Advertisement

ಮಳೆ: ಮುಂಜಾಗ್ರತೆ ಕೈಗೊಳ್ಳುವಲ್ಲಿ ಸರಕಾರ ವಿಫ‌ಲ: ಕಾಂಗ್ರೆಸ್‌ ನಾಯಕರ ಆರೋಪ

01:23 AM Jul 13, 2022 | Team Udayavani |

ಮಂಗಳೂರು: ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಜಿಲ್ಲೆಯಲ್ಲಿ ಮಳೆ ಅನಾಹುತಗಳನ್ನು ನಿರ್ವಹಿಸುವಲ್ಲಿ ಸರಕಾರ ವಿಫ‌ಲವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದರೂ ಸಚಿವರು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಂಡಿರಲಿಲ್ಲ. ಅನಾಹುತಗಳು ಸಂಭವಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಸಿಎಂ ಸೂಚಿಸಿದರೂ ಸಚಿವರು ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ಸಚಿವರ ವೈಫ‌ಲ್ಯದಿಂದಾಗಿ ಖುದ್ದು ಸಿಎಂ ಅವರೇ ಭೇಟಿ ನೀಡುವಂತಾಗಿದೆ. ಜಿಲ್ಲೆಯಲ್ಲಿ ಕೃಷಿ ಭೂಮಿ, ತೋಟಕ್ಕೆ ಹಾನಿಯಾಗಿದೆ. ಐವರು ಮೃತಪಟ್ಟಿದ್ದಾರೆ. ಕಡಲ್ಕೊರೆತ, ಗುಡ್ಡ ಕುಸಿತ, ಮನೆಕುಸಿತ, ಕಟ್ಟಡ, ರಸ್ತೆಗಳಿಗೆ ಹಾನಿ ಮೊದಲಾದವು ಸಂಭವಿಸಿವೆ. ಸರಕಾರ ಶೀಘ್ರ ಪರಿಹಾರ ನೀಡಬೇಕು, ದುರಸ್ತಿ ಕೆಲಸ ಮಾಡಬೇಕು ಎಂದರು.

“ಪಠ್ಯಪುಸ್ತಕದ ತಪ್ಪು
ಒಪ್ಪಿಕೊಂಡ ಸರಕಾರ’
ಸಂಸದರು, ಸಚಿವರು ಮಾಡಿದ ಮನವಿಯಂತೆ ನಾರಾಯಣ ಗುರುಗಳ ಪಠ್ಯವನ್ನು ಮರುಸೇರ್ಪಡೆಗೊಳಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆಂದು ವರದಿಯಾಗಿದೆ. ಇದು ಪಠ್ಯ ಕೈಬಿಟ್ಟಿರುವ ವಿಚಾರವನ್ನು ಸರಕಾರ ಒಪ್ಪಿಕೊಂಡಂತೆ. ಸರಕಾರದ ಮುಂದಿನ ಕ್ರಮಗಳನ್ನು ನಿರೀಕ್ಷಿಸುತ್ತಿದ್ದೇವೆ. ಈ ಗೊಂದಲವನ್ನು ಕೂಡ ಮುಖ್ಯಮಂತ್ರಿಯವರು ನಿವಾರಿ ಸಬೇಕು ಎಂದು ಹೇಳಿದರು.

ಕಡಲ್ಕೊರೆತ ತಡೆಗೆ ಕಲ್ಲು ಹಾಕಿಲ್ಲ
ಶಾಸಕ ಯು.ಟಿ. ಖಾದರ್‌ ಮಾತನಾಡಿ, ಸಿಎಂ ಭೇಟಿ ಸ್ವಾಗತಾರ್ಹ. ಆದರೆ ಸಚಿವರು ಇದುವರೆಗೆ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು. ಕಂದಾಯ ಸಚಿವರು ಭೇಟಿ ನೀಡಿ ಹಲವು ದಿನಗಳಾದರೂ ಕಡಲ್ಕೊರೆತ ತಡೆಗೆ ಒಂದು ಕಲ್ಲನ್ನೂ ಹಾಕಿಲ್ಲ. ಶೀಘ್ರ ಪರಿಹಾರ ವಿತರಿಸುವುದಾಗಿ ನೀಡಿರುವ ಭರವಸೆಯೂ ಈಡೇರಿಲ್ಲ. ಮಳೆಗಾಲದ ಮೊದಲು ಚರಂಡಿಗಳ ಹೂಳೆತ್ತಿಲ್ಲ. ಜನಪ್ರತಿನಿಧಿಗಳ ಜತೆ ಸಭೆಯನ್ನು ಕೂಡ ನಡೆಸಿಲ್ಲ ಎಂದರು.

