡಗಳು ಬಿದ್ದಿವೆ. ಇಲ್ಲಿ ತಾತ್ಕಾಲಿಕ ಕ್ರಮವೂ ಪರಿಣಾಮಕಾರಿವಾಗಿ ಅನುಷ್ಠಾನಗೊಂಡಿಲ್ಲ ಎಂದು ವಾಹನ ಸವಾರರು ದೂರುತ್ತಾರೆ.

Advertisement

ಪೊಲೀಸ್‌ ಭದ್ರತೆ ಬಳಸಿಕೊಳ್ಳಿ
ಇಕ್ಕೆಲೆಗಳಲ್ಲಿ ಚರಂಡಿ ಇಲ್ಲದಿರುವುದು ಮತ್ತು ಅಕ್ಕ-ಪಕ್ಕದ ಕಟ್ಟಡ, ಮನೆಗಳಿಂದ ಬರುವ ನೀರು ರಸ್ತೆಗೆ ಸೇರುತ್ತಿರುವುದು ರಸ್ತೆ ಹಾಳಾಗಲು ಮುಖ್ಯ ಕಾರಣ. ನಗರ ರಾಜ್ಯ ಹೆದ್ದಾರಿ ಬದಿಗಳಲ್ಲಿ ಭೂ ಒತ್ತುವರಿ ತೆರವುಗೊಳಿಸಿ, ಚರಂಡಿ ನಿರ್ಮಿಸಬೇಕು ಎಂದು ಪಾಕೃತಿಕ ವಿಕೋಪ ಚರ್ಚಾ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅಗತ್ಯ ಬಿದ್ದರೆ ಪೊಲೀಸ್‌ ಭದ್ರತೆ ಪಡೆಯಲು ಶಾಸಕರು ಸೂಚಿಸಿದ್ದರು. ಆದರೆ ಕೆಆರ್‌ಡಿಸಿಎಲ್‌ ಚರಂಡಿ ನಿರ್ಮಾಣಕ್ಕೆ ಮುಂದಾಗಿಲ್ಲ. ಸರಕಾರಿ ಸ್ಥಳದ ಅತಿಕ್ರಮಣವಾಗಿದ್ದರೆ, ಅದನ್ನು ತೆರವುಗೊಳಿಸಿ ಚರಂಡಿ ನಿರ್ಮಿಸಲು ಇಲಾಖೆ ಹಿಂದೇಟು ಹಾಕುತ್ತಿರುವ ಬಗ್ಗೆಯು ಊಹಾಪೋಹ, ಅನುಮಾನ ಹುಟ್ಟಿಕೊಂಡಿವೆ.

ಗ್ರಾಮಾಂತರ ರಸ್ತೆ 
ಬೆಳ್ಳಾರೆ-ಸುಳ್ಯ, ಪಂಜ- ಸುಬ್ರಹ್ಮಣ್ಯ, ಸುಳ್ಯ- ಗುತ್ತಿಗಾರು- ಸುಬ್ರಹ್ಮಣ್ಯ, ಚೊಕ್ಕಾಡಿ ರಸ್ತೆ ಹೀಗೆ ಪ್ರಮುಖ ಸಂಪರ್ಕ ರಸ್ತೆ ಕಥೆಯೂ ರಾಜ್ಯ ಹೆದ್ದಾರಿ ತರಹದ್ದೆ. ಬಹುತೇಕ ಕಡೆ ಚರಂಡಿ ಇಲ್ಲ. ಕೆಲವು ಭಾಗದಲ್ಲಿ ಚರಂಡಿ ಮುಚ್ಚಿ ಕವಲು ರಸ್ತೆ ನಿರ್ಮಿಸಿದ್ದು ಇದೆ. ಮಳೆಗಾಲದ ಪೂರ್ವ ಭಾವಿ ಯಾಗಿ ನಡೆಯುವ ಚರಂಡಿ ದುರಸ್ತಿ ಕಾಟಾಚಾರಕ್ಕೆ ಎನ್ನುವಂತಾಗಿದೆ.ಇದರಿಂದ ಅಪಘಾತ ಹೆಚ್ಚುತ್ತಿದೆ.

ಸಂಚಾರ ಭಯ ಹುಟ್ಟಿಸುತ್ತದೆ
ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ಹೊಂಡಗಳ ಬಗ್ಗೆ ಗಮನಕ್ಕೆ ಬಾರದೇ ಅಪಘಾತಗಳು ಸಂಭವಿಸುತ್ತಿವೆ. ಸಂಜೆಯ ಮೇಲೆ ಮಳೆ ಬಂದರೆ ಲಘು ವಾಹನಗಳು ಸಂಚರಿಸಲು ಸಾಧ್ಯವೇ ಇಲ್ಲ. ಮಳೆಗಾಲದಲ್ಲಿ ಪೂರ್ವಸಿದ್ಧತೆಗೆ ಕ್ರಮ ಕೈಗೊಳ್ಳದ ಕಾರಣ, ರಸ್ತೆ ತೋಡಾಗಿದೆ.
– ಹರ್ಷಿತ್‌ ಸುಳ್ಯ
  ವಾಹನ ಸವಾರ

ಕಿರಣ್‌ ಪ್ರಸಾದ್‌ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next