Advertisement

ಬೆಳೆಗಳಿಗೆ ಕುತ್ತು ತಂದಿಟ್ಟ ಅಕಾಲಿಕ ಮಳೆ ; ಆತಂಕದಲ್ಲಿ ಅನ್ನದಾತರು

04:34 PM Jan 08, 2021 | Team Udayavani |

ಶಿರಸಿ: ಚಳಿ ಬೀಳುವ ಸಂದರ್ಭದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ಭತ್ತಕ್ಕೆ ಜಲ ಸಂಕಷ್ಟ, ಅಡಿಕೆಗೆ ಮುಗ್ಗುವ ಭೀತಿ
ಎದುರಾಗಿದೆ. ಅಕಾಲಿಕವಾಗಿ ಸುರಿದ ಮಳೆ ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಕೆಲವೆಡೆ ಗದ್ದೆಯಲ್ಲಿ ಕೊಯ್ಲು ಮಾಡಿಟ್ಟ ಭತ್ತ ಮಳೆಗೆ ಸಿಲುಕಿ ರೈತರಿಗೆ ಸಂಕಷ್ಟ ತಂದಿಟ್ಟಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಅದರಲ್ಲೂ ಗುರುವಾರ ಬೆಳಗಿನ ಜಾವ ಆಲಿಕಲ್ಲು ಸಹಿತ ಮಳೆ ಬಿದ್ದಿದೆ.

Advertisement

ತಾಲೂಕಿನ ಪೂರ್ವ ಭಾಗದಲ್ಲಿ ಅತಿ ಹೆಚ್ಚು ಭತ್ತದ ಕೃಷಿ ನಡೆಯುತ್ತದೆ. ಆದರೆ ಇಲ್ಲಿನ ಸಾಕಷ್ಟು ಕಡೆಗಳಲ್ಲಿ ಭತ್ತ ಕೊಯ್ಲು ಮಾಡಿ ಗೊಣಬೆ ಹಾಕಲಾಗಿದೆ. ಆದರೆ ವರದಾ ನದಿಯ ದಡದಂಚಿನ ಭಾಶಿ, ಬನವಾಸಿ, ಗುಡ್ನಾಪುರ, ಅಜ್ಜರಣಿ, ತಿಗಣಿ, ಮುತಗುಣಿ ಮುಂತಾದ ಕಡೆಗಳಲ್ಲಿ ಹತ್ತಾರು ಎಕರೆ ಗದ್ದೆಯಲ್ಲಿ ಕೊಯ್ಲು ಮಾಡಿದ ಭತ್ತ ನೆನೆದಿದೆ. ಮಳೆಗಾಲದಲ್ಲಿ ವರದಾ ನದಿ ನೆರೆಯಿಂದ ಭತ್ತದ ಸಸಿಗಳು ಕೊಚ್ಚಿ ಹೋಗಿದ್ದರಿಂದ ಅಂತಹ ಕಡೆಗಳಲ್ಲಿ ಪುನಃ ನಾಟಿ ಮಾಡಿ ಭತ್ತ ಬೆಳೆದಿದ್ದರು.

ಇದನ್ನೂ ಓದಿ:26-11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿ ಗೆ 15 ವರ್ಷದ ಜೈಲು ಶಿಕ್ಷೆ

ಇದೀಗ ಅಂಥ ಕೆಲವು ಕಡೆಗಳಲ್ಲಿ ಕೊಯ್ಲು ಮಾಡಿದ ಸಂದರ್ಭದಲ್ಲಿಯೇ ಮಳೆ ಬಂದು ತೊಂದರೆಯನ್ನುಂಟು ಮಾಡಿದೆ.
ಗುರುವಾರ ಬೆಳಗಿನ ಜಾವ ಸುರಿದ ಆಲಿಕಲ್ಲು ಮಳೆ ಅಂಡಗಿ, ದಾಸನಕೊಪ್ಪ, ಶಿರಸಿ ಪಶ್ಚಿಮ ಭಾಗದಲ್ಲಿ ಕೂಡ ಭತ್ತದ ಬೇಸಾಯಕ್ಕೆ ಉತ್ಸಾಹವನ್ನು ಬತ್ತಿಸಿದೆ. ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಇದರಿಂದ ದೂರವಿರುವ ಕೃಷಿಕರೇ ಹೆಚ್ಚು. ಹೀಗಿರುವಾಗ ಸಾಕಷ್ಟು ಶ್ರಮವಹಿಸಿ ಅನ್ನದ ಬೆಳೆಯನ್ನು ಬೆಳೆದ ರೈತರಿಗೆ ಫಸಲು ಕೈಗೆ ಬರುವ ಹೊತ್ತಿಗೆ ಇಂಥ ಸಂಕಷ್ಟ ಎದುರಾಗಿದೆ.

ನೆನೆದ ಭತ್ತದ ಅರಿಯನ್ನು ತಿರುಗಿಸಿ ಹಾಕಿ ಒಣಗಿಸುವ ಕಾರ್ಯವನ್ನು ಮಂಗಳವಾರ ರೈತರು ಮಾಡಿದರು. ಆದರೂ ಭತ್ತ ಮುಗ್ಗಿ ತನ್ನ ನೈಜತೆ ಕಳೆದುಕೊಳ್ಳುತ್ತದೆ ಎಂಬುದು ರೈತರ ನೋವಾಗಿದೆ. ಅಕಾಲಿಕ ಮಳೆ ಕಲ್ಲಂಗಡಿ ಬೆಳೆಗೆ ಕಂಟಕವಾಗುತ್ತದೆ. ತಾಲೂಕಿನ ಪೂರ್ವಭಾಗ ಬನವಾಸಿ, ಯಡೂರಬೈಲ್‌ ಮುಂತಾದೆಡೆ ದೊಡ್ಡ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆದಿದ್ದು ಅದೀಗ ಹೂವು ಬಿಟ್ಟಿದೆ. ಮಳೆಗೆ ಕೊಳೆಯುವ ಆತಂಕ ರೈತರಲ್ಲಿ ಮೂಡಿದೆ. ಇನ್ನು ಅಡಿಕೆ ಕೊಯ್ಲಿಗೂ ಮಳೆ ಅಡ್ಡಿಯನ್ನುಂಟು
ಮಾಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next