ಬೇತಮಂಗಲ: ಹೋಬಳಿಯಲ್ಲಿ ಕಳೆದ 15 ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ ಸುರಿಯುವ ತುಂತರು ಮಳೆ ಸುರಿಯುತ್ತಿದೆ. ಇದರಿಂದ ರಾಗಿ ಕೊಯ್ಲಿಗೆ ಅಡ್ಡಿಯಾಗಿದೆ. ತೊಗರಿ, ಕಡಲೆ, ಮಳೆಯಾಶ್ರದಲ್ಲಿ ಬೆಳೆದ ಬೆಳೆಗಳಿಗೆ ಕೀಟಬಾಧೆಯೂ ಕಾಣಿಸಿಕೊಂಡು, ರೈತರಿಗೆ ಕೈಬಂದ ತುತ್ತು ಬಾಯಿಗೆ ಬರದಂತಾಗಿ ನಷ್ಟ ಅನುಭವಿಸುವಂತಾಗಿದೆ. ತುಂತುರು ಮಳೆ ತೊಗರಿ, ಅಲಸಂದಿ, ಅವರೆ, ಹುರುಳಿ ಬೆಳೆಗೆ ಅನುಕೂಲ ಕಲ್ಪಿಸಿದ್ರೆ, ಮೋಡ ಕವಿದ ವಾತಾವರಣ ರೋಗ, ಕೀಟ ಬಾಧೆಗೆ ಕಾರಣವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆ ತುಂಬಿದ್ದ ಕಾಳು: ಬರಪೀಡಿತ ಪ್ರದೇಶದ ಜಿಲ್ಲೆಯ ರೈತರು 10 ವರ್ಷಗಳಿಂದಲೂ ಸಮರ್ಪಕ ಮಳೆ ಬಾರದೇ, ಬೆಳೆ ಬೆಳೆಯಲಾಗದೇ ನಷ್ಟವನ್ನು ಅನುಭವಿಸಿದ್ದರು. ಆದರೆ, ಈ ಬಾರಿ ಆಗಾಗ ಮಳೆ ಕೈಕೊಟ್ಟರೂ ಜನಜಾನುವಾರುಗಳ ಮೇವಿಗೆ ಯಾವುದೇ ತೊಂದರೆ ಇಲ್ಲ. ಹಲವು ವರ್ಷಗಳ ನಂತರ ದವನ ಧಾನ್ಯ ಮನೆಯನ್ನು ತುಂಬಿಸಿದೆ. ಆದಾಯ ಬರದೇ ಇದ್ರೂ, ಕನಿಷ್ಠ ಮನೆಗಾದ್ರೂ ಅಲ್ಪ ಸ್ವಲ್ಪ ಕಾಳಾಯ್ತಲ್ಲ ಎಂದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೊಯ್ಲು ವಿಳಂಬ: ಮುಂಗಾರು ಪೂರ್ವದಲ್ಲಿ ಉತ್ತಮ ಸುರಿದ ಮಳೆ, ನಂತರ ಬಿತ್ತನೆ ಸಮಯಕ್ಕೆ ಕೈಕೊಟ್ಟಿತ್ತು. ನಂತರ ತಡವಾಗಿ ಬಂದ ಹದಮಳೆಗೆ ಕೆಲವು ರೈತರು ಶೇಂಗಾ, ರಾಗಿ, ಸಾಮೆ, ಸಜ್ಜೆ, ಕಡಲೆ ಹೀಗೆ.. ಮಳೆಯಾಶ್ರಿತ ಏಕದಳ, ದ್ವಿದಳ ಧಾನ್ಯಗಳ ಬಿತ್ತನೆ ಮಾಡಿದ್ದರು. ಬಿತ್ತನೆ ಹಿಂದುಳಿದ ಕಾರಣ ಫಸಲು ಕೂಡ ಕೊಯ್ಲಿಗೆ ಬರಲು ವಿಳಂಬವಾಗಿದೆ.