ರಕ್ಷಣೆಯಲ್ಲಿ ವಿಫ‌ಲ
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಕಾರ್ಮಿಕರು ನಾಲ್ಕು ತಾಸು ಮನೆಯೊಳಗಿದ್ದರೂ ಅವರನ್ನು ರಕ್ಷಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಲಿಲ್ಲ. ಊರಿನವರೇ ಜೆಸಿಬಿ ತಂದು ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗೂ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಗಾಯಾಳುವನ್ನು ಬಂಟ್ವಾಳದ ಆಸ್ಪತ್ರೆಗೆ ಅನಂತರ ಮಂಗಳೂರಿನಲ್ಲಿಯೂ ಬಿಲ್‌ ಪಾವತಿ ವಿಚಾರವಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದರು. ಆಸ್ಪತ್ರೆಗೆ ಸಹಾಯಕ ಆಯುಕ್ತರು ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.

Advertisement

ವಿಧಾನಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ, ಮುಖಂಡ ರಾದ ಕೋಡಿಜಾಲ್‌ ಇಬ್ರಾಹಿಂ, ಸಾಹುಲ್‌ ಹಮೀದ್‌, ಲಾರೆನ್ಸ್‌, ಝೋಕಿಂ, ಸದಾಶಿವ ಉಳ್ಳಾಲ, ನೀರಜ್‌ಪಾಲ್‌, ಶುಭೋದಯ ಆಳ್ವ, ಟಿ.ಕೆ. ಸುಧೀರ್‌, ವರದೇಶ್‌ ಅಮೀನ್‌, ಸುರೇಂದ್ರ ಕಾಂಬ್ಳಿ, ಮೆಲ್ವಿನ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

100 ಕೋ.ರೂ. ವಿಶೇಷ ಪ್ಯಾಕೇಜ್‌: ಸಿಎಂಗೆ ಮನವಿ
ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿ 100 ಕೋ.ರೂ. ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ರಸ್ತೆ, ಕಿರು ಸೇತುವೆ ಕೂಡಲೇ ದುರಸ್ತಿ ಮಾಡಿಸಬೇಕು, ಹಾನಿಗೊಳಗಾದ ಶಾಲೆ-ಅಂಗನವಾಡಿಗಳ ಕಟ್ಟಡವನ್ನು ಶೀಘ್ರ ದುರಸ್ತಿಗೊಳಿಸಬೇಕು, ಪೂರ್ಣ ಹಾನಿಗೊಳಗಾದ ಮನೆಗಳಿಗೆ ಬದಲಾಗಿ ಹೊಸ ಮನೆ ನಿರ್ಮಿಸಬೇಕು, ಭಾಗಶಃ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕು, ಕೃಷಿ ಭೂಮಿ ಹಾನಿಗೊಳಗಾದ ರೈತರಿಗೆ, ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು, ಮೃತರ ಕುಟುಂಬಕ್ಕೆ ಕನಿಷ್ಠ ತಲಾ 10 ಲ.ರೂ. ಶೀಘ್ರ ಪರಿಹಾರ ನೀಡಬೇಕು, ಕಡಲ್ಕೊರೆತ ಪ್ರದೇಶಕ್ಕೆ ವೈಜ್ಞಾನಿಕ ರೀತಿ ಯಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next