Advertisement

ಮಳೆ ಕೊಯ್ಲು ಘಟಕ ಇನ್ನು ಕಡ್ಡಾಯ

10:17 AM Aug 02, 2019 | Suhan S |

ನರೇಗಲ್ಲ: ಭೀಕರ ಬರಗಾಲ ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಮಳೆ ಕೊಯ್ಲು ನೀರು ಘಟಕ ಸ್ಥಾಪಿಸುವುದು ಕಡ್ಡಾಯವಾಗಿದೆ. ಸರ್ಕಾರ ಈ ಕುರಿತು ಆದೇಶವೊಂದನ್ನು ಹೊರಡಿಸಿದೆ.

Advertisement

ಪ್ರಸ್ತುತ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಇದರಿಂದ ಜನತೆ ಹನಿ ನೀರಿಗೂ ತತ್ವಾರ ಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನೀರೆಂದರೆ ಜೀವಜಲ. ಆಹಾರವಿಲ್ಲದೇ ಬದುಕಬಹುದು, ಆದರೆ ನೀರಿಲ್ಲದೇ ಬದುಕುವುದು ಅಸಾಧ್ಯ. ಹೀಗಾಗಿ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು, ಮಹಡಿ ಕಟ್ಟಡಗಳು, ಹೊಸದಾಗಿ ನಿರ್ಮಿಸುತ್ತಿರುವ ಮನೆಗಳ ಮಾಲಿಕರು ಸೇರಿದಂತೆ ಸರ್ಕಾರಿ ಇಲಾಖೆಗಳು, ಎಲ್ಲಾ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆವರಣದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸುವುದಕ್ಕೆ ಸೂಚನೆ ನೀಡಿದೆ.

ಮಳೆ ನೀರು ಕೊಯ್ಲು ಅಳವಡಿಸಿ ನಂತರ ಮನೆ ಹಾಗೂ ಸರ್ಕಾರಿ ಕಟ್ಟಡಗಳ ಆವರಣಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಗಿಡಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವುದಕ್ಕೆ ಇದೇ ನೀರು ಮರು ಬಳಸಿಕೊಳ್ಳಬಹುದು. ಮನೆಯ ಚಾವಣಿ ಮೂಲಕ ಕೃತಕ ಮಳೆ ಸೃಷ್ಟಿಸಿ ಗಿಡಗಳಿಗೆ ಸಿಂಪರಣೆ ಮಾಡುವುದರಿಂದ ಅವುಗಳ ಜೀವವನ್ನು ಉಳಿಸಿದಂತಾಗುತ್ತದೆ. ಪರಿಸರ ಉಳಿದರೆ ಜೀವಿಗಳು ಬದುಕಲು ಸಾಧ್ಯವಾಗುತ್ತದೆ.

ಘಟಕದಿಂದ ಲಾಭ: ಮಳೆ ಬಂದಾಗ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವುದು, ಇದು ಪರಿಸರ ಸ್ನೇಹಿ ಸರಳ ತಂತ್ರಜ್ಞಾನದಿಂದ ಕಡಿಮೆ ಖರ್ಚಿನಲ್ಲಿ ನಿರ್ಮಿಸುವಂತಹ ಒಂದು ಕಾರ್ಯವಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಸಂಗ್ರಹಿಸಿದ ನೀರನ್ನು ಬಳಸಬಹುದು. ಈ ರೀತಿ ಸಂಗ್ರಹಿಸಿದ ನೀರು ಬರಗಾಲದಲ್ಲಿ ನೆರವಾಗುವುದು. ಅಂತರ್ಜಲ ಹೆಚ್ಚಿಸಿ ಮಣ್ಣಿನ ಕೊಚ್ಚಿ ಹೋಗುವುದನ್ನು ತಡೆಗಟ್ಟಬಹುದು. ತಗ್ಗಿನ ಪ್ರದೇಶಗಳಲ್ಲಿ ಬರುವ ನೆರೆ ಪ್ರವಾಹ ತಡೆಗಟ್ಟುವುದು. ನೀರಿನ ಉಳಿತಾಯವಾಗುವುದು. ಈ ರೀತಿ ಶೇಖರಿಸಿದ ನಿಖರವಾದ ಸ್ಥಳಗಳಲ್ಲಿ ಸಮಯದಲ್ಲಿ ನೀರು ಪೂರೈಕೆ ಸೇರಿದಂತೆ ಅನೇಕ ಲಾಭಗಳಾಗುತ್ತವೆ.

•ಘಟಕ ನಿರ್ಮಿಸದಿದ್ದರೆ ಮೂಲ ಸೌಕರ್ಯ ಒದಗಿಸಲು ಅನುಮತಿ ನೀಡಲ್ಲ
•ಈಗಾಗಲೇ ಮನೆ-ಕಟ್ಟಡ ನಿರ್ಮಿಸಿದವರಿಗೆ ನೀಡಲಾಗುವುದು ನೋಟಿಸ್‌ •ಅ.10ರೊಳಗೆ ಘಟಕಗಳನ್ನು ಆರಂಭಿಸಲು ಹೊರಡಿಸಲಾಗಿದೆ ಸೂಚನೆ

ಜಲಶಕ್ತಿ ಅಭಿಯಾನದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಕಟ್ಟಡ ಪರವಾನಗಿ ಸಲ್ಲಿಸಿದ ಎಲ್ಲರಿಗೂ ಕಡ್ಡಾಯವಾಗಿ ಮನೆ, ಕಟ್ಟಡಗಳಿಗೆ ಮಳೆ ಕೊಯ್ಲು ನೀರು ಘಟಕ ಅವಶ್ಯವಾಗಿ ನಿರ್ಮಿಸಬೇಕು. ಇಲ್ಲದಿದ್ದರೆ ಮೂಲ ಸೌಕರ್ಯಗಳು ಒದಗಿಸಲು ಅನುಮತಿ ನೀಡುವುದಿಲ್ಲ. ಈಗಾಗಲೇ ನಿರ್ಮಿಸಲಾಗಿರುವ ದೊಡ್ಡ ಕಟ್ಟಡ ಹಾಗೂ ಮನೆಗಳಿಗೆ ಮಳೆ ನೀರು ಕೊಯ್ಲು ನಿರ್ಮಿಸುವಂತೆ ನೋಟಿಸ್‌ ನೀಡಲಾಗುತ್ತಿದೆ.•ಎಸ್‌.ಎಸ್‌.ಹುಲ್ಲಮ್ಮನವರ,ಪಪಂ ಮುಖ್ಯಾಧಿಕಾರಿ.

Advertisement

ಸರ್ಕಾರ ಈ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿರುವುದು ಬಹಳ ಖುಷಿ ತಂದಿದೆ. ಇದನ್ನು ಕಟ್ಟುನಿಟ್ಟಾಗಿ ಸರ್ಕಾರಿ ಇಲಾಖೆಗಳಿಗೆ ಮಾತ್ರವಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿ ಇರುವ ಸ್ವಲ್ಪ ಜಾಗದಲ್ಲಿಯಾದರೂ ಈ ಘಟಕ ನಿರ್ಮಿಸಿಕೊಂಡರೆ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಅಲ್ಪವಾದರೂ ಕಡಿಮೆಯಾಗುವುದು.•ಕಳಕಪ್ಪ ಬಂಡಿ,ರೋಣ ಶಾಸಕ

 

•ಸಿಕಂದರ ಎಂ. ಆರಿ
Advertisement

Udayavani is now on Telegram. Click here to join our channel and stay updated with the latest news.

Next