Advertisement

ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ ಮುದ್ರಾಡಿ ಗ್ರಾ. ಪಂ.

09:53 AM Oct 25, 2019 | sudhir |

ಹೆಬ್ರಿ : ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಮಳೆ ಕೊಯ್ಲು ಅಳವಡಿಸುವುದರ ಜತೆಗೆ ಪಂಚಾಯತ್‌ ನೇತೃತ್ವದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಕೊಯ್ಲು ಅಳವಡಿಸಿ ಮಳೆಕೊಯ್ಲು ಅಭಿಯಾನಕ್ಕೆ ಸಾಥ್‌ ನೀಡಿದ್ದು ಇತರರಿಗೆ ಮಾದರಿಯಾಗಿದೆ.

Advertisement

ಮಳೆ ಕಡಿಮೆಯಾಗಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಾ ಇರುವುದ ರಿಂದ ನೀರಿನ ಮುಂಜಾಗ್ರತಾ ಕ್ರಮಕ್ಕಾಗಿ ಉದಯವಾಣಿಯಲ್ಲಿ ಬರುತ್ತಿರುವಂತಹ ಮಳೆಕೊಯ್ಲು ಅಭಿಯಾನ ವನ್ನು ಗಮನಿಸಿದ ಮುದ್ರಾಡಿ ಗ್ರಾ.ಪಂ. ಮೊದಲಿಗೆ ಪಂಚಾಯತ್‌ನ ಆವರಣದಲ್ಲಿರುವ ಬಾವಿಗೆ ಮಳೆ ಕೊಯ್ಲು ಘಟಕ ನಿರ್ಮಿಸಿ ಮಾಡಿನ ನೀರನ್ನು ಪೈಪ್‌ ಮೂಲಕ ಟಾಂಕಿಯಲ್ಲಿ ಸಂಗ್ರಹಿಸಿ ನೀರನ್ನು ಶುದ್ಧಗೊಳಿಸುವ ಕ್ರಮದ ಮೂಲಕ ಬಾವಿಗೆ ಜಲಪೂರಣ ಮಾಡಿ ಬಾವಿಯಲ್ಲಿ ನೀರಿನ ಸಂಗ್ರಹಣೆ ಮಾಡಿ ನೀರು ಹರಿದು ಹೋಗದಂತೆ ಭೂಮಿಯಲ್ಲಿ ಇಂಗಿಸುವಿಕೆಯಿಂದ ಅಂತರ್ಜಲ ಮಟ್ಟ ಉಳಿಸುವ ನಿಟ್ಟಿನಲ್ಲಿ ಮಳೆಕೊಯ್ಲು ಘಟಕವನ್ನು ನಿರ್ಮಿಸಲಾಯಿತು.

ಪಂಚಾಯತ್‌ ಸಭೆಯಲ್ಲಿ ನಿರ್ಣಯ
ಬೇಸಗೆ ಕಾಲದಲ್ಲಿ ಹೆಚ್ಚು ತ್ತಿರುವ ನೀರಿನ ಸಮಸ್ಯೆಗೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದೇ ಕಾರಣ ಎನ್ನುವುದನ್ನು ಗಮನಿಸಿದ ಪಂಚಾಯತ್‌ ಸಾಮಾನ್ಯ ಸಭೆ ಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಕಚೇರಿ ಕಟ್ಟಡದಲ್ಲಿ ಮಳೆಕೊಯ್ಲು ನಿರ್ಮಾಣ ಮಾಡುವವ ರಿಗೆ 3 ಸಾವಿರ ರೂ. ಅನುದಾನ ನೀಡುವು ದಾಗಿ ಸಭೆಯಲ್ಲಿ ನಿರ್ಣಯಿಸಿದ್ದು,ಸುಮಾರು 75 ಸಾವಿರವನ್ನು ಮಳೆಕೊಯ್ಲು ಘಟಕ ನಿರ್ಮಾಣಕ್ಕೆ ಮೀಸಲಿಡಲು ತೀರ್ಮಾನಿಸಲಾಗಿದೆ.
ಎಲ್ಲೆಲ್ಲಿ ಅಳವಡಿಕೆ ಮುದ್ರಾಡಿ ಗ್ರಾ.ಪಂ. ನೇತೃತ್ವದಲ್ಲಿ ಮಳೆಕೊಯ್ಲು ಘಟಕಕ್ಕೆ ಮಾಹಿತಿ ನೀಡುವುದರ ಜತೆಗೆ ಈಗಾಗಲೇ ಮುದ್ರಾಡಿ ಗ್ರಾಮ ಪಂಚಾಯತ್‌ನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಸುಮಾರು 4 ಸಾವಿರ ರೂ. ವೆಚ್ಚದಲ್ಲಿ ಮಳೆಕೊಯ್ಲು ಘಟಕ ನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ.

