Advertisement

ಮಳೆಗೆ ತೊಯ್ದು ತೊಪ್ಪೆಯಾದ ಬೆಳೆ

02:02 PM Nov 06, 2021 | Team Udayavani |

ಕಂಪ್ಲಿ: ತಾಲ್ಲೂಕಿನ ಪಟ್ಟಣವೂ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಅನಿರೀಕ್ಷಿತವಾಗಿ ಆಗಾಗ ಮಳೆಯಾಗುತ್ತಿದ್ದು ಈ ಮಳೆಯಿಂದ ಕೊಯ್ಲು ಮಾಡಿ ಹಾಕಿರುವ ವಾಣಿಜ್ಯ ಬೆಳೆಯಾದ ಒಣಮೆಣಸಿನಕಾಯಿ ಮತ್ತು ಭತ್ತದ ರಾಶಿಗಳು ತೋಯ್ದು ತೊಪ್ಪೆಯಾಗಿದ್ದು ಅನ್ನದಾತರು ಆತಂಕಕ್ಕೊಳಗಾಗಿದ್ದಾರೆ.

Advertisement

ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಗ್ರಾಮದ ಗ್ರಾಪಂ ಮುಂಭಾಗದ ವಿಶಾಲವಾದ ಮೈದಾನದಲ್ಲಿ ವಾಣಿಜ್ಯ ಬೆಳೆಯಾದ ಒಣಮೆನಸಿನಕಾಯಿಗಳನ್ನು ಕೊಯ್ಲು ಮಾಡಿ ಒಣಗಲು ಹಾಕಿದ್ದಾರೆ. ಆದರೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಒಣಗಲು ಹಾಕಿದ್ದ ಮೆಣಸಿನಕಾಯಿಗಳು ಮಳೆ ನೀರಿಗೆ ಹರಿದುಕೊಂಡು ಹೋಗಿವೆ.

ಆದರೆ ಮೆಟ್ರಿ ಗ್ರಾಮವನ್ನು ಹೊರತು ಪಡಿಸಿದರೆ ಅಕ್ಕಪಕ್ಕದ ಗ್ರಾಮಗಳಲ್ಲಿ ಅಂಥ ಹೇಳಿಕೊಳ್ಳುವಂತ ಮಳೆಯೇ ಆಗಿಲ್ಲ. ಇದನ್ನು ಗಮನಿಸಿದ ಮೆಣಸಿನಕಾಯಿ ಬೆಳೆದ ರೈತರು ಕಳೆದ ಹಲವು ತಿಂಗಳುಗಳಿಂದ ಸಾವಿರಾರು ರೂಗಳನ್ನು ವ್ಯಯಿಸಿ ಮೆಣಸಿನಕಾಯಿ ಬೆಳೆದು, ಕೊಯ್ಲು ಮಾಡಿ ಒಣಗಿಸಲು ಹಾಕಿದ್ದರೆ ಮಳೆರಾಯ ಈ ರೀತಿ ಮಾಡಿದ್ದಾನೆ ಎಂದು ನೋವನ್ನು ತೋಡಿಕೊಂಡರು. ಇನ್ನು ಪಟ್ಟಣದಲ್ಲಿ ದಿಢೀರನೇ ರಭಸವಾಗಿ ಹಾಗೂ ಜಿಟಿ ಜಿಟಿ ಮಳೆಯಾಗಿದ್ದು ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಶಿ ಹಾಕಿರುವ ನೂರಾರು ರೈತರ ಭತ್ತದ ಫಸಲು ಮಳೆಗೆ ತೋಯ್ದಿದೆ.

ಬೀಳುವ ಮಳೆಯಲ್ಲಿಯೇ ರೈತರು ಭತ್ತವನ್ನು ರಾಶಿ ಮಾಡಲು ಹರಸಾಹಸಪಡುತ್ತಿದ್ದರು. ಇದೀಗ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಒಣಮೆಣಸಿನಕಾಯಿ ಕೊಯ್ಲು ನಡೆಯುತ್ತಿದೆ. ಆದರೆ ಅನಿರೀಕ್ಷಿತವಾಗಿ ಬೀಳುತ್ತಿರುವ ಮಳೆ ಮಾತ್ರ ಎರಡು ಬೆಳೆಗಳನ್ನು ಬೆಳೆದ ರೈತರನ್ನು ಆತಂಕ್ಕೆ ದೂಡಿದ್ದಾನೆ.

ಈ ಅನಿರೀಕ್ಷಿತ ಮಳೆಯಿಂದ ಮೆಣಸಿನಕಾಯಿ ತೋಯ್ದು ಕೊಳೆತರೆ, ಇನ್ನು ಭತ್ತ ಮಳೆಯಲ್ಲಿ ನೆನೆದರೆ ಅದಕ್ಕೆ ಬೆಲೆಯೇ ಬರುವುದಿಲ್ಲವೆಂದು ಅನ್ನದಾತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಉತ್ತಮವಾಗಿ ಮಳೆಯಾಗಿದ್ದು, ಉತ್ತಮ ಇಳುವರಿ ಬರುತ್ತದೆ ಉತ್ತಮ ಬೆಲೆ ಸಿಗಬಹುದೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ರೈತರಿಗೆ ವರುಣ ಅನಿರೀಕ್ಷಿತ ಆಗಮನ ಕಂಗಾಲಾಗುವಂತೆ ಮಾಡಿದ್ದಾನೆ.

Advertisement

-ಜಿ. ಚಂದ್ರಶೇಖರಗೌಡ

Advertisement

Udayavani is now on Telegram. Click here to join our channel and stay updated with the latest news.

Next