ಮಂಗಳೂರು/ಬೆಳ್ತಂಗಡಿ: ಬೆಳ್ತಂಗಡಿ, ಸುಳ್ಯ, ಬೆಳ್ಳಾರೆ, ಪೆರುವಾಜೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಕ್ರವಾರ ಮಳೆಯಾಗಿದೆ. ಮಂಗಳೂರು ನಗರದಲ್ಲಿ ದಿನವಿಡೀ ಸೆಕೆ, ಬಿಸಿಲು ಮತ್ತು ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು.
ಬೆಳ್ತಂಗಡಿ ತಾಲೂಕಿನ ಕೆಲವೆಡೆ ಶುಕ್ರವಾರ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ, ಗೇರುಕಟ್ಟೆ ಪರಿಸರದಲ್ಲಿ ಗಾಳಿ ಸಹಿತ ಮಳೆಯಾಗಿದೆ.
ಮುಂಡಾಜೆ ಸುತ್ತಮುತ್ತ ಕಲ್ಮಂಜ ಗ್ರಾಮದಲ್ಲಿ ಹಾಗೂ ಮುಂಡಾಜೆ ಗ್ರಾಮದ ಕಾಯರ್ತೋಡಿ, ಕಡಂಬಳ್ಳಿ, ಮೂಲಾರು, ಕಲ್ಲಾರ್ಯ, ಕೊಡಂಗೆ ಪರಿಸರದಲ್ಲಿ ಒಂದು ತಾಸಿಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ.
ದಿಡುಪೆ ಪರಿಸರದಲ್ಲಿ ಸಾಧಾರಣ ಮಳೆ ಸುರಿದಿದೆ. ಉಳಿದಂತೆ ಗುರಿಪ್ಪಳ್ಳ ಕನ್ಯಾಡಿ, ಸೋಮಂತಡ್ಕ, ಕಡಿರುದ್ಯಾವರ, ಮೊದಲಾದ ಕಡೆ ತುಂತುರು ಮಳೆಯಾಯಿತು.
ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶದಂತೆ ಶನಿವಾರ ಪಣಂಬೂರಿನಲ್ಲಿ 37 ಡಿ.ಸೆ. ಗರಿಷ್ಠ ಮತ್ತು 26.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಕರಾವಳಿ ಭಾಗದ ಅಲ್ಲಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.