Advertisement

ರಾಜಧಾನಿ ಸೇರಿ ಹಲವೆಡೆ ಮತ್ತೆ ವರುಣನಬ್ಬರ

11:15 PM Sep 23, 2019 | Team Udayavani |

ಬೆಂಗಳೂರು/ಹುಬ್ಬಳ್ಳಿ: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸೋಮವಾರ ಬೆಳಿಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು.

Advertisement

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸೋಮ ವಾರ ಉತ್ತಮ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಉಕ್ಕಿ ಹರಿದು ಕೆಲ ಕಾಲ ಆತಂಕ ಸೃಷ್ಟಿಸಿದರೆ ಗಿರಿ ಶ್ರೇಣಿ ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ. ನರಸಿಂಹರಾಜಪುರದಲ್ಲೂ ಸೋಮವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದಿದೆ. ತರೀಕೆರೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.

ನೂರಾರು ಎಕರೆ ಹೊಲ ಜಲಾವೃತ: ಬಳ್ಳಾರಿ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಧಾರಾಕಾರ ಮಳೆ ಸುರಿದು ನೂರಾರು ಹೆಕ್ಟೇರ್‌ ಹೊಲಗಳೆಲ್ಲ ಜಲಾವೃತವಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಮುಖ್ಯರಸ್ತೆ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

ಭಾರೀ ಮಳೆಯಿಂದ ಮೆಣಸಿನಕಾಯಿ ಹಾಗೂ ಹತ್ತಿ ಹೊಲಗಳಿಗೂ ನೀರು ನುಗ್ಗಿದ್ದು ಅಂದಾಜು 500 ಎಕರೆ ಪ್ರದೇಶ ವ್ಯಾಪ್ತಿಯ ಬೆಳೆ ನಷ್ಟವಾಗಿದೆ. ಗ್ರಾಮದ ಸರ್ಕಾರಿ ಶಾಲೆ ಆವರಣ ಹಾಗೂ ಕೊಠಡಿಯೊಳಗೂ ನೀರು ನುಗ್ಗಿದೆ. ಸೋಮವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆಗೆ ಎಂಟು ಎಕರೆಯಲ್ಲಿ ಬೆಳೆದ ಬೆಳೆ ಸಂಪೂರ್ಣ ಜಲಾವೃತ ಆಗಿದೆ. ಇದರಿಂದ ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಯರಿಸ್ವಾಮಿ ಹೇಳಿದರು.

ಉಕ್ಕಿಹರಿದ ದರ್ಪಣತೀರ್ಥ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಸಂಜೆ ದಿಢೀರನೆ ಭಾರೀ ಮಳೆ ಸುರಿದಿದೆ. ಕ್ಷೇತ್ರದ ದರ್ಪಣ ತೀರ್ಥ ನದಿಯಲ್ಲಿ ಹಠಾತ್ತಾಗಿ ಪ್ರವಾಹ ಉಕ್ಕಿ ಹರಿದು ಸ್ವಲ್ಪ ಕಾಲ ಆತಂಕ ಸೃಷ್ಟಿಸಿತು. ಕುಮಾರಪರ್ವತದ ತಪ್ಪಲು ಪ್ರದೇಶ ಮತ್ತು ಸ್ಥಳೀಯವಾಗಿ ಸತತ ನಾಲ್ಕು ತಾಸು ಮಳೆ ಸುರಿಯಿತು. ದರ್ಪಣ ತೀರ್ಥ ತುಂಬಿ ಹರಿದ ಪರಿಣಾಮ ಆದಿಸುಬ್ರಹ್ಮಣ್ಯ ದೇಗುಲದ ಹೊರಾಂಗಣಕ್ಕೆ ನೀರು ನುಗ್ಗಿದೆ. ಆದಿ ದೇಗುಲದ ಅಶ್ವತ್ಥಕಟ್ಟೆ ಮುಳುಗಡೆ ಗೊಂಡಿತ್ತು. ದೇಗುಲದ ಆವರಣದೊಳಕ್ಕೆ ನೆರೆ ನೀರು ಹರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next