ಸತತ ಮೂರನೇ ವರ್ಷ ರಾಜ್ಯ ನೆರೆಗೆ ತುತ್ತಾಗಿದೆ. ಆದರೆ ಈ ಬಾರಿ ಕೋವಿಡ್ ವೈರಸ್ ಹಾವಳಿ ಹಾಗೂ ಅದು ತಂದೊಡ್ಡಿದ ಆರ್ಥಿಕ ಸಂಕಷ್ಟದಂತಹ ಸವಾಲುಗಳ ಜತೆಗೆ ಮುಖ್ಯಮಂತ್ರಿಯಾದಿಯಾಗಿ ಹಲವು ಸಚಿವರ ಅನುಪಸ್ಥಿತಿಯಲ್ಲಿ ಇದನ್ನು ಎದುರಿಸಬೇಕಾಗಿದೆ. ಕೇವಲ ವಾರದ ಅಂತರದಲ್ಲಿ ಸುಮಾರು 32 ಸಾವಿರ ಹೆಕ್ಟೇರ್ ಕೃಷಿ ನಾಶವಾಗಿದ್ದು ನಾಲ್ಕು ಸಾವಿರ ಕೋಟಿ ರೂ. ಗೂ ಅಧಿಕ ನಷ್ಟವಾಗಿದೆ.
ಸಮಸ್ಯೆಯ ತೀವ್ರತೆ ಅರಿತ ಸರಕಾರ, ಮುಂಗಡ ಅನುದಾನಕ್ಕೆ ಮೊರೆ ಇಟ್ಟಿದೆ. ತಕ್ಷಣದ ಪರಿಹಾರ ಮತ್ತು ಪುನರ್‌ವಸತಿ ಕಾರ್ಯಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮೊದಲ ಕಂತು 395 ಕೋ. ರೂ. ತುರ್ತು ಬಿಡುಗಡೆ, ಹೆಚ್ಚುವರಿಯಾಗಿ ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸುವಂತೆಯೂ ಕೋರಿದೆ. ಈ ಮಧ್ಯೆ ದೀರ್ಘಾವಧಿಯ ಪರಿಹಾರವಾಗಿ ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರಗಳಲ್ಲಿ, ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ನೆರೆ ರಾಜ್ಯಗಳಲ್ಲಿ ಭೂಕುಸಿತ ಸಂಬಂಧ ಮ್ಯಾಪಿಂಗ್ ಮತ್ತು ಮುನ್ಸೂಚನಾ ವ್ಯವಸ್ಥೆ ಸ್ಥಾಪಿಸುವ ಸಂಬಂಧ ಕೇಂದ್ರ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆಯಿಂದ ಅಧ್ಯಯನ ಕೈಗೊಳ್ಳಲು ಮನವಿ ಮಾಡಲಾಗಿದೆ.
ಆದರೆ ಇದು ಶಾಶ್ವತ ಪರಿಹಾರಕ್ಕೆ ನಾಂದಿ ಹಾಡಬಲ್ಲದೇ? ಅನುಭವಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಖಂಡಿತ ಇಲ್ಲ. ಪ್ರತಿ ಸಲ ನಿರ್ದಿಷ್ಟ ಪ್ರದೇಶಗಳಲ್ಲೇ ನೆರೆ ಉಕ್ಕಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ನೆರವಿನ ಸಹಾಯಹಸ್ತಗಳು, ತಾತ್ಕಾಲಿಕ ಕಾಳಜಿ ಕೇಂದ್ರಗಳು, ಪರಿಹಾರಕ್ಕಾಗಿ ಮನವಿಯಿಂದ ಆಚೆಗೆ ನಾವು ಯೋಚಿಸಿದಂತೆ ಕಾಣುವುದಿಲ್ಲ. ಯಾಕೆಂದರೆ 2009ರಲ್ಲೂ ನೆರೆ ಹಾವಳಿ ಉಂಟಾಗಿತ್ತು. ಉತ್ತರ ಕರ್ನಾಟಕದ ನೂರಾರು ಹಳ್ಳಿಗಳನ್ನೇ ಸ್ಥಳಾಂತರಿಸಬೇಕಾಯಿತು.
ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಪ್ರವಾಹಕ್ಕೆ ತುತ್ತಾದ ಕೊಡಗು ಜಿಲ್ಲೆ ಯನ್ನೇ ತೆಗೆದುಕೊಂಡರೆ, ಇತ್ತೀಚಿನ ವರ್ಷಗಳಲ್ಲಿ ಸಣ್ಣಹಿಡುವಳಿ ನೆಪದಲ್ಲಿ ಯಥೇತ್ಛವಾಗಿ ಭೂಮಿ ಪರಭಾರೆ ನಡೆದಿದೆ. ಅಲ್ಲಿ ವಿಲ್ಲಾ, ಹೋಂಸ್ಟೇಗಳು, ಲೇ ಔಟ್ ತಲೆಯೆತ್ತಿವೆ. ನದಿಪಾತ್ರದ ಆಸುಪಾಸು ಬಫರ್‌ಝೋನ್‌ಗಳನ್ನು ಉಲ್ಲಂಘಿಸಿ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ. ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನಗಳು ನಡೆ ಯುತ್ತಿಲ್ಲ. ಆನೆಗಳಂತೆಯೇ ನದಿ, ಹಳ್ಳ- ಕೊಳ್ಳಗಳಿಗೂ ತನ್ನದೇ ಆದ “ಕಾರಿಡಾರ್’ ಗಳಿರುತ್ತವೆ. ತಾತ್ಕಾಲಿಕವಾಗಿ ಮನುಷ್ಯ ಅದನ್ನು “ಅಭಿವೃದ್ಧಿ’ಯಿಂದ ಪಳಗಿ ಸಿದಂತೆ ಕಂಡರೂ, ಕಾಲಾನುಕ್ರಮದಲ್ಲಿ ಅದು ಮತ್ತೆ ತನ್ನ ಮೂಲ ಪಾತ್ರದಂತೆಯೇ ಹರಿದುಬರುತ್ತದೆ. ಆಗ ಅದು ನಮಗೆ ಪ್ರವಾಹವಾಗಿ ಪರಿಣಮಿಸುತ್ತದೆ.
ಇದೆಲ್ಲದಕ್ಕಿಂತ ಹೆಚ್ಚಾಗಿ ನಿರಂತರ ಬರಕ್ಕೂ ತುತ್ತಾಗುವ ನಾವು ಈ ನೆರೆಯನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ. ಆ ಭಾಗದ ಕೆಲವು ಪ್ರದೇಶಗಳು ನಿರಂತರವಾಗಿ ಬರಕ್ಕೆ ತುತ್ತಾಗುತ್ತವೆ. ಬೆಳಗಾವಿಯಂತಹ ಹಲವು ಪ್ರದೇಶಗಳು ನೆರೆಗೆ ತುತ್ತಾಗುತ್ತವೆ. ಈಗ ಆ ನೀರು ವ್ಯರ್ಥವಾಗಿ ಹೋಗದಂತೆ ತಡೆ ಯುವ ಅವಶ್ಯಕತೆ ಇದೆ. ಅದನ್ನು ಅಂತರ್ಜಲ ಮರುಪೂರಣ ಆಗುವಂತೆ ಮಾಡ ಬೇಕು. ಇದಕ್ಕಾಗಿ ಅಲ್ಲಲ್ಲಿ ಹಸುರೀಕರಣ ಮಾಡಿ, ಹರಿವಿನ ವೇಗಕ್ಕೆ ತಡೆಯೊಡ್ಡಬೇಕು. ಚೆಕ್ ಡ್ಯಾಂ ನಿರ್ಮಿಸಬೇಕು. ಗಟ್ಟಿಕಲ್ಲಿನ ಭಾಗದಲ್ಲಿ ರಬ್ಬರ್ ಡ್ಯಾಂ ನಿರ್ಮಿಸಿ, ನೀರು ತಡೆಹಿಡಿಯಬೇಕು. ಕಾಲುವೆ ನಿರ್ಮಿಸಿ ಹೆಚ್ಚು ಬರಕ್ಕೆ ತುತ್ತಾಗಿರುವ ಪ್ರದೇಶಗಳತ್ತ ತಿರುಗಿಸಬೇಕು. ಇದೆಲ್ಲದಕ್ಕೂ ಸರಕಾರದ ದೂರದೃಷ್ಟಿಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮುಂಗಾರಿನ ಪ್ರವೇಶ ವಿಳಂಬವಾಗುತ್ತಿದೆ. ವಾಡಿಕೆ ಮಳೆ ಯಾದರೂ, ಹಂಚಿಕೆ ಸಮಾನವಾಗಿ ಆಗುತ್ತಿಲ್ಲ. ಸಾಮಾನ್ಯವಾಗಿ ಬಂಗಾಲ ಕೊಲ್ಲಿ ಯಲ್ಲಿ ಕಂಡುಬರುತ್ತಿದ್ದ ಬೆಳವಣಿಗೆಗಳು ಅರಬಿ ಸಮುದ್ರದಲ್ಲೂ ಕಂಡು ಬರುತ್ತಿವೆ. ನಗರದ ನೆರೆ ಉಂಟಾಗಬಹುದಾದ ಪ್ರದೇಶಗಳ ಬಗ್ಗೆ ಮುನ್ಸೂಚನೆ ನೀಡುವ ತಂತ್ರಜ್ಞಾನ ನಮ್ಮ ಬಳಿ ಇದೆ. ಇದನ್ನು ನಾವು ಕೊಡಗು, ಬೆಳಗಾವಿ ಸೇರಿದಂತೆ ಪ್ರತಿ ವರ್ಷ ತುತ್ತಾಗುವ ಪ್ರದೇಶಗಳಲ್ಲಿ ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ.