ಮಂಗಳೂರು/ಉಡುಪಿ : ಕರಾವಳಿಯಲ್ಲಿ ಮುಂಗಾರು ತುಸು ಕ್ಷೀಣಗೊಂಡಿದ್ದರೂ ಉಭಯ ಜಿಲ್ಲೆಗಳ ಹಲವೆಡೆ ಸೋಮವಾರ ಸಂಜೆ ಮತ್ತು ರಾತ್ರಿ ಭಾರೀ ಮಳೆಯಾಗಿದೆ.
ದ.ಕ. ಜಿಲ್ಲೆಯ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ಮತ್ತು ಮಂಗಳೂರಿನಲ್ಲಿ ಬಿಸಿಲು ಮತ್ತು ಮಳೆಯ ವಾತಾವರಣವಿತ್ತು. ಮುಂಜಾನೆ ದಿಢೀರ್ ಆಗಿ ಕೆಲವು ನಿಮಿಷ ಕಾಲ ಉತ್ತಮ ಮಳೆಯಾಗಿದೆ.
ಸಂಜೆ, ರಾತ್ರಿಯ ವೇಳೆಗೆ ಸುಳ್ಯ, ಬಂಟ್ವಾಳ, ಪುತ್ತೂರು ತಾಲೂಕುಗಳ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಬಂಟಮಲೆ ಭಾಗದ ಪಂಜ, ಪಂಬೆತ್ತಾಡಿ ಭಾಗದಲ್ಲಿ ಸಂಜೆ ಮತ್ತು ರಾತ್ರಿ ಭಾರೀ ಮಳೆಯಾಗಿದ್ದು, ಕೆಲವೆಡೆ ಗುಡ್ಡ ಜರಿತ ಸಂಭವಿಸಿದೆ. ಉಳಿದಂತೆ ವಿಟ್ಲ, ಕಬಕ ಭಾಗದಲ್ಲಿಯೂ ರಾತ್ರಿ ಒಳ್ಳೆಯ ಮಳೆಯಾಗಿದೆ.
ಉಡುಪಿ: ಬಿಟ್ಟು ಬಿಟ್ಟು ಮಳೆ
ಉಡುಪಿ : ಜಿಲ್ಲೆಯಲ್ಲಿ ರವಿವಾರ ತಡರಾತ್ರಿ ಸೋಮವಾರ ಹಗಲಿಡೀ ಬಿಟ್ಟುಬಿಟ್ಟು ಮಳೆಯಾಗಿದೆ. ಬೈಂದೂರು, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು, ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಮೋಡ, ಬಿಸಿಲ ವಾತಾವರಣದ ನಡುವೆ ಸಾಧರಣ ಮಳೆಯಾಗಿದೆ.
ಉಡುಪಿ 8.2, ಬ್ರಹ್ಮಾವರ 15.5, ಕಾಪು 15.2, ಕುಂದಾಪುರ 34.2, ಬೈಂದೂರು 48.4, ಕಾರ್ಕಳ 31.4, ಹೆಬ್ರಿ 64.8 ಮಿ .ಮೀ. ಮಳೆಯಾಗಿದೆ. ಆ. 24ರಂದು ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದ್ದು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.