Advertisement

Rain, Flood; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 167.73 ಕೋ.ರೂ ನಷ್ಟ: ದಿನೇಶ್‌ ಗುಂಡೂರಾವ್‌

01:36 AM Aug 03, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಕಾರಣದಿಂದ ಇಲ್ಲಿಯ ವರೆಗೆ ಒಟ್ಟು 167.73 ಕೋ.ರೂ. ನಷ್ಟವಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಬಳಕೆಗಾಗಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 14.22 ಕೋ.ರೂ. ಹಾಗೂ ತಾಲೂಕುಗಳಲ್ಲಿ ಒಟ್ಟು 4.14 ಕೋ.ರೂ. ಲಭ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಾಗೂ ನೆರೆಹಾನಿಯಿಂದ ತತ್ತರಿಸಿದ ವಿವಿಧ ಪ್ರದೇಶ ಗಳಿಗೆ ಶುಕ್ರವಾರ ಭೇಟಿ ನೀಡಿ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 154 ಮನೆಗಳು ಸಂಪೂರ್ಣ ಹಾಗೂ 484 ಭಾಗಶಃ ಹಾನಿಗೀಡಾಗಿವೆ. 18 ಪ್ರಾಣಿಗಳು ಮೃತಪಟ್ಟಿವೆ.

ಪಂಚಾಯತ್‌ರಾಜ್‌ ಇಲಾಖೆ ಸಂಬಂಧಪಟ್ಟ ರಸ್ತೆ ಹಾನಿಯಾಗಿ 32.31 ಕೋ.ರೂ., ಕಿರು ಸೇತುವೆ-ಕಾಲುಸಂಕ ಹಾನಿಯಾಗಿ 21.81 ಕೋ.ರೂ., ಲೋಕೋಪಯೋಗಿ ಎಂಡಿಆರ್‌ ರಸ್ತೆ ಹಾನಿಯಾಗಿ 41.20 ಕೋ.ರೂ., ಎಸ್‌ಎಚ್‌ ರಸ್ತೆ ಹಾನಿಯಾಗಿ 40.49 ಕೋ.ರೂ., ಸೇತುವೆ-ಕಾಲು ಸಂಕ ಹಾನಿಯಾಗಿ 21.78 ಕೋ.ರೂ. ಹಾಗೂ ಮೆಸ್ಕಾಂಗೆ ಸಂಬಂಧಪಟ್ಟ ಟ್ರಾನ್ಸ್‌ಫಾರ್ಮರ್‌, ಕಂಬ ಸಹಿತ 10.14 ಕೋ.ರೂ ಮೌಲ್ಯದ ಸೊತ್ತು ನಷ್ಟವಾಗಿದೆ ಎಂದರು.

ಮಂಗಳೂರು, ಉಳ್ಳಾಲ ಹಾಗೂ ಕಡಬ ಸಹಿತ 3 ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 234 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ 0.40 ಹೆಕ್ಟೇರ್‌ ಪ್ರದೇಶ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ಒಟ್ಟು 7.190 ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದರು.

ಸಿಎಂ ಭೇಟಿ ಇತ್ತು
ಜಿಲ್ಲೆಗೆ ಸಿಎಂ ಶನಿವಾರ ಭೇಟಿ ನೀಡಲು ನಿರ್ಧರಿಸಿದ್ದರು. ನಾನು ಭೇಟಿ ನೀಡಿದ ಕಾರಣ ಅವರು ಬರುವುದು ಬೇಡ ಎಂದು ಮನವರಿಕೆ ಮಾಡಿದ್ದೇನೆ ಎಂದರು. ಅಭಯಚಂದ್ರ ಜೈನ್‌, ಡಿ.ಸಿ. ಮುಲ್ಲೆ„ ಮುಗಿಲನ್‌, ಜಿ.ಪಂ. ಸಿಇಒ ಡಾ| ಆನಂದ್‌, ಮೆಸ್ಕಾಂ ಎಂಡಿ ಪದ್ಮಾವತಿ, ಪಾಲಿಕೆ ಆಯುಕ್ತ ಆನಂದ್‌ ಉಪಸ್ಥಿತರಿದ್ದರು.

Advertisement

ಭಾಗಶಃ ಹಾನಿಯಾದ ಮನೆಗೆ 50 ಸಾವಿರ ರೂ.
ರಾಜ್ಯ ಸರಕಾರದ ಹೊಸ ಆದೇಶದ ಪ್ರಕಾರ ಪೂರ್ಣ ಹಾನಿಯಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರದ ಜತೆಗೆ ದೇವರಾಜ್‌ ಅರಸು ವಸತಿ ಯೋಜನೆಯಡಿ ಹೆಚ್ಚುವರಿಯಾಗಿ 1.20 ಲಕ್ಷ ರೂ., ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ವರ್ಗಗಳಿಗೆ 1.50 ಲಕ್ಷ ರೂ. ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ 1 ಲಕ್ಷ ರೂ. ಒದಗಿಸಲಾಗುತ್ತದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ದುರಸ್ತಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 6,500 ರೂ.ಜತೆಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 43,500 ರೂ. ಸೇರಿಸಿ ಒಟ್ಟು 50 ಸಾ. ರೂ. ಒದಗಿಸಲಿದೆ. ಪ್ರವಾಹದಿಂದ ಬಟ್ಟೆಬರೆ ಕಳೆದುಕೊಂಡರೆ 2,500 ರೂ., ಗೃಹೋಪಯೋಗಿ ವಸ್ತುಗಳು ಹಾನಿಯಾದರೆ 2,500 ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಪರಿಸರ ಸಂರಕ್ಷಣೆ ಆದ್ಯತೆಯಾಗಲಿ
ವಯನಾಡಿನಂತಹ ಘಟನೆ ನಮ್ಮ ಪರಿಸರದ ಮೇಲೆ ಆಗುವಂತಹ ಒತ್ತಡದಿಂದ ಘಟಿಸುತ್ತಿದೆ. ಹಾಗೂ ಅಭಿವೃದ್ಧಿ ಸಂದರ್ಭ ಪರಿಸರ ಸಮತೋಲನ ಮಾಡದ ಕಾರಣದಿಂದ ನಡೆಯುತ್ತಿದೆ. ಪಶ್ಚಿಮಘಟ್ಟಗಳು ಸೂಕ್ಷ್ಮಪ್ರದೇಶ. ಇಲ್ಲಿ ಅಭಿವೃದ್ಧಿ ನಡೆಸುತ್ತಾ ಹೋದರೆ ಇಂತಹ ಅನಾಹುತಗಳು ಹೆಚ್ಚಾಗುತ್ತವೆ. ಪರಿಸರ ಸಂರಕ್ಷಣೆ ಹಾಗೂ ಕಾಡು ಸಂರಕ್ಷಣೆ ಆದ್ಯತೆಯಾಗಿ ನಡೆಯಬೇಕು.

ಮಾಧವ ಗಾಡ್ಗಿಳ್‌ ವರದಿ ಬಗ್ಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ ಅವರು ಕಸ್ತೂರಿರಂಗನ್‌ ವರದಿ ಜಾರಿಗೆ ಸ್ಥಳೀಯರೇ ವಿರೋಧ ಮಾಡುತ್ತಿದ್ದಾರೆ ಎಂದರು. ಎತ್ತಿನಹೊಳೆ ಯೋಜನೆಯೂ ಪಶ್ಚಿಮಘಟ್ಟದಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಈ ಬಗ್ಗೆ ಮಾತನಾಡು ವಷ್ಟು ದೊಡ್ಡ ತಜ್ಞ ನಾನಲ್ಲ. ವಯನಾಡು ಅನಾಹುತಕ್ಕೆ ಇದು ಕಾರಣವಲ್ಲ’ ಎಂದರು.

ವಿವಿಧೆಡೆಗೆ ಸಚಿವರ ಭೇಟಿ
ಮಂಗಳೂರಿನ ಅದ್ಯಪಾಡಿ, ಕೆತ್ತಿಕಲ್‌ಗ‌ುಡ್ಡೆ, ಬಂಟ್ವಾಳದ ಅಮ್ಮುಂಜೆ ಹೊಳೆ ಬದಿ, ಗೂಡಿನಬಳಿ, ಆಲಡ್ಕ, ನಾವೂರಿನ ಕಡವಿನ ಬಾಗಿಲು, ನೇತ್ರಾವತಿ ಸೇತುವೆ, ಅಣೆಜ ರಸ್ತೆ ಬದಿ, ಕಂಚಿಕಾರ ಪೇಟೆ ರಸ್ತೆ ಹಾನಿ ಪ್ರದೇಶ, ಅಜಿಲಮೊಗರು ಮಸೀದಿ, ಬೆಳ್ತಂಗಡಿಯ ಮಾಲಾಡಿ ಹಾಗೂ ಲಾಯಿಲಕ್ಕೆ ಭೇಟಿ ನೀಡಿದ ಸಚಿವರು ಮಳೆ ಹಾನಿ ಕುರಿತು ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next