Advertisement

ವಿವಿಧ ಸಂಘ- ಸಂಸ್ಥೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಕೆ

10:41 PM Aug 26, 2019 | mahesh |

ಅಲಿಸಾ ಕ್ರೀಸ್ಟ್‌ ಸಂಕೀರ್ಣದಲ್ಲಿ ಮಳೆಕೊಯ್ಲು ಅಳವಡಿಕೆ
ಪತ್ರಿಕೆಯ ಅಭಿಯಾನದಿಂದ ಎಚ್ಚೆತ್ತು ಕುದ್ರೋಳಿ ಅಳಕೆ ಲೋಬೋ ಕಾಂಪೌಂಡ್‌ನ‌ ಅಲಿಸಾ ಕ್ರೀಸ್ಟ್‌ ಸಂಕೀರ್ಣದ ನಿವಾಸಿಗಳು ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ.

Advertisement

ಈ ಸಂಕೀರ್ಣದಲ್ಲಿ ಮೂರು ಅಂತಸ್ತಿದ್ದು, 6 ಫ್ಲ್ಯಾಟ್‌ಗಳಿವೆ. ಪ್ರತಿ ಬೇಸಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತದೆ. ಪತ್ರಿಕೆಯಲ್ಲಿ ಆರಂಭಗೊಂಡ ಅಭಿಯಾನದಿಂದ ಪ್ರೇರಣೆಗೊಂಡು ನೀರಿನ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ಕಟ್ಟಡದ ರೂಫ್‌ ಟಾಪ್‌ ಮೇಲೆ ಬೀಳುವ ಮಳೆ ನೀರನ್ನು ಪೈಪ್‌ ಮೂಲಕ ಬಾವಿಗೆ ಬೀಳುವಂತೆ ಮಾಡಲಾಗಿದೆ. ಕಟ್ಟಡದ ನಿವಾಸಿ ಕೀಟಸ್‌ ಲೋಬೋ ಮಾತನಾಡಿ, ಮಳೆ ನೀರನ್ನು ಸುಮ್ಮನೆ ಚರಂಡಿ ಹೋಗಲು ಬಿಡುವ ಬದಲು ಹಿಡಿದಿಟ್ಟು ಕೊಂಡರೆ ಭವಿಷ್ಯದ ಬಳಕೆಗೆ ಲಭಿಸುತ್ತದೆ. ನಮ್ಮ ಸಂಕೀರ್ಣದಲ್ಲಿ ಮಳೆಕೊಯ್ಲು ಅಳವಡಿಸಿದರೆ ನಮ್ಮ ಜತೆಗೆ ಪಕ್ಕದ ಮನೆಯ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ನನಗೆ 6,000 ರೂ. ಖರ್ಚು ತಗಲಿದೆ ಎಂದು ಅವರು ಹೇಳುತ್ತಾರೆ.

ಮಳೆಕೊಯ್ಲು ಅಳವಡಿಸಿದ ಅನಿಮಲ್‌ ಕೇರ್‌ ಟ್ರಸ್ಟ್‌
ಶಕ್ತಿನಗರದ ಎನಿಮಲ್‌ ಕೇರ್‌ ಟ್ರಸ್ಟ್‌ ಸಂಸ್ಥೆಯಲ್ಲಿ ಒಂದೂವರೆ ತಿಂಗಳ ಹಿಂದಷ್ಟೇ ಮಳೆಕೊಯ್ಲು ಅಳವಡಿಸಲಾಗಿದ್ದು, 3 ಸಾವಿರ ಚದರ ಅಡಿಯ ಕಟ್ಟಡಗಳ ನೀರನ್ನು ಒಟ್ಟು ಸೇರಿಸಿ ಬಾವಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯಲ್ಲಿ ಒಟ್ಟು 600ಕ್ಕೂ ಹೆಚ್ಚು ಪ್ರಾಣಿಗಳು ಆಶ್ರಯ ಪಡೆಯುತ್ತಿವೆ. ದನಗಳು, ನಾಯಿ, ನಾಯಿ ಮರಿಗಳು, ಬೆಕ್ಕು, ಬೆಕ್ಕಿನ ಮರಿಗಳು, ಅಳಿಲು, ಇನ್ನಿತರ ಪ್ರಾಣಿ ಪಕ್ಷಿಗಳು ಇಲ್ಲಿ ಆಶ್ರಯನಿರತವಾಗಿವೆ. ಸಂಸ್ಥೆ ಆರಂಭವಾಗಿ 16 ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಕಳೆದ ಡಿಸೆಂಬರ್‌ನಿಂದಲೇ ನೀರಿನ ಅಭಾವ ತಲೆದೋರಿದ್ದರಿಂದ ಪ್ರಾಣಿಪಕ್ಷಿಗಳ ಶುಚಿತ್ವಕ್ಕೆ ನೀರಿಲ್ಲದಂತಾಗಿತ್ತು. ಈ ಹಿನ್ನೆಲೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಜುಲೈ ತಿಂಗಳಿನಿಂದ ಮಾಡಿಕೊಳ್ಳಲಾಗಿದೆ.

“ಉದಯವಾಣಿ’ ಪ್ರೇರಣೆ
ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು “ಉದಯವಾಣಿ’ಯ ಮನೆಮನೆಗೆ ಮಳೆಕೊಯ್ಲು ಅಭಿಯಾನವೇ ಪ್ರೇರಣೆಯಾಗಿದೆ. ಮಳೆಗಾಲದಲ್ಲಿ ಬಾವಿಯಲ್ಲಿ ನೀರು ತುಂಬಿದೆ. ಮುಂದೆ ನೀರಿನ ಅಭಾವ ತಲೆದೋರದು ಎಂಬ ವಿಶ್ವಾಸವಿದೆ ಎನ್ನುತ್ತಾರೆ ಟ್ರಸ್ಟ್‌ನ ಟ್ರಸ್ಟಿ ಸುಮಾ ಆರ್‌. ನಾಯಕ್‌ ಟ್ರಸ್ಟ್‌ ಅಡಿಯಲ್ಲಿ ವಿವಿಧ ಕಟ್ಟಡಗಳಿದ್ದು, ಎಲ್ಲ ಕಟ್ಟಡಗಳ ನೀರನ್ನು ಒಟ್ಟು ಸೇರಿಸಿ ಪೈಪ್‌ ಮುಖಾಂತರ ಬಾವಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಪ್ಲಂಬರ್‌ಗಳೂ ಮಾಹಿತಿ ನೀಡಬೇಕು
“ಮನೆ ಮನೆಗೆ ಮಳೆ ಕೊಯ್ಲು’ ಅಭಿಯಾನ ಉತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ನಾನು ಪ್ಲಂಬರ್‌ ಕೆಲಸ ಮಾಡುತ್ತಿದ್ದು, ಕೆಲವು ಕಡೆಗಳಲ್ಲಿ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿದ್ದೇನೆ; ಮಾಹಿತಿಯನ್ನೂ ಹಂಚಿದ್ದೇನೆ. ಪ್ಲಂಬರ್‌ಗಳು ಮಳೆಕೊಯ್ಲು ಪದ್ಧತಿಯ ಬಗ್ಗೆ ಜನರಿಗೆ ಮಾಹಿತಿ ಕೊಡಬೇಕು ಎಂಬುದು ನನ್ನ ಅಭಿಪ್ರಾಯ.
 - ವಿನೇಶ್‌ ಪೂಜಾರಿ, ನಿಡ್ಡೋಡಿ ಪಂಪುಲಡ್ಕ

Advertisement

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
9900567000

Advertisement

Udayavani is now on Telegram. Click here to join our channel and stay updated with the latest news.

Next