Advertisement

“ಮನೆ ಮನೆಗೆ ಮಳೆಕೊಯ್ಲು’ಉದಯವಾಣಿ ಅಭಿಯಾನದ ಯಶಸ್ಸು

11:44 PM Sep 17, 2019 | Team Udayavani |

ಮಹಾನಗರ: ಕಳೆದ ಬೇಸಗೆಯಲ್ಲಿ ಜಿಲ್ಲಾ ದ್ಯಂತ ಉಂಟಾಗಿದ್ದ ಜಲಕ್ಷಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಉದಯವಾಣಿ ಪ್ರಾರಂಭಿಸಿದ್ದ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಯಶಸ್ವಿ ನೂರು ದಿನ ಪೂರ್ಣಗೊಳಿಸಿದೆ.

Advertisement

ವ್ಯರ್ಥವಾಗಿ ಹರಿದು ಹೋಗುವ ಮಳೆನೀರನ್ನು ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವುದಕ್ಕೆ ನಾವೆಲ್ಲರೂ ಒಟ್ಟಾಗಿ ಕೈಜೋಡಿಸಬೇಕು ಎನ್ನುವ ಸದಾಶಯದೊಂದಿಗೆ ಕಳೆದ ಜೂ. 8ರಂದು ಪ್ರಾರಂಭಗೊಂಡಿದ್ದ ಅಭಿಯಾನವು ಜಿಲ್ಲಾದ್ಯಂತ ಸಾವಿರಾರು ಮಂದಿಯನ್ನು ಜಲ ಸಾಕ್ಷರತೆಯ ಜಾಗೃ ತಿ ಮೂಡಿಸುವ ಈ ಜಲಾಂದೋಲನಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

ದ.ಕ. ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ನಿರ್ಮಿತಿ ಕೇಂದ್ರದವರು ಜಿಲ್ಲಾದ್ಯಂತ ಅಲ್ಲಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯಕ್ರಮ-ಪ್ರಾತ್ಯಕ್ಷಿಕೆ, ಮನೆ-ಮನೆಗೆ ಭೇಟಿ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈಗಾಗಲೇ ಸಾವಿರಾರು ಮಂದಿಗೆ ಮಳೆಕೊಯ್ಲಿನ ಅಗತ್ಯ-ಅನುಕೂಲತೆಯನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ಮಿತಿ ಕೇಂದ್ರದಿಂದ ಮಾರ್ಗದರ್ಶನ
ಈ ಅಭಿಯಾನದಡಿ ಮೂರು ತಿಂಗಳಲ್ಲಿ 500ಕ್ಕೂ ಅಧಿಕ ಮಂದಿ ನಿರ್ಮಿತಿ ಕೇಂದ್ರಕ್ಕೆ ಕರೆ ಮಾಡಿ ಮಳೆಕೊಯ್ಲು ಬಗ್ಗೆ ಮಾಹಿತಿ ಕೇಳಿದ್ದು, 200ಕ್ಕೂ ಅಧಿಕ ಮನೆಗಳಿಗೆ ಈವರೆಗೆ ಭೇಟಿ ನೀಡಿ ಉಪಯುಕ್ತ ಮಾಹಿತಿ ನೀಡಿದ್ದೇವೆ. ಉಳಿದವರಿಗೆ ದೂರವಾಣಿ ಮೂಲಕವೂ ಮಳೆಕೊಯ್ಲು ಅಳವಡಿಸಿಕೊಳ್ಳಲು ಮಾರ್ಗದರ್ಶ ಮಾಡಲಾಗಿದೆ. ಮಳೆಕೊಯ್ಲು ಕಾರ್ಯಾಗಾರದಲ್ಲಿ ಮಾಹಿತಿ ನೀಡಲು ಆಹ್ವಾನಗಳು ಬಂದಿದ್ದು, ಈ ಪೈಕಿ 56 ಕಡೆ ಮಾಹಿತಿ ಕಾರ್ಯಕ್ರಮ ನೀಡಲಾಗಿದೆ ಎಂದು ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ನಾವಿ ಹೇಳಿದ್ದಾರೆ.

ಅಭಿಯಾನದಿಂದ ಸ್ಫೂರ್ತಿಗೊಂಡು ಬೆಳ್ತಂಗಡಿಯ ಮುಂಡಾಜೆಯಲ್ಲಿ “ನೀರಿಂಗಿಸೋಣ’ ಎಂಬ ತಂಡವೊಂದು ಅಸ್ತಿತ್ವಕ್ಕೆ ಬಂದಿದ್ದು, ಗ್ರಾಮದಲ್ಲಿ ಜಲಾಂದೋಲನದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲದೆ, ಹಲವಾರು ವಿದ್ಯಾಸಂಸ್ಥೆ, ಸಮುದಾಯ ಸಂಘಟನೆಗಳು, ಪ್ರಾರ್ಥನಾ ಮಂದಿರಗಳು ಸ್ವಯಂಪ್ರೇರಿತವಾಗಿ ಮಳೆಕೊಯ್ಲು ಅರಿವು ಕಾರ್ಯಕ್ರಮ ಆಯೋಜಿಸಿ ಉದಯವಾಣಿಯ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದಕ್ಕೆ ಕೈಜೋಡಿಸಿರುವುದು ಕೂಡ ಗಮನಾರ್ಹ.

Advertisement

ಕಟೀಲು ಕುಕ್ಕುಂಡೇಲು
ಇಲ್ಲಿನ ನಿವಾಸಿ ಅಲೆಕ್ಸ್‌ ತಾವ್ರೋ ಮೂರು ವರ್ಷಗಳ ಹಿಂದೆ ತಮ್ಮ ಜಾಗದಲ್ಲಿ ಬೃಹತ್‌ ಕೆರೆ ನಿರ್ಮಿಸಿ ನೀರಿಂಗಿಸುವ ಮೂಲಕ ಕೊಳವೆ ಬಾವಿಗೆ ಜಲ ಮರುಪೂರಣ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲೆಕ್ಸ್‌ ಅವರ ಮನೆಯಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ನೀರು ತೀರಾ ಕೆಳ ಮಟ್ಟದಲ್ಲಿತ್ತು. ನೀರಿನ ಮಟ್ಟ ಹೆಚ್ಚಳಕ್ಕಾಗಿ ಕೊಳವೆ ಬಾವಿ ಚ ಕೆರೆ ನಿರ್ಮಿಸುವ ಉಪಾಯ ಕಂಡುಕೊಂಡ ಅವರು, ಕೆರೆ ನಿರ್ಮಿಸಿದರು. ಈಗ ಕೆರೆಯಲ್ಲಿಯೂ ನೀರು ತುಂಬಿಕೊಂಡಿದ್ದು, ಇಂಗಿದ ನೀರು ಪಕ್ಕದ ಕೊಳವೆ ಬಾವಿಯನ್ನು ರೀಚಾರ್ಜ್‌ ಮಾಡುತ್ತಿದೆ. ಒಂದು ಕಾಲದಲ್ಲಿ ಕಡಿಮೆ ಇದ್ದ ನೀರಿನ ಮಟ್ಟ ಪ್ರಸ್ತುತ ತುಂಬಿ ಮೇಲೆ ಹರಿದು ಹೋಗುತ್ತಿದೆ ಎಂದು ಹೇಳುತ್ತಾರೆ ಅಲೆಕ್ಸ್‌.

ಛಾವಣಿ ನೀರಿನಿಂದ ಮಳೆಕೊಯ್ಲು ಜಲ ಮರುಪೂರಣ
ಬಂಟ್ವಾಳ ತಾ| ರಾಯಿ ಗ್ರಾಮದ ದೈಲಾ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಸೋಮಶೇಖರ ರೈ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಸೋಮಶೇಖರ್‌ ಅವರ ಮನೆಯ ಛಾವಣಿಯ ನೀರನ್ನು ಎರಡು ಇಂಚು ಪೈಪಿನ ಮೂಲಕ 200 ಲೀಟರ್‌ ನೀರಿನ ಡ್ರಮ್‌ಗೆ ಬಿಟ್ಟು ಫಿಲ್ಟರ್‌ ಮಾಡಿ ನೇರವಾಗಿ ಬೋರ್‌ವೆಲ್‌ಗೆ ಬಿಡಲಾಗಿದೆ. ಇದರಿಂದ ಮುಂದಿನ ಬಾರಿ ನೀರಿನ ಸಮಸ್ಯೆ ಬರುವುದಿಲ್ಲ ಎಂಬ ನಂಬಿಕೆ ಇದೆ ಎಂಬುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next