Advertisement

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

02:05 AM Jul 06, 2022 | Team Udayavani |

ಬೆಂಗಳೂರು/ಹುಬ್ಬಳ್ಳಿ: ಮುಂಗಾರು ಮಳೆ ರಾಜ್ಯದ ವಿವಿಧೆಡೆ ಬಿರುಸಾಗಿ ಸುರಿಯುತ್ತಿದೆ. ಮಹಾರಾಷ್ಟ್ರದಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ. ಮಳೆ, ಪ್ರವಾಹದ ಪ್ರಕೋಪದಿಂದ ಹಲವೆಡೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿದು ಹೋಗಿದೆ. ವಿದ್ಯುತ್‌, ದೂರವಾಣಿ ಸಂಪರ್ಕ ವ್ಯತ್ಯಯಗೊಂಡಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲಿ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ನೀರು ಅಪಾಯ ಮಟ್ಟ ಮೀರಿದೆ.

ಕಾಫಿ ತೋಟದಲ್ಲಿ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ 7 ವರ್ಷದ ಬಾಲಕಿಗಾಗಿ ಶೋಧ ಮುಂದುವರಿದಿದೆ. ಹೊಸಪೇಟೆ ಗ್ರಾಮದ ಸುಪ್ರೀತಾ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಮರಳುವ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಳು.

ನದಿಗಳು ಅಪಾಯದ ಮಟ್ಟದಲ್ಲಿ
ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಶೃಂಗೇರಿ ಶಾರದಾ ದೇವಸ್ಥಾನ ಬಳಿ ಇರುವ ಕಪ್ಪೆಶಂಕರ ನೀರಿನಲ್ಲಿ ಮುಳುಗಿದೆ. ಕುದುರೆಮುಖ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಾಳೆಹೊನ್ನೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿದ್ದು, ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಕಳಸ-ಹೆಬ್ಟಾಳೆ ಸೇತುವೆ ಭದ್ರಾ ನದಿ ನೀರಿನಲ್ಲಿ ಮುಳುಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕು ವ್ಯಾಪ್ತಿಯಲ್ಲಿ ಬುಧವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Advertisement

ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಕೂಡ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಧೂರು ದೇಗುಲ ಜಲಾವೃತ
ಕಾಸರಗೋಡು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಮಧುವಾಹಿನಿ ನದಿಯ ಪ್ರವಾಹವು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದಲ್ಲಿ ಉಕ್ಕಿ ಹರಿಯಿತು..

ಹಳಿ ಮೇಲೆ ಬಿದ್ದ ಮರ: ರೈಲು ಸಂಚಾರ ಸ್ಥಗಿತ
ಪಣಜಿ: ಗೋವಾ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವರ್ಡೆ ಬಳಿ ರೈಲ್ವೇ ಹಳಿ ಮೇಲೆ ಬೃಹತ್‌ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ತಾಸುಗಳ ಕಾಲ ಸ್ಥಗಿತಗೊಂಡಿತ್ತು. ಅನಂತರ ರೈಲ್ವೇ ಸಿಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next