Advertisement

ಧಾರವಾಡ: ತೌಕ್ತೇ ಆರ್ಭಟ; ಜಿಟಿಜಿಟಿ ಮಳೆ ಸಂಕಟ

04:27 PM May 17, 2021 | Team Udayavani |

ಧಾರವಾಡ: ತೌಕ್ತೇ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ಶನಿವಾರ ತಡರಾತ್ರಿಯಿಂದಲೇ ಜೋರಾದ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಏಕಕಾಲದಲ್ಲಿ ಮಳೆಗಾಲ ಹಾಗೂ ಚಳಿಗಾಲದ ಅನುಭವ ನೀಡಿದೆ. ಜೋರಾದ ಗಾಳಿಯಿಂದ ಕೂಡಿದ ಮಳೆ ಆಗಾಗ ಸ್ವಲ್ಪ ವಿರಾಮ ನೀಡಿ ಸುರಿಯುತ್ತಿದೆ. ಜಿಟಿ ಜಿಟಿ ಮಳೆಯಂತೂ ಮಳೆಗಾಲದ ಅನುಭವ ನೀಡಿದೆ. ಇದರ ಜತೆಗೆ ಜೋರಾಗಿ ಬೀಸುತ್ತಿರುವ ಶೀತಮಯ ಗಾಳಿ ಜಿಲ್ಲೆಯಲ್ಲಿ ಚಳಿಗಾಲದ ತಂಪಾದ ವಾತಾವರಣ ಮೂಡಿಸಿದೆ.

Advertisement

ಬೆಳಗ್ಗೆ ಸಮಯದಲ್ಲಿ ಜೋರಾದ ಮಳೆ ಸುರಿದಿದ್ದರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಹೊರಗಡೆ ಬಂದಿದ್ದು ವಿರಳವಾಗಿತ್ತು. ಇನ್ನೂ ನಿಗದಿತ ಸಮಯದೊಳಗೆ ನಿರೀಕ್ಷೆಯಷ್ಟು ರೈತರು ಹಾಗೂ ವ್ಯಾಪಾರಸ್ಥರು ಹೋಲ್‌ಸೆಲ್‌ ಕಾಯಿಪಲ್ಲೆ ಮಾರುಕಟ್ಟೆಗೆ ಆಗಮಿಸದ ಕಾರಣ ವ್ಯಾಪಾರವೂ ಕುಸಿದಿತ್ತು. ಮಳೆಯ ಅಬ್ಬರದಿಂದ ಚಿಲ್ಲರೆ ವ್ಯಾಪಾರವೂ ಇಲ್ಲದಂತಾಗಿತ್ತು. ಕರ್ಫ್ಯೂ ಸಂದರ್ಭದಲ್ಲಿ ಜನರ ಓಡಾಟ ನಿಯಂತ್ರಿಸಲು ಪೊಲೀಸರು ಪರದಾಡುತ್ತಿದ್ದರು. ಆದರೆ ಮಳೆಯಿಂದ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಸಹ ಹೆಚ್ಚಿನ ಜನರು ಆಗಮಿಸಿರಲಿಲ್ಲ. ಮಳೆಯ ಹೊಡೆತಕ್ಕೆ ಜನರು ಬೆಚ್ಚಗೆ ಮನೆಯಲ್ಲೇ ಇದ್ದರು. ಮಧ್ಯಾಹ್ನ ಮಳೆ ನಿಂತರೂ ಶೀತಗಾಳಿ ಹಾಗೂ ಜಿಟಿ ಜಿಟಿ ಮಳೆಯಿಂದ ಬಹುತೇಕ ಜನರು ಮನೆಯಲ್ಲೇ ಕಾಲ ಕಳೆದರು.

ಇನ್ನೂ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ, ಯಾದವಾಡ, ಲಕಮಾಪುರ, ಗರಗ, ದೇವರಹುಬ್ಬಳ್ಳಿ, ನಿಗದಿ ಸೇರಿದಂತೆ ಕಲಘಟಗಿ, ಅಳ್ನಾವರ ಭಾಗದಲ್ಲಿ ಜೋರಾದ ಮಳೆ ಸುರಿದಿದೆ. ಕನಕೂರ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ವರದಿಯಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ.

ಮದುವೆಗೆ 1509 ಅರ್ಜಿ! ಜಿಲ್ಲೆಯಲ್ಲಿ ಮದುವೆಗಳ ಆಯೋಜನೆಗೆ ಕಠಿಣ ನಿಯಮಗಳನ್ನು ವಿಧಿಸಿ, ಅವರ ಆರೋಗ್ಯ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಉಚಿತವಾಗಿ ಪಾಸ್‌, ಕೈಗೆ ಬ್ಯಾಂಡ್‌ ನೀಡಿದರೂ ಜನ ಸರಿಯಾಗಿ ಪಾಲಿಸದೇ ಕೋವಿಡ್‌ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಮೇ 9ರಿಂದ ಜಿಲ್ಲಾಡಳಿತ ಮದುವೆಗಳ ಆಯೋಜನೆಗೆ ಅನುಮತಿ ಪತ್ರ ನೀಡುತ್ತಿದೆ. ಮೇ 15ರ ವರೆಗೆ 1509 ಅರ್ಜಿಗಳು ಸಲ್ಲಿಕೆಯಾಗಿವೆ. ಮುಂಬರುವ ಮೇ 23ರವರೆಗೂ ಸೇರಿ ಒಟ್ಟು 584 ಮದುವೆಗಳಿಗೆ ಅನುಮತಿ ನೀಡಲಾಗಿದೆ. ವಿವಿಧ ಕಾರಣಗಳಿಂದಾಗಿ ಉಳಿದ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next