ಬೀದರ್: ಕೇಂದ್ರ ಆಂತರಿಕ ಸಚಿವಾಲಯದ ತಂಡದಿಂದ ಬುಧವಾರ ಜಿಲ್ಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಮಾಹಿತಿ ಪಡೆಯಿತು.
ಮೊದಲಿಗೆ ಬೀದರ ನಗರದ ನ್ಯೂ ಆದರ್ಶ ಕಾಲೋನಿಯ ರಸ್ತೆ ಹಾನಿಯನ್ನು ಪರಿಶೀಲಿಸಿದರು. ನಂತರ ಬೀದರ ತಾಲೂಕಿನ ಹೊನ್ನಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಆ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಅಂಗನವಾಡಿ ಮತ್ತು ಸುನೀತಾ ಹಣಮಂತ ಹಾಗೂ ನಾಗಮ್ಮ ಇವರ ಮನೆ ಹಾನಿ ವೀಕ್ಷಣೆ ಮಾಡಿ ಹಾನಿಯ ಕುರಿತು ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಮಾಹಿತಿ ನೀಡಿ ಮನೆ ಹಾನಿಗೆ ತಾತ್ಕಾಲಿಕವಾಗಿ ಈ ಮೊದಲು 10 ಸಾವಿರ ರೂಪಾಯಿ ನೀಡಲಾಗಿತ್ತು, ನಂತರ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಅವರಿಗೆ ಪರಿಹಾರ ನೀಡಲಾಗಿದೆ. ಮನೆ ಹಾನಿಗೆ ಎ.ಬಿ.ಸಿ ಎಂದು ವರ್ಗಿಕರಿಸಿ ಮನೆಗಳ ಹಾನಿಯ ಪ್ರಮಾಣಕ್ಕೆ ತಕ್ಕಂತೆ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ತಂಡವು ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಜಮೀನಿನ ಬೆಳೆ ಹಾನಿ ವೀಕ್ಷಣೆ ಮತ್ತು ಸಾವಳಗಿ ಗ್ರಾಮದಲ್ಲಿಯ ಮನೆ ಹಾನಿ ಹಾಗೂ ಬೆಳೆ ಹಾನಿ ಕುರಿತು ವೀಕ್ಷಣೆ ಮಾಡಿದರು. ನಂತರ ಭಾಲ್ಕಿ ತಾಲೂಕಿನಲ್ಲಿ ಮಳೆಯಿಂದ ಹಾನಿಯ ಕುರಿತು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ. ಕೆ.ಮನೋಹರ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಅಧಿಕಾರಿ ಎಸ್. ಜಗದೀಶ ಅವರು ಕೇಂದ್ರ ಆತಂರಿಕ ಸಚಿವಾಲಯದ ತಂಡದಲ್ಲಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಸಹಾಯಕ ಆಯುಕ್ತ ಮೋಹ್ಮದ್ ನಯೀಮ್ ಮೋಮಿನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ತಹಶೀಲ್ದಾರ ಅಣ್ಣಾರಾವ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.