ಕೊಯ್ಲು, ಒಕ್ಕಣೆಗೆ ಅಡ್ಡಿ: ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಾರ್ತೀಕ ಮಾಸದ ಮುನ್ನವೇ ಕೊಯ್ಲಿಗೆ ಬಂದಿತ್ತು. ಆಗ ಜಡಿ ಮಳೆ ಸುರಿದು ಕಾರಣ ಅಲ್ಪ ಸ್ಪಲ್ಪ ಬೆಳೆ ಮಳೆಗೆ ತೊಯ್ದು ಹೋಗಿತ್ತು. ಕೆಲವು ರೈತರು ನಷ್ಟ ಅನುಭವಿಸುವಂತಾಗಿತ್ತು. ಆದರೆ, ಈಗ ಜಡಿ ಮಳೆ ಸುರಿಯದಿದ್ದರೂ ಮೋಡ ಕವಿದ ವಾತಾವರಣ, ತುಂತುರು ಮಳೆ ಆಗುತ್ತಿರುವ ಕಾರಣ ಹಿಂದುಳಿದು ಬಿತ್ತನೆ ಮಾಡಿದ್ದ ಬೆಳೆ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ.
ಕಾಳು ಒಣಗಿಸಲು ಬಿಸಿಲು ಇಲ್ಲ: ಹೋಬಳಿಯ ಕೆಲವು ಭಾಗದ ರೈತರು ಈಗಾಗಲೇ ಬೆಳೆ ಕೊಯ್ಲು ಮಾಡಿ ದ್ದಾರೆ. ಇನ್ನು ಕೆಲವು ಕಡೆ ಕೊಯ್ಲು ಪ್ರಾರಂಭಿಸಿದ್ದಾರೆ. ಕೊಯ್ಲು ಮಾಡಿದವರು ಒಕ್ಕಣೆಗಾಗಿ ಬೆಳೆಯನ್ನು ಗೂಡು ಕಟ್ಟಿದ್ದಾರೆ. ಇನ್ನು ಕೆಲವರು ಕೊಯ್ಲು ಆರಂಭಿಸಿದ್ದು, ಎಲ್ಲಿ ಮಳೆ ಬಂದು ರಾಗಿ ತೆನೆ ನೆನೆಯುತ್ತದೋ ಎಂಬ ಆತಂಕದಲ್ಲಿದ್ದಾರೆ. ಇವೆಲ್ಲದರ ನಡುವೆ ಕೊಯ್ಲು ಮಾಡಿ, ಒಕ್ಕಣೆಯೂ ಮುಗಿಸಿದ ರೈತರು ದವಸ ಧಾನ್ಯವನ್ನು ಒಣಗಿಸಲು ಮೋಡ ಮುಸುಕಿದ್ದು, ಆಗಾಗ ಸುರಿಯುವ ತುಂತುರು ಮಳೆ ಅಡ್ಡಿಯಾಗಿದೆ.
ಮೊಳೆಕೆ ಹೊಡೆದ ತೆನೆ: ಈಗಾಗಲೇ ಫಸಲಿಗೆ ಬಂತು ನಿಂತಿರುವ ತೆನೆಯೂ ಮಾಗಿ ನೆಲಕ್ಕೆ ಬಿದ್ದಿದ್ದು, ತಂಪು ವಾತಾವರಣ, ತುಂತುರು ಮಳೆಗೆ ಕಡ್ಡಿಯಲ್ಲೇ ಮೊಳಕೆ ಹೊಡೆಯಲಾರಂಭಿಸಿದೆ.
ರೋಗ ಬಾಧೆ: ಶೇಂಗಾ, ರಾಗಿ ಬೆಳೆಯ ನಡುವೆ ಹಾಕಿದ್ದ ತೊಗರಿ, ಅಲಸಂದೆ, ಅವರೆ, ಹುರುಳಿ ಹಾಗೂ ಕಡಲೆ ಬೆಳೆಗೆ ತುಂತುರು ಮಳೆಯಿಂದ ಜೀವ ಕಳೆ ಬಂದರೆ, ಮೋಡ ಮುಸುಕಿದ ವಾತಾವರಣ ಗಿಡದಲ್ಲಿನ ಹೂ ಉದುರಿಸುವುದರ ಜೊತೆಗೆ ರೋಗ, ಕೀಟ ಬಾಧೆಯನ್ನೂ ತಂದೊಡ್ಡಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.