ಬಳಿಕ ಮುದ್ರಾಡಿ ಸರಕಾರಿ ಹಿ.ಪ್ರಾ.ಶಾಲೆಗೆ ಹಾಗೂ ನೆಲ್ಲಿಕಟ್ಟೆ ಸ.ಕಿ.ಪ್ರಾ.ಶಾಲೆಗೆ ಪಂಚಾಯತ್‌ನಿಂದ 3 ಸಾವಿರ ರೂ. ಅನುದಾನ ನೀಡುವುದರ ಮೂಲಕ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ.ಇದರಿಂದ ಪ್ರೇರಿತರಾದ ಸ್ಥಳೀಯ ಉದ್ಯಮಿ ಶ್ರೀಧರ್‌ ನಾಯಕ್‌ ಅವರು ಸ್ವಂತ ಕಡಿಮೆ ಖರ್ಚಿನಲ್ಲಿ ಮಳೆಕೊಯ್ಲು ಘಟಕವನ್ನು ಅಳವಡಿಸಿದ್ದಾರೆ. ಅದೇ ರೀತಿ ಪಂಚಾಯತ್‌ ಮಾರ್ಗದರ್ಶನದಲ್ಲಿ ಶಾಲಾ  ಶಿಕ್ಷಕಿ ಮಾಲತಿ ಅವರ ಮನೆಗೆ ಹಾಗೂ ಪಂಚಾಯತ್‌ ಸದಸ್ಯೆ ಬಲ್ಲಾಡಿ ರತ್ನ ಪೂಜಾರಿ ಅವರ ಮನೆಯಲ್ಲಿ ಈಗಾಗಲೇ ಅತೀ ಕಡಿಮೆ ವೆಚ್ಚದಲ್ಲಿ ಘಟಕ ಅಳವಡಿಸಿ ಇತರರಿಗೆ ಮಾದರಿ ಯಾಗಿದ್ದಾರೆ.

ಅಳವಡಿಸಿದರೆ ಮಾತ್ರ ಅನುಮತಿ
ಮಳೆಕೊಯ್ಲು ಬಗ್ಗೆ ವಿಶೇಷ ಯೋಜನೆ ಸಿದ್ಧಪಡಿಸಿದ ಮುದ್ರಾಡಿ ಗ್ರಾ.ಪಂ. ಹೊಸ ಮನೆ/ ಯಾವುದೇ ಕಟ್ಟಡ ನಿರ್ಮಿಸಲು ಅನುಮತಿ ನೀಡಬೇಕಾದರೆ ಮಳೆಕೊಯ್ಲು ಘಟಕ ಕಡ್ಡಾಯವಾಗಬೇಕು ಎಂಬಆದೇಶ ಹೊರಡಿಸಿದ್ದು ಮಳೆಕೊಯ್ಲು ಅಭಿಯಾನಕ್ಕೆ ಉತ್ತೇಜನ ನೀಡುತ್ತಿದೆ.

Advertisement

ಅ.31: ಸಾರ್ವಜನಿಕ ಸಭೆ
ಮುದ್ರಾಡಿ ಪರಿಸರದಲ್ಲಿ ಪ್ರತಿ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು ಪಂಚಾಯತ್‌ನಿಂದ ನೀರು ಸರಬರಾಜು ಮಾಡುವ ಮನೆಗಳಿಗೆ ಹಾಗೂ ಗ್ರಾಮಸ್ಥರಿಗೆ ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲು ಅ.31ರಂದು ಸಭೆ ಕರೆಯಲು ತೀರ್ಮಾನಿಸಲಾಗಿದೆ.

ಮಳೆಕೊಯ್ಲು ಘಟಕವನ್ನು ಪ್ರತೀ ಮನೆಯಲ್ಲಿ ಅಳವಡಿಸುವಬಗ್ಗೆ
ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ
ಅವರು ತಿಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ಮಳೆಕೊಯ್ಲು ಘಟಕ ನಿರ್ಮಾಣ
ಹೆಚ್ಚಿನವರು ಮಳೆಕೊಯ್ಲು ಘಟಕ ನಿರ್ಮಾಣಕ್ಕೆ ದುಬಾರಿ ವೆಚ್ಚವಾಗುತ್ತದೆ ಎಂದು ಕೈಕಟ್ಟಿ ಕುಳಿತಿದ್ದಾರೆ.ಆದರೆ ಈ ಬಗ್ಗೆ ಭಯ ಪಡುವ ಆವಶ್ಯಕತೆ ಇಲ್ಲ ಅತೀ ಕಡಿಮೆ ಖರ್ಚಿನಲ್ಲಿಯೂ ಮಳೆಕೊಯ್ಲು ಘಟಕ ನಿರ್ಮಾಣ ಮಾಡಲು ಸಾಧ್ಯವಾಗುತ್ತಿದ್ದು ನನ್ನ ಮನೆಗೆ ಅಳವಡಿಸಿದ್ದೇನೆ.ಈ ಕುರಿತು ನಾನು ಮಾಹಿತಿ ನೀಡಲು ಸಿದ್ಧನಿದ್ದೇನೆ.
-ಶ್ರೀಧರ್‌ ನಾಯಕ್‌, ಉದ್ಯಮಿ ,ಮುದ್ರಾಡಿ

ಉದಯವಾಣಿ ಅಭಿಯಾನ ಪ್ರೇರಣೆ
ಪ್ರತಿ ವರ್ಷ ಹೆಚ್ಚುತ್ತಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಯಾವ ಮಾರ್ಗೋಪಾಯ ಹಿಡಿಯುವುದು ಎಂಬ ಯೋಚನೆಯಲ್ಲಿರುವಾಗ ಉದಯವಾಣಿಯಲ್ಲಿ ಪ್ರಕಟವಾದ ಮಳೆಕೊಯ್ಲು ಅಭಿಯಾನ ನಮಗೆ ಪ್ರೇರಣೆಯಾಗಿದೆ.ಈ ನಿಟ್ಟಿನಲ್ಲಿ ಪಂಚಾಯತ್‌ ಮೊದಲು ಅಳವಡಿಸಿ ಇತರರಿಗೆ ಅಳವಡಿಸಲು ಪ್ರೇರೆಪಿಸಲಾಗುತ್ತಿದೆ
-ಶಶಿಕಲಾ ಡಿ.ಪೂಜಾರಿ, ಅಧ್ಯಕ್ಷರು ,ಮುದ್ರಾಡಿ ಗ್ರಾಮ ಪಂಚಾಯತ್‌.

ಜನರೇ ಜಾಗೃತರಾಗಿ
ಈಗಾಗಲೇ ಇಷ್ಟು ಮಳೆ ಸುರಿದರೂ ಕೂಡ ಬಾವಿ ,ಕೆರೆಗಳಲ್ಲಿ ನೀರು ಕಡಿಮೆಯಾಗಿ ಅಂತರ್ಜಲ ವೃದ್ಧಿಯಾಗಿಲ್ಲ . ಕಳೆದ ಬಾರಿ ಮನೆ ಮನೆಗೆ ನೀರು ಪೂರೈಕೆ ಮಾಡಿದ್ದು ,ಈ ಬಾರಿ ಜನರೇ ಜಾಗೃತರಾಗಿ ಅವರ ಪರಿಸರದಲ್ಲಿ ಮಳೆಕೊಯ್ಲು ಅಳವಡಿಸುವುದರ ಮೂಲಕ ಮುಂದೆ ಆಗುವ ನೀರಿನ
ಸಮಸ್ಯೆಗೆ ಕಡಿವಾಣ ಹಾಕಬೇಕಾಗಿದೆ.
-ಸುನಿಲ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ , ಮುದ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next