ಗದಗ: ಈ ಬಾರಿ ಉತ್ತರ ಕರ್ನಾಟಕದಲ್ಲಿ ಆವರಿಸಿರುವ ಭೀಕರ ಪ್ರವಾಹ ಹಾಗೂ ಅತಿವೃಷ್ಟಿಯ ಬಿಸಿ ನಗರದ ಜಾನುವಾರು ಸಂತೆಗೂ ತಟ್ಟಿದೆ. ಸತತ ಮಳೆಯಿಂದಾಗಿ ಈಗಾಗಲೇ ಜಿಲ್ಲೆಯ ಬಹುತೇಕ ಬೆಳೆಗಳು ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬೆಳೆ ಹಾನಿಯಿಂದ ಕಂಗೆಟ್ಟಿರುವ ರೈತರು ಜಾನುವಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಕೋವಿಡ್ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಇತ್ತೀಚೆಗೆ ಜಾನುವಾರು ಸಂತೆ ಪುನಾರಂಭಗೊಂಡಿದೆ. ಆದರೆ, ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ,ಗೋವಿನ ಜೋಳ ಬಹುತೇ ಕ ಮಳೆ ಅಬ್ಬರಕ್ಕೆ ಹಾನಿಗೀಡಾಗಿವೆ. ಗ್ರಾಮೀಣ ಭಾಗದಲ್ಲಿ ಹುಲ್ಲು ಹೊರತುಪಡಿಸಿದರೆ, ಒಣ ಮೇವು ಹಾಗೂ ವಿವಿಧ ಬೆಳೆಗಳ ಸೊಪ್ಪು ದೊರೆಯುತ್ತಿಲ್ಲ. ಬೆಳೆ ನಷ್ಟದ ಮಧ್ಯೆ ಜಾನುವಾರುಗಳ ಹೊಟ್ಟೆ ತುಂಬಿಸುವುದುಕಷ್ಟವಾದೀತು ಎಂಬ ಆತಂಕದಿಂದ ಅನೇಕರು ತಮ್ಮ ಜಾನುವಾರುಗಳನ್ನು ಮಾರುತ್ತಿದ್ದಾರೆ. ಆದರೆ ಕೊಳ್ಳುವವರೇ ಇಲ್ಲವಾಗಿದ್ದಾರೆ.
ಸಂತೆಯಲ್ಲಿ ಕೊಳ್ಳುವವರೇ ಇಲ್ಲ: ಲಾಕ್‌ಡೌನ್ ಸಡಿಲಿಕೆ ಬಳಿಕ ಇತ್ತೀಚೆಗಷ್ಟೆ ಜಾನುವಾರು ಸಂತೆಗೆಜಿಲ್ಲಾಡಳಿತ ಅನುಮತಿಸಿದೆ. ಈ ಹಿಂದೆಯಂತೆ ಶನಿವಾರ ಜಿಲ್ಲೆಯ ನಾನಾ ಭಾಗದಿಂದ ಹಲವಾರುಜೋಡಿ ಎತ್ತುಗಳು ಸಂತೆಗೆ ಆಗಮಿಸಿದ್ದವು. ಜವಾರಿ, ಮೂಡಲ, ಕಿಲಾರಿ, ಯರೀಸೀಮೆ, ಮೌಳಿ ಸೇರಿದಂತೆ ವಿವಿಧ ತಳಿಗಳ ಎತ್ತುಗಳನ್ನು ತರಲಾಗಿತ್ತು. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಆವರಿಸಿದ್ದರಿಂದ ಕೃಷಿ ಚಟುವಟಿಕೆಗಳು ಬಹುತೇಕಸ್ಥಗಿತಗೊಂಡಿವೆ. ಬಿಳಿ ಜೋಳ ಸೇರಿದಂತೆ ಮತಿತರೆ ಬೆಳೆಗಳ ಬಿತ್ತನೆಗೂ ಅವಧಿ ಮೀರಿದೆ. ಪ್ರಸಕ್ತ ಸಾಲಿನಹಿಂಗಾರು ಬೆಳೆಯೂ ಅನಿಶ್ಚಿತವಾಗಿದೆ. ಹೀಗಾಗಿ ಅನಿವಾರ್ಯವಾಗಿ ರೈತರು ಜಾನುವಾರುಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ.
ಸುಮಾರು 250ರಿಂದ 300 ಜೋಡಿಗಳು ಸಂತೆಗೆ ಬಂದಿದ್ದು, ಕೊಳ್ಳುವವರೇ ಇಲ್ಲ. ಹೀಗಾಗಿ ಬಹುತೇಕ ರೈತರು ಎತ್ತುಗಳೊಂದಿಗೆ ಮರಳಿ ಹೋಗುವಂತಾಗಿದೆ ಎನ್ನುತ್ತಾರೆ ನವಲಗುಂದ ರೈತ ಶ್ರೀಕಾಂತ ದೊಡ್ಡಮನಿ.
ಕಳೆದ ಮುಂಗಾರಿಗೂ ಮುನ್ನ ಎತ್ತುಗಳಿಗೆ ಭಾರಿ ಬೇಡಿಕೆ ಇತ್ತು. ಜೊಡಿ ಎತ್ತಿಗೆ 40 ಸಾವಿರದಿಂದ ಲಕ್ಷರೂ. ದರ ಕೇಳಿ ಬಂದಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದು ಎತ್ತುಗಳು ಕೇಳುತ್ತಿದ್ದರು. ಆದರೆ, ಈ ಬಾರಿಯಾದರೂ ಉತ್ತಮ ಮಳೆ, ಬೆಳೆಯಾಗಲಿದೆ ಎಂಬ ನಿರೀಕ್ಷೆಯಿಂದ ಎತ್ತುಗಳನ್ನು ಮಾರಾಟ ಮಾಡಿರಲಿಲ್ಲ. ಆದರೆ, ಸತತ ಮಳೆಯಿಂದ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರಿಂದ ರೈತರ ಎಲ್ಲ ಬೆಳೆಗಳು ಕೈಕೊಟ್ಟಿವೆ. ಬೆಳೆಗಳ ಬಿತ್ತನೆಗೆ ಮಾಡಿದಖರ್ಚೂ ವಾಪಸ್ಸಾಗಿಲ್ಲ. ಇಂತಹ ಸಂದರ್ಭದಲ್ಲಿ ನಾವು ಬುದುಕುವುದೇ ಕಷ್ಟಕರವಾಗಿದೆ. ಎತ್ತುಗಳಿಗೆ ಮೇವು ಪೂರೈಸಲಾಗದೇ ಮಾರಾಟಕ್ಕಿಟ್ಟಿದ್ದೇವೆ.ನೋಡಿದವರು ಅರ್ಧಕ್ಕಿಂತ ಕಡಿಮೆ ಬೆಲೆ ಕಟ್ಟುತ್ತಿದ್ದಾರೆ. 50 ಸಾವಿರ ರೂ. ಬೆಲೆಯ ಜೋಡಿ ಎತ್ತುಗಳನ್ನು 25, 30 ಸಾವಿರಕ್ಕೆ ಕೇಳುತ್ತಿದ್ದಾರೆ ಎನ್ನುತ್ತಾರೆ ಎತ್ತುಗಳ ಮಾಲೀಕರು.