Advertisement
ಮಳೆಯೆಂದರೆ ಬರೀ ನೀರಲ್ಲ… ಇನ್ನೇನು? ಮಳೆ ಬರುವಾಗ ನೀರು ಬರುತ್ತದಲ್ಲ … ಹೌದು. ಮಳೆ ಬಂದರೆ ನೀರಾಗುತ್ತದೆ, ಹಾಗೆಯೇ ಮಳೆ ಬಾರದಿದ್ದರೆ ನೀರಿಲ್ಲ ಅಲ್ವಾ? ಮೇ ಅಥವಾ ಜೂನಲ್ಲಿ ಮೊದಲ ಮಳೆ ಬಂದಾಗ ಅದರ ಜೊತೆಗೆ ಒಂದಿಷ್ಟು ಬಾಲ್ಯದ ನೆನಪುಗಳು ಸಹ ಬರುತ್ತವೆ. ನೆನಪುಗಳು ನೆನಪಿಗೆ ಬಂದಾಗ ಈ ಬಾಲ್ಯ ಮತ್ತೆ ಬರಬಾರದೇ ಎಂದು ಅನಿಸುವುದು ಸಹಜ… ಮಳೆ ಬರುವಾಗ, ಮಳೆಯಲ್ಲಿ ಕಳೆದ ದಿನಗಳು ನೆನಪಿಗೆ ಬರುವುದುಂಟು. ನೆನಪಿಗೆ ಬಂದ ಕೆಲವೊಂದು ಬಾಲ್ಯದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
Related Articles
Advertisement
ಸ್ಲೇಟಲ್ಲಿ ಎರಡು ಬದಿ ಬರೆದುಕೊಂಡು ಹೋದರೆ, ಹೋಗುವಾಗ ಜೋರು ಮಳೆ ಬಂದು ಬರೆದಲ್ಲಾ ಅಳಿಸಿ ಹೋಗುತ್ತಿತ್ತು. ಹೀಗಾಗಿ ಶಾಲೆಯಲ್ಲಿ ಟೀಚರ್‌ಗಳ ಬೈಗುಳ, ಸ್ಲೇಟಲ್ಲಿ ಬರೆಯದೆ ಬಂದವರಿಗೆ ಮಳೆ ಒಂದು ವರದಾನ. ಬರೆದೇ ತರುವುದಿಲ್ಲ, ಇನ್ನು ಕ್ಲಾಸಲ್ಲಿ ಟೀಚರ್ ಕೇಳಿದರೆ ಬರುವಾಗ ಮಳೆ ಬಂತು ಹಾಗಾಗಿ ಬರೆದದ್ದು ಅಳಿಸಿ ಹೋಯಿತು ಎಂದು ಹೇಳುತಿದ್ದದ್ದು ಇನ್ನೂ ನೆನಪಿದೆ. ಮಳೆಗೆ ಅದೇನೊ ಶಾಲಾ ಮಕ್ಕಳ ಮೇಲೆ ತುಂಬಾ ಪ್ರೀತಿ. ಯಾವಾಗ ಗೇಮ್ಸ… ಕ್ಲಾಸ್ ಇದೆ, ಅದೇ ಸಮಯಕ್ಕೆ ಸರಿಯಾಗಿ ಮಳೆ ಬರುತ್ತಿತ್ತು. ಶಾಲೆಗೆ ಹೋಗುವ ಸಮಯ ಮತ್ತು ಶಾಲೆಯಿಂದ ಮನೆಗೆ ಬರುವ ಸಮಯಕ್ಕೆ ಸರಿಯಾಗಿ ಜೋರು ಮಳೆ ಬರುತ್ತಿತ್ತು. ಇಡೀ ದಿನ ಇಲ್ಲದ ಮಳೆ ಅದೇ ಸಮಯದಲ್ಲಿ ಬರುವುದೆಂದರೆ ಶಾಲಾ ಮಕ್ಕಳ ಮೇಲೆ ಇರುವ ಪ್ರೀತಿ ಅಲ್ಲದೆ ಇನ್ನೇನು? ಜೋರು ಗಾಳಿ-ಮಳೆ ಬಂದಾಗ ಕೆಲವರ ಕೊಡೆಗಳು ಹಾರಿಹೋಗುತ್ತಿದ್ದವು. ತಮ್ಮ ಕೊಡೆಯನ್ನು ಹಿಡಿದು ತರಲು ಹರಸಾಹಸ ಪಡುತ್ತಿದ್ದದ್ದು ಈಗ ನೆನಪಿಸಿಕೊಂಡರೆ ನಗು ಬರ್ತಿದೆ. ಇನ್ನು ಕೆಲವರ ಕೊಡೆ ಗಾಳಿಗೆ ತಾವರೆ ಆಗುತ್ತಿತ್ತು, ಅಂದರೆ ಆಕಾಶಕ್ಕೆ ಮುಖ ಮಾಡಿರುತ್ತಿತ್ತು. ಅದನ್ನು ಸರಿಮಾಡಲು ಒಂದಷ್ಟು ಸಮಯ ಬೇಕಾಗುತ್ತಿತ್ತು. ಕೊಡೆ ಸರಿಯಾಗುವ ಸಮಯಕ್ಕೆ ನಾವು ಪೂರ್ತಿ ಒದ್ದೆಯಾಗುತ್ತಿದ್ದೆವು. ರೈನ್ಕೋಟ್ ಹಾಕಿದವರಿಗೆ ಅದನ್ನು ಹಾಕುವುದು ಮತ್ತು ತೆಗೆಯುವುದೇ ದೊಡ್ಡ ಸಾಹಸವಾಗುತ್ತಿತ್ತು. ಅವರಿಗೆ ರೈನ್ಕೋಟ್ ಒಂದೇ ಸಾಕಾಗುತ್ತಿರಲಿಲ್ಲ, ಅದರ ಜೊತೆಗೆ ಒಂದು ಕೊಡೆ ಇದ್ದೇ ಇರುತ್ತಿತ್ತು.
ಇತ್ತೀಚಿಗೆ ಒಮ್ಮೆ ನಾನು ಜೋರು ಗಾಳಿ-ಮಳೆಯಲ್ಲಿ ಸಿಕ್ಕಿಹಾಕಿಕೊಂಡಾಗ ಎಲ್ಲಾ ಹಳೆಯ ನೆನಪುಗಳು ಒಟ್ಟೊಟ್ಟಿಗೆ ಬಂದವು. ನೀವು ನಿಮ್ಮ ಕನಸಿನ ಲೋಕಕ್ಕೆ ಹೋಗಿದ್ದರೆ ಕನಸು ಕಂಡಿದ್ದು ಸಾಕು ಮಾರ್ರೆ… ವಾಪಸ್ ಬನ್ನಿ ವಾಸ್ತವಕ್ಕೆ.
ರಕ್ಷಿತ ಪ್ರಭು, ಪಾಂಬೂರು