ಬೆಂಗಳೂರು: ಕೇರಳದ ದಕ್ಷಿಣ ಕರಾವಳಿಯಲ್ಲಿ “ಒಕಿ’ ಚಂಡಮಾರುತದ ಪ್ರಭಾವ ತಕ್ಕಮಟ್ಟಿಗೆ ನೆರೆಯ ಕರ್ನಾಟಕದ ಮೇಲೂ ಆಗಿದೆ. ಇದರಿಂದಾಗಿ ಅಲ್ಲಲ್ಲಿ ಹಗುರವಾದ ಮಳೆಯಾಗುತ್ತಿದ್ದು, ಇನ್ನೂ ಎರಡು-ಮೂರು ದಿನ ಇದೇ ವಾತಾವರಣ ಮುಂದುವರಿಯಲಿದೆ.
“ಒಕಿ’ ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕೇರಳದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ, ರಾಜ್ಯದ ಮೇಲೆ ಈ ಚಂಡಮಾರುತದ ಪ್ರಭಾವ ಅಷ್ಟಾಗಿ ಇರುವುದಿಲ್ಲ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಹಗುರವಾದ ಮಳೆ ಹಾಗೂ ಉಳಿದೆಡೆ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಎಂ. ಮೇತ್ರಿ ತಿಳಿಸಿದ್ದಾರೆ.
ಕೇರಳದ ದಕ್ಷಿಣದಲ್ಲಿರುವ “ಒಕಿ’ ವಾಯವ್ಯ ದಿಕ್ಕಿನಲ್ಲಿ ಅಂದರೆ ಲಕ್ಷದ್ವೀಪದತ್ತ ಮುಂದುವರಿಯುವ ಲಕ್ಷಣಗಳಿವೆ. ಹಾಗಾಗಿ, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇನ್ನೂ ಎರಡು-ಮೂರು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಉತ್ತರ ಒಳನಾಡಿನಲ್ಲಿ ಚಂಡಮಾರುತದ ಯಾವುದೇ ಪ್ರಭಾವ ಇರುವುದಿಲ್ಲ. ಹಾಗಾಗಿ, ಎಂದಿನಂತೆ ಒಣಹವೆ ಮುಂದುವರಿಯಲಿದೆ ಎಂದು ಅವರು ಹೇಳಿದರು. ಈ ಮಧ್ಯೆ ಬೆಂಗಳೂರು ಸೇರಿದಂತೆ ಕೆಲವೆಡೆ ತುಂತುರು ಮಳೆಯಾಗಿದೆ. ಬಹುತೇಕ ಕಡೆಗಳಲ್ಲಿ ಮೋಡಕವಿದ
ವಾತಾವರಣ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.