Advertisement

ಕ್ರೆಡೈನಿಂದ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ಕೊಯ್ಲು ಅಭಿಯಾನ

11:22 PM Jun 10, 2019 | mahesh |

ಮಹಾನಗರ: ನಗರ ಬೆಳೆಯುತ್ತಿದ್ದಂತೆ ಜನ ವಸತಿಗೆ ಅಪಾರ್ಟ್‌ ಮೆಂಟ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಭವಿಷ್ಯದ ಹಿತದೃಷ್ಟಿಯಿಂದ ಜಲ ಸಂರಕ್ಷಣೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರ ಮೇಲೂ ಅಷ್ಟೇ ದೊಡ್ಡ ಮಟ್ಟದ ಹೊಣೆಗಾರಿಕೆಯಿದೆ.

Advertisement

ನಗರ ವ್ಯಾಪ್ತಿಯಲ್ಲಿರುವ ಅಪಾರ್ಟ್‌ ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಮಳೆ ಕೊಯ್ಲು ವ್ಯವಸ್ಥೆ ಹೊಂದಿರಬೇಕೆಂಬ ನಿಯಮ 2011ರಿಂದ ಜಾರಿಗೆ ಬಂದಿದೆ. ಪ್ರಾಪರ್ಟಿ ಕಾರ್ಡ್‌ ವಿಭಾಗ ನಡೆಸಿರುವ ಸಮೀಕ್ಷೆಯಂತೆ ನಗರದಲ್ಲಿ ಸುಮಾರು 2,300 ಅಪಾರ್ಟ್‌ಮೆಂಟ್‌ ಗಳಿವೆ. ಆದರೆ, ನಿಯಮಾನುಸಾರ ಈಗ ಎಷ್ಟು ಅಪಾರ್ಟ್‌ ಮೆಂಟ್‌ ಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ, ಕ್ರಮಬದ್ಧವಾಗಿ ಪಾಲನೆ ಮಾಡುವ ಮೂಲಕ ನೀರಿನ ಉಳಿತಾಯ, ಅಂತರ್ಜಲ ವೃದ್ಧಿಗೆ ಕೈಜೋಡಿಸಲಾಗುತ್ತಿದೆ ಎನ್ನುವುದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಂದರೆ, ಮಳೆಕೊಯ್ಲು ಅಳವಡಿಸದಿದ್ದರೆ ಅಂಥ ಅಪಾರ್ಟ್‌ಮೆಂಟ್‌ಗಳಿಗೆ ಕಂಪ್ಲೀಶನ್‌ ಪತ್ರವನ್ನು ಪಾಲಿಕೆ ನೀಡುವಂತಿಲ್ಲ. ಆದರೆ, ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬಹುತೇಕ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೂ ಪಾಲಿಕೆಯು ನಿರಪೇಕ್ಷಣಾ ಪತ್ರ ನೀಡುತ್ತಿದೆ. ಹೀಗಿರುವಾಗ, ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇನ್ನು 2011ರ ಮೊದಲು ನಿರ್ಮಾಣವಾದ ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಈ ದಿಶೆಯಲ್ಲಿ ಕ್ರೆಡೈ ಮಂಗ ಳೂರು (ಕಾನೆಡರೇಶನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವಲಪರ್ ಅಸೋ ಸಿಯೇಶನ್‌ ಆಫ್‌ ಇಂಡಿಯಾ) ಅಭಿಯಾನವೊಂದನ್ನು ನಡೆಸುವುದಕ್ಕೆ ಮುಂದಾಗಿದೆ.

ಕ್ರೆಡೈ ಅಭಿಯಾನ
ಮಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿರುವುದನ್ನು ಮನಗಂಡಿರುವ ಕ್ರೆಡೈ ನೂತನ ಅಧ್ಯಕ್ಷ, ಜಲ, ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ನವೀನ್‌ ಕಾರ್ಡೊಜಾ ಅವರು ನೀರು ಸಂರಕ್ಷಣೆ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಒಂದಷ್ಟು ಕಾರ್ಯಯೋಜನೆಗಳನ್ನು ರೂಪಿಸಿ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಪರಿಣಾಮ ಕಾರಿಯಾಗಿ ಅಳವಡಿಸುವುದಕ್ಕೆ ಮುಂದಾಗಿದ್ದರು. ಹೀಗಿರುವಾಗ, ಇದೀಗ “ಸುದಿನ’ವು ನಗರದಲ್ಲಿ ಪ್ರತಿಯೊಂದು ಮನೆ-ಅಪಾರ್ಟ್‌ಮಂಟ್‌, ಸರಕಾರಿ ಕಚೇರಿಗಳು ಹಾಗೂ ವಾಣಿಜ್ಯ ಉದ್ದೇಶಿತ ಕಟ್ಟಡಗಳಲ್ಲಿ ಮಳೆಕೊಯ್ಲು ಮಾಡುವ ಆಶಯದೊಂದಿಗೆ ಪ್ರಾರಂಭಿಸಿರುವ “ಮನೆ-ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಕ್ರೆಡೈ ಇದಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಸುದಿನದ ಈ ಅಭಿಯಾನವು ಮಳೆಕೊಯ್ಲು ಅಳವಡಿಕೆಯತ್ತ ನಗರವಾಸಿ ಗಳನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂದು ಕ್ರೆಡೈ ಅಭಿಪ್ರಾಯಪಟ್ಟಿದೆ.

ಹಳೆಯ ಅಪಾರ್ಟ್‌ ಮೆಂಟ್‌ನಲ್ಲಿ ಅಳವಡಿಕೆ
ಮಳೆಕೊಯ್ಲು ಕಡ್ಡಾಯ ನಿಯಮ ಜಾರಿಗೆ ಬರುವ ಮೊದಲು ನಿರ್ಮಾಣ ಗೊಂಡಿರುವ ಹಳೆಯ ಅಪಾರ್ಟ್‌ ಮೆಂಟ್‌ಗಳಲ್ಲಿ ಈ ವ್ಯವಸ್ಥೆ ಅಳವಡಿಕೆಗೆ ಕ್ರೆಡೈ ತೀರ್ಮಾನಿಸಿದೆ. ನಗರದಲ್ಲಿ ಸುಮಾರು 171 ಹಳೆಯ ಅಪಾರ್ಟ್‌ಮೆಂಟ್‌ಗಳನ್ನು ಈಗಾಗಲೇ ಗುರುತಿಸಿದ್ದು, ಅದಕ್ಕಾಗಿ ಒಂದಷ್ಟು ಮೊತ್ತವನ್ನು ಮೀಸಲಿರಿಸಲಾಗಿದೆ. ಈ ಅಪಾರ್ಟ್‌ ಮೆಂಟ್‌ಗಳ ಅಸೋಸಿಯೇಶನ್‌, ಬಿಲ್ಡರ್‌ಗಳಿಂದ ಶೇ. 50ರಷ್ಟು ಅರ್ಥಿಕ ನೆರವು ಪಡೆದುಕೊಂಡು ಮಳೆಕೊಯ್ಲು ಅಳವಡಿ ಸಲಾಗುವುದು. ಒಂದೊಮ್ಮೆ ಶೇ.50 ಮೊತ್ತ ನೀಡಲು ಅಪಾರ್ಟ್‌ ಮೆಂಟ್‌ ನಿವಾಸಿಗಳು ನಿರಾಕರಿಸಿದರೂ ಅಂಥ ಕಡೆ ಕ್ರೆಡೈ ವತಿಯಿಂದಲೇ ವ್ಯವಸ್ಥೆ ಮಾಡಲಾಗುವುದು.

ಜಲತಜ್ಞರ ಸಹಯೋಗ
ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ನಿಟ್ಟಿನಲ್ಲಿ ಬೆಂಗಳೂರಿನ ಖ್ಯಾತ ಜಲತಜ್ಞ ಡಾ| ದೇವರಾಜ ರೆಡ್ಡಿ ಅವರ ತಾಂತ್ರಿಕ ಸಹಯೋಗವನ್ನು ಕ್ರೆಡೈ ಪಡೆದುಕೊಳ್ಳುತ್ತಿದೆ. ಮಂಗಳೂರಿನಲ್ಲಿ ಮಳೆಕೊಯ್ಲು ವ್ಯವಸ್ಥೆಯಲ್ಲಿ ತಾಂತ್ರಿಕ ಸಹಯೋಗ ನೀಡಲು ಸಮ್ಮತಿಸಿದ್ದಾರೆ. ಈ ಮಳೆಗಾಲದಲ್ಲಿ ಸುಮಾರು 15 ಅಪಾರ್ಟ್‌ಮೆಂಟ್‌ಗಳಲ್ಲಿ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಬಾವಿ ಇರುವ ಕಡೆ ಬಾವಿಗೆ, ಬೋರ್‌ವೆಲ್‌ ಇರುವೆಡೆ ಬೋರ್‌ವೆಲ್‌ಗೆ ಮಳೆ ನೀರು ಕೊಯ್ಲು ಜೋಡಿಸುವ, ಇವೆರಡೂ ಇಲ್ಲದ ಕಡೆಗಳಲ್ಲಿ ನೀರು ಹಿಂಗಿಸುವ ಬಗ್ಗೆ ಡಾ|ದೇವರಾಜ ರೆಡ್ಡಿ ಅವರು ಪರಿಶೀಲನೆ ನಡೆಸಲಿದ್ದಾರೆ. ಒಟ್ಟು 3 ವರ್ಷಗಳಲ್ಲಿ ಎಲ್ಲ 171 ಅಪಾರ್ಟ್‌ಮೆಂಟ್‌ನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ನವೀನ್‌ ಕಾರ್ಡೊಜಾ “ಸುದಿನ’ಕ್ಕೆ ತಿಳಿಸಿದ್ದಾರೆ.

Advertisement

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್‌ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next