Advertisement

ಮಳೆಹಾನಿ ಪರಿಹಾರ: ಅಸಡ್ಡೆ ಬೇಡ

12:43 PM Jun 26, 2018 | |

ಹೊಸನಗರ: ತಾಲೂಕಿನಲ್ಲಿ ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಮಳೆ ಹಾನಿ ಕುರಿತಂತೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ತ್ತೈಮಾಸಿಕ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ನಗರ ಹೋಬಳಿಯಲ್ಲಿ ಅತಿವೃಷ್ಟಿ ಆಗಿದೆ. ಎಲ್ಲಾ ಇಲಾಖೆಯ ನೌಕರರು ಸಮಷ್ಠಿಯಾಗಿ ಪ್ರಾಮಾಣಿಕವಾಗಿ ಸರ್ವೆ ಮಾಡಿ. ಅರ್ಹ ರೈತರ ಕಡೆಗಣನೆ ಬೇಡ. ಈ ವಿಷಯದಲ್ಲಿ ಅಸಡ್ಡೆ ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಇಲ್ಲಿಯ ತನಕ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಸುಮಾರು ರೂ. 60 ಲಕ್ಷ ಅಂದಾಜು ಹಾನಿ ಆಗಿದೆ ಎಂದು ತಹಶೀಲ್ದಾರ್‌ ಚಂದ್ರಶೇಖರ ನಾಯಕ ಮಾಹಿತಿ ನೀಡಿದರು.  ಕೃಷಿ ಸಹಾಯಕ ನಿರ್ದೇಶಕ ದೇವರಾಜ ಮಾತನಾಡಿ, ತಾಲೂಕಿನ ಹೋಬಳಿ ಕೇಂದ್ರದಲ್ಲಿ ಖಾಸಗಿ ನೆರವಿನೊಂದಿಗೆ ಮಣ್ಣು ಪರೀಕ್ಷಾ ಕೇಂದ್ರವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗುತ್ತಿರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ.ಕೇವಲ ಮಧ್ಯವರ್ತಿಗಳ ಪಾಲು ಆಗುತ್ತಿದೆ ಎಂದು ಜಿಪಂ ಸದಸ್ಯ ಸುರೇಶ ಸ್ವಾಮಿರಾವ್‌ ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಈ ಸಾಲಿನಲ್ಲಿ ಮಂಜೂರಾದ ಎಲ್ಲಾ ಕಾಮಗಾರಿಗಳು ಸಂಪೂರ್ಣ ಆಗಿದೆ. ವನ್ಯಜೀವಿ ಇಲಾಖೆಯ ತಕರಾರು ಅರ್ಜಿಯಿಂದಾಗಿ ಬಾಳೆಬರೆ ಘಾಟಿಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಂಪತ್‌ ಕುಮಾರ್‌ ಹೇಳಿದರು.

Advertisement

ಹುಂಚಾ- ಮುಂಬಾರು ರಸ್ತೆ ತೀರಾ ಹದಗೆಟ್ಟಿದೆ. ಹಿಲಕುಂಜಿ ಘಾಟಿ ಹಾಗೂ ಹೊಸಮನೆ ಸಮೀಪದ ರಸ್ತೆ ಶೀಘ್ರದಲ್ಲಿ ಕುಸಿಯಲಿದೆ. ಸಂಪರ್ಕ ಸಂಪೂರ್ಣ ಕಡಿದುಕೊಳ್ಳುವ ಮುನ್ನ ದುರಸ್ತಿ ಮಾಡಿ ಎಂದು ಶಾಸಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಕಲಗೊಡು ರತ್ನಾಕರ, ಸುರೇಶ ಸ್ವಾಮಿರಾವ್‌, ಶ್ವೇತಾ ಬಂಡಿ, ತಾಪಂ ಅಧ್ಯಕ್ಷ ವಾಸಪ್ಪ ಗೌಡ ಹಾಗೂ ಸದಸ್ಯರು, ತಹಶೀಲ್ದಾರ್‌ ಚಂದ್ರಶೇಖರ ನಾಯಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next