Advertisement

ಉಡುಪಿ, ಕಾಪು ತಾಲೂಕಿನಾದ್ಯಂತ ವರುಣನಾರ್ಭಟ

09:27 PM Jul 20, 2019 | Team Udayavani |

ಭಾರತ್‌ ನಗರ: ಮನೆಯ ಗೋಡೆ ಕುಸಿದು ಲಕ್ಷಾಂತರ ರೂ. ಹಾನಿ
ಕಾಪು : ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕಲ್ಯ – ಭಾರತ್‌ ನಗರದಲ್ಲಿ ಶನಿವಾರ ಮುಂಜಾನೆ ಮನೆಯ ಗೋಡೆ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗಿದೆ.


ಉಳಿಯಾರಗೋಳಿ ಕಲ್ಯ – ಭಾರತ್‌ ನಗರ ನಿವಾಸಿ ಪಾಪಮ್ಮ ಎಂಬವರ ಮನೆಯ ಗೋಡೆ ಕುಸಿದಿದ್ದು ಲಕ್ಷಾಂತರ ರೂ. ಮೊತ್ತದ ನಷ್ಟ ಉಂಟಾಗಿದ್ದು ಬಡ ಕುಟುಂಬವು ಮನೆಯಿಲ್ಲದೇ ಪರದಾಡುವಂತಾಗಿದೆ.

Advertisement

ಬಡ ಕುಟುಂಬದ ಪಾಪಮ್ಮ ಅವರು ಶನಿವಾರ ಮಕ್ಕಳಾದ ಸುಬ್ರಹ್ಮಣ್ಯ ಮತ್ತು ಹರೀಶ್‌ ಅವರೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯ ವೇಳೆ ಪೋಲಿಯೋ ಪೀಡಿತರಾಗಿರುವ ಸುಬ್ರಹ್ಮಣ್ಯ ಅವರು ಗೋಡೆ ಕುಸಿದ ಕೋಣೆಯಲ್ಲಿಯೇ ಮಲಗಿದ್ದು, ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಆಧಾರ ಗೋಡೆಯೇ ಕುಸಿದು ಬಿದ್ದಿದ್ದು, ಮತ್ತಷ್ಟು ಮಳೆ ಬಂದರೆ ಸಂಪೂರ್ಣ ಮನೆ ಕುಸಿತದ ಭೀತಿ ಎದುರಾಗಿದೆ.

ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯೆ ಗುಲಾಬಿ ಪಾಲನ್‌, ಕಾಪು ಗ್ರಾಮ ಕರಣಿಕ ಅರುಣ್‌ ಕುಮಾರ್‌ ಅವರು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.

ಉದ್ಯಾವರ : ಪಡುಕರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ
ಕಟಪಾಡಿ: ಉದ್ಯಾವರಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆಯಲ್ಲಿ ಕಡಲ್ಕೊರೆತದಿಂದ ರಸ್ತೆ ಅಂಚಿನಲ್ಲಿರುವ ಕಲ್ಲು ಮರಳು ಸಮುದ್ರ ಪಾಲಾಗುತ್ತಿದೆ.


ಉದ್ಯಾವರ ಪಡುಕರೆಯ ದರ್ಬಾರು ಶಾಲೆಯ ಶಿವರಾಮ ಪುತ್ರನ್‌ ಹಾಗೂ ಕಾವೇ ರಿ
ಸುವರ್ಣ ಅವರ ಮನೆಯ ಬಳಿಯಲ್ಲಿ ಈ ಕೊರೆತ ಹೆಚ್ಚು ಕಾಣಿಸುತ್ತಿದೆ.ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುಗೊಂಡಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಾಪು : ತೊಟ್ಟಂ ಪರಿಸರದಲ್ಲಿ ಮುಂದುವರಿದ ಕಡಲ್ಕೊರೆತ
ಕಾಪು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ತಾಲೂಕಿನ ಕರಾವಳಿ ತೀರದಲ್ಲಿ ಸಮುದ್ರದ ಆರ್ಭಟ ಹೆಚ್ಚಾಗಿದ್ದು, ಕೆಲವೆಡೆಗಳಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ.


ಕಾಪು ತಾಲೂಕಿನ ಪಡುಗ್ರಾಮದ ತೊಟ್ಟಂ, ಪೊಲಿಪು, ಮೂಳೂರು, ಉಳಿಯಾರಗೋಳಿ ಕೈಪುಂಜಾಲು, ಎರ್ಮಾಳಿನಲ್ಲಿ ಕಡಲಬ್ಬರ ಹೆಚ್ಚಾಗಿದೆ. ಬೃಹತ್‌ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.

Advertisement

ಕಾಪು ತೊಟ್ಟಂ ಪರಿಸರದಲ್ಲಿ ಎರಡು ತೆಂಗಿನ ಗಿಡಗಳು ಅಪಾಯದಲ್ಲಿದ್ದು, ಎರಡು ದಿನ ಮಳೆ ಮತ್ತೆ ಮುಂದುವರಿದರೆ ಕಡಲ್ಕೊರೆತ ಮತ್ತಷ್ಟು ಹೆಚ್ಚಾಗುವ ಭೀತಿಯಿದೆ. ಕಾಪು ಪಡು ಗ್ರಾಮದ ತೊಟ್ಟಂನ ಕಡಲ್ಕೊರೆತದ ಪ್ರದೇಶಗಳಿಗೆ ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಪರೀಕ್ಷಕ ಗ್ರಾಮ ಕರಣಿಕ ಶ್ರೀಕಾಂತ್‌, ದೇವರಾಜ್‌ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.

ಹೆಜಮಾಡಿ ಶಾಲೆಗೆ ಮರದ ರೆಂಬೆ ಬಿದ್ದು ಹಾನಿ
ಪಡುಬಿದ್ರಿ: ಹೆಜಮಾಡಿಯ ಜಿ. ಪಂ. ಮಾ. ಹಿ. ಪ್ರಾ. ಶಾಲೆಯ ಮಾಡಿಗೆ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಶಾಲೆ ಸಮೀಪದ ಪಟ್ಟಾ ಸ್ಥಳದ ಹೆರಿಬೋಗಿ(ಕರ್ಮಾರು) ಮರದ ರೆಂಬೆಯೊಂದು ಬಿದ್ದು ಸುಮಾರು 25000ರೂ. ನಷ್ಟ ನಂಭವಿಸಿರುವುದಾಗಿ ತಿಳಿದುಬಂದಿದೆ.

ರಾತ್ರಿಯ ವೇಳೆಯಾಗಿದ್ದರಿಂದ ಶಾಲಾ ವಿದ್ಯಾರ್ಥಿಗಳಾರಿಗೂ ಯಾವುದೇ ಹಾನಿಯಾಗಿಲ್ಲ. ಇಂದು ಬೆಳಗ್ಗೆ ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಸ್ಥಳಕ್ಕೆ ತೆರಳಿ ಹಾನಿಯಾಗಿರುವ ಸುಮಾರು 100 ಹೆಂಚನ್ನು ಇರಿಸಿ ಎಲ್ಲವನ್ನೂ ಸುಸ್ಥಿತಿಗೊಳಿಸಿದ್ದಾರೆ.

ಶಾಲೆಯ ಐದನೇ ಇಯತ್ತೆಯ ಮಕ್ಕಳ ಈ ಕೊಠಡಿಯನ್ನು ತೆರವುಗೊಳಿಸಿ ಬೇರೆ ಕೊಠಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ಪಾಠ ಪ್ರವಚನಗಳನ್ನು ಯಥಾಪ್ರಕಾರ ಮುಂದುವರಿಸಲಾಗಿತ್ತು. ಸ್ಥಳಕ್ಕೆ ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌, ಪಿಡಿಒ ಮಮತಾ ಶೆಟ್ಟಿ, ವಿಎ ಅರುಣ್‌ ಕುಮಾರ್‌ ಮತ್ತಿತರರು ಭೇಟಿಯಿತ್ತಿದ್ದಾರೆ.
ಗ್ರಾಮ ಕರಣಿಕ ಅರುಣ ಕುಮಾರ್‌ ನಷ್ಟವನ್ನು ಅಂದಾಜಿಸಿದ್ದು ಕಾಪು ತಹಶೀಲ್ದಾರ್‌ ಕಚೇರಿಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಕೃತಕ ನೆರೆ: ಸ್ಥಳಾಂತರಗೊಂಡಿರುವ ಮನೆಮಂದಿ
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಬಳಿಯ ದಾಮೋದರ ಪೂಜಾರಿ ಎಂಬವರ ಮನೆಯೊಂದು ಕೃತಕ ನೆರೆಯಿಂದ ಬಾಧಿತವಾಗಿದೆ.
ಕಳೆದ ಬಾರಿಯ ಮಳೆಗಾಲದಲ್ಲಿ ಕೃತಕ ನೆರೆಯ ತೀವ್ರತೆಗೆ ಮನೆಯೊಳಗಿದ್ದ ಗರ್ಭಿಣಿಯೋರ್ವರ ಸಹಿತ ಅಪಾಯದಲ್ಲಿ ಸಿಲುಕಿದ್ದ ಮನೆಮಂದಿಯನ್ನು ಜಿಲ್ಲಾಡಳಿತ ಉಪಸ್ಥಿತಿಯಲ್ಲಿ ದೋಣಿಯ ಮೂಲಕ ಸಾಗಿಸಿ ಸುರಕ್ಷಿತವಾಗಿ ತರಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯೂ ಜಲಾವೃತಗೊಂಡಿತ್ತು.

ಈ ಬಾರಿ ಸುರಿದ ಮಳೆಗೆ ಮತ್ತೆ ಮನೆಯ ಸುತ್ತಲೂ ಜಲಾವೃತ ಗೊಂಡಿರುತ್ತದೆ. ಮಳೆಯು ಮತ್ತೆ ನಿರಂತರೆತೆಯನ್ನು ಕಾಯ್ದುಕೊಂಡಲ್ಲಿ ಹೆಚ್ಚು ನೆರೆಯ ಅಪಾಯ ಸಾಧ್ಯತೆ ಇದೆ.

ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ಮನೆಮಾಲಕ ದಯಾನಂದ ಪೂಜಾರಿ, ಕಳೆದ ಮಳೆಗಾಲದಲ್ಲಿ ಸಾಕಷ್ಟು ನಷ್ಟ ಸಂಭವಿಸಿತ್ತು. ಯಾವುದೇ ಇಲಾಖೆಯಿಂದ ಸಹಾಯ ಸಿಕ್ಕಿಲ್ಲ. ಪೂರ್ವ ಭಾಗದಿಂದ ವೇಗವಾಗಿ ಹರಿದು ಬರುವ ನೀರು ಹೆದ್ದಾರಿಯನ್ನು ದಾಟಿ ಪಶ್ಚಿಮ ಭಾಗಕ್ಕೆ ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ವರ್ಷವೂ ಕೃತಕ ನೆರೆಯಿಂದ ನಾನು, ನನ್ನ ಮನೆ ಬಾಧಿತವಾಗುತ್ತಿದೆ. ಹೆದ್ದಾರಿಯಡಿ ಇರುವ ನೀರು ಹರಿಯುವ ತೋಡನ್ನು ಸಮರ್ಪಕವಾಗಿ ಬಿಡಿಸಿಕೊಟ್ಟು ನೆರೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡಲ್ಲಿ ಕೃತಕ ನೆರೆಗೆ ಮುಕ್ತಿ ಸಾಧ್ಯವಾಗುತ್ತದೆ. ಈಗಾಗಲೇ ನಾವು ಸ್ಥಳಾಂತರಗೊಂಡಿರುತ್ತೇವೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next