Advertisement

ಬೆಳೆಗಾರರ ಸಂಭ್ರಮಕ್ಕೆ ಮಳೆ ಅಡ್ಡಿ

05:20 PM Dec 02, 2019 | Team Udayavani |

ಹುಳಿಯಾರು: ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆ ರಾಗಿ ಬೆಳೆಗಾರರಿಗೆ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದೆ.

Advertisement

ಸಮಯಕ್ಕೆ ತಕ್ಕಂತೆ ಹದವಾಗಿ ಉತ್ತಮ ಮಳೆಯಾಗಿರುವುದರಿಂದ ತಾಲೂಕಿನಾದ್ಯಂತ ನಿರೀಕ್ಷೆಗೂ ಮೀರಿದ ರಾಗಿ ಬೆಳೆ ಬಂದಿದ್ದು, ಇನ್ನೇನು ಕೈ ಸೇರುವ ಸಂದರ್ಭ ಮಳೆ ಬರುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಏಳೆಂಟು ವರ್ಷಗಳಿಂದ ಮಳೆಯಾಗದೆ ತಾಲೂಕು ನಿರಂತರ ಬರಗಾಲಕ್ಕೆ ಗುರಿಯಾಗಿತ್ತು. ಈ ವರ್ಷವೂ ಪೂರ್ವ ಮುಂಗಾರು ಕೈ ಕೊಟ್ಟು ಬಿತ್ತಿದ್ದ ಬೀಜ ಭೂಮಿಯಿಂದ ಮೇಲೇರಲೇ ಇಲ್ಲ. ಈ ವರ್ಷವೂ ಬರ ಕಟ್ಟಿಟ್ಟ ಬುತ್ತಿ ಎನ್ನುವಷ್ಟರಲ್ಲಿ ಉತ್ತಮ ಮಳೆ ಬಂದು ರೈತರಮೊಗದಲ್ಲಿ ಸಂತಸ ಮೂಡಿಸಿತ್ತು. ರಾಗಿ, ಸಾವೆ, ನವಣೆ ಈ ಬಾರಿ ರೈತರಿಗೆ ಬಂಪರ್‌ ಎನ್ನುವಂತೆ ಬೆಳೆ ಬಂದಿದೆ.

ಸಂಕಷ್ಟ: ಹಾಗಾಗಿಯೇ ರಾಗಿ ಬೆಳೆಗಾರರು ಈ ವರ್ಷ ಸಂಭ್ರಮ ಮತ್ತು ಸಡಗರದಿಂದರಾಗಿ ಕಟಾವು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಮನಗಂಡ ಕೆಲವರು ಯಂತ್ರದ ಮೊರೆ ಹೋಗಿ ಕಟಾವು ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸ್ವಯಂ ಕಟಾವು ಮಾಡುತ್ತಿರುವ ರೈತರು ಈ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ತಾಲೂಕಿನಲ್ಲಿ ಮೂರ್‍ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ತುಂತುರು ಮಳೆ ಶುರುವಾಗಿ ರೈತರಲ್ಲಿ ಆಂತಕ ಸೃಷ್ಟಿಸಿತ್ತು. ಈ ಋತುಮಾನದಲ್ಲಿ ಹಿಂದೆಂದೂ ಮಳೆ ಬಂದಿದ್ದು, ರೈತರು ಭಂಡ ಧೈರ್ಯ  ದಿಂದ ರಾಗಿ ಕಟಾವು ಮಾಡಿ ಹೊಲದಲ್ಲೇ ಬಿಟ್ಟಿದ್ದಾರೆ. ಆದರೆ ಶನಿವಾರ ರಾತ್ರಿ ಸರಿ ಸುಮಾರು ಎರಡೂವರೆ ಗಂಟೆ ತಾಲೂಕಿನಲ್ಲಿ ಜೋರು ಮಳೆ ಸುರಿದಿದ್ದು, ಕಟಾವಿಗೆಬಂದಿರುವ, ಕಟಾವು ಮಾಡಿರುವ, ಕಣದಲ್ಲಿ ಸುರಿದಿರುವ ರಾಗಿ ಸಂಪೂರ್ಣ ನೆನೆದಿದೆ.

ಈ ರಾಗಿ ಒಣಗದೇ ಕಣ ಮಾಡಲು ಬರುವುದಿಲ್ಲ.ಭಾನುವಾರವೂ ಮೋಡ ಕವಿದ ವಾತವರಣವಿದ್ದು, ಬಿಸಿಲು ಬರಲೇ ಇಲ್ಲ. ಇದು ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಒಟ್ಟಾರೆ ವಾಯುಭಾರ ಕುಸಿತದಿಂದ ಬರುತ್ತಿರುವ ಮಳೆ ತಾಲೂಕಿನಲ್ಲಿ ಕಟಾವು ಕಾರ್ಯಕ್ಕೆ ಅಡ್ಡಿಯುಂಟು ಮಾಡಿದೆ. ರಾಗಿತೆನೆ ನೆನೆದಿರುವುದರಿಂದ ಯಂತ್ರದಿಂದಲೂಕಟಾವು ಮಾಡಲಾಗುತ್ತಿಲ್ಲ. ಕಟಾವು ಮಾಡಿಹೊಲ, ಕಣದಲ್ಲಿ ಬಿಟ್ಟಿದ್ದ ರಾಗಿ ಹುಲ್ಲು ಒಣಗಿಸುವುದು ರೈತರಿಗೆ ಹೊಸ ಸವಾಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಮಳೆರಾಯ ರೈತನಪಾಲಿಗೆ ವರವಾಗುವುದೋ, ಶಪ ವಾಗುವುದೋ ಕಾದು ನೊಡಬೇಕಿದೆ.

Advertisement

 

-ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next