Advertisement

ಮಳೆ ಹಾನಿ: 48.97 ಲಕ್ಷ. ರೂ. ಪರಿಹಾರ

11:04 AM Oct 21, 2018 | Team Udayavani |

ಪುತ್ತೂರು: ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟಂತೆ ಪ್ರಾಣ ಹಾನಿ ಸಹಿತ ಹಾನಿಯಾದ 324 ಪ್ರಕರಣಗಳಲ್ಲಿ ಒಟ್ಟು 48,97,654 ರೂ. ಪರಿಹಾರವನ್ನು ಕಂದಾಯ ಇಲಾಖೆಯ ಮೂಲಕ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ ಪ್ರಾಣಹಾನಿ, ಜಾನುವಾರು ಹಾನಿ, ಆಸ್ತಿ ಪಾಸ್ತಿ ನಷ್ಟ, ಕೃಷಿ ನಷ್ಟ ಸಹಿತ ಒಟ್ಟು 1,06,05,351 ರೂ. ಅಂದಾಜು ನಷ್ಟ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮಗಳಿಗೆ 72,993 ರೂ. ಸಹಿತ ಪರಿಹಾರಕ್ಕಾಗಿ 49,70,674 ರೂ. ಬಳಕೆ ಮಾಡಲಾಗಿದೆ.

Advertisement

ಪರಿಹಾರ ವಿವರ
ಅ. 20ರ ತನಕ ಜೀವ ಹಾನಿಯ 3 ಪ್ರಕರಣಗಳಲ್ಲಿ 15 ಲಕ್ಷ ರೂ., ಪಕ್ಕಾ ಮನೆಗಳು ಪೂರ್ಣ ಹಾನಿಯಾದ 2 ಪ್ರಕರಣಗಳಲ್ಲಿ 1,90,100 ರೂ., ಪಕ್ಕಾ ಮನೆಗಳು ತೀವ್ರ ಹಾನಿಯಾದ 70 ಪ್ರಕರಣಗಳಲ್ಲಿ 18,92,170 ರೂ., ಪಕ್ಕಾ ಮನೆಗಳು ಭಾಗಶಃ ಹಾನಿಯಾದ 78 ಪ್ರಕರಣಗಳಲ್ಲಿ 3.85 ಲಕ್ಷ ರೂ., ಕಚ್ಚಾ ಮನೆಗಳು ಪೂರ್ಣ ಹಾನಿಯಾದ 3 ಪ್ರಕರಣಗಳಲ್ಲಿ 2.85 ಲಕ್ಷ ರೂ., ಕಚ್ಚಾ ಮನೆಗಳು ಭಾಗಶಃ ಹಾನಿಯಾದ 53 ಪ್ರಕರಣಗಳಲ್ಲಿ 1,67,500 ರೂ., ಕೃಷಿ / ತೋಟ ಹಾನಿಯಾದ 90 ಪ್ರಕರಣಗಳಲ್ಲಿ 4,22,884 ರೂ., ಗಾಯಗೊಂಡ 1 ಪ್ರಕರಣದಲ್ಲಿ 4,300 ರೂ., ಜಾನುವಾರು ಹಾನಿ ಪ್ರಕರಣದಲ್ಲಿ 3000 ರೂ., ಜಾನುವಾರು ಕೊಟ್ಟಿಗೆ ಹಾನಿಯಾದ 23 ಪ್ರಕರಣಗಳಲ್ಲಿ 47 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ. 2018 -19ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ಪಾವತಿಗಾಗಿ 60 ಲಕ್ಷ ರೂ. ಬಿಡುಗಡೆಯಾಗಿದ್ದು, ಹಿಂದಿನ ಉಳಿಕೆ 20,32,618 ರೂ. ಕಂದಾಯ ಇಲಾಖೆಯಲ್ಲಿತ್ತು. 

ಹಾಲಿ ಪರಿಹಾರ ಸಹಾಯಧನವಾಗಿ 22,55,964 ರೂ. ಹಾಗೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲು 8,06,007 ರೂ. ಸೇರಿ ಒಟ್ಟು 30,61,971 ರೂ. ಉಳಿಕೆ ಹಣ ಕಂದಾಯ ಇಲಾಖೆಯಲ್ಲಿದೆ. ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆಗೆ ಮುಂಜಾಗ್ರತಾ ತುರ್ತು ಆವಶ್ಯಕತೆಗಾಗಿ ಮೂರು ಮರ ಕತ್ತರಿಸುವ ಯಂತ್ರವನ್ನು ಖರೀದಿಸಿ ನೀಡಲಾಗಿದೆ. ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ನುರಿತ ಈಜುಗಾರರಿಗೆ 2 ತಿಂಗಳಲ್ಲಿ ಇಬ್ಬರಿಗೆ ತಲಾ 5 ಸಾವಿರ ರೂ., ಮೂರನೇ ತಿಂಗಳಿನಲ್ಲಿ 3 ಮಂದಿಗೆ ತಲಾ 7 ಸಾವಿರ ರೂ.ನಂತೆ ವೇತನವನ್ನು ನೀಡಲಾಗಿದೆ.

ಸಿಡಿಲಿನ ಭಯ
ಈ ವರ್ಷ ಮಳೆಗಾಲದ ಆರಂಭದಲ್ಲಿ ಸಿಡಿಲಿನ ಆರ್ಭಟ ಕಡಿಮೆಯಾಗಿತ್ತು. ಆದರೆ ಮಳೆಗಾಲದ ಮುಕ್ತಾಯದ ಅವಧಿಯಲ್ಲಿ ತೀವ್ರ ಸ್ವರೂಪದ ಸಿಡಿಲು ಇರುವುದರಿಂದ ಅಪಾಯದ ಭಯ ಇದೆ. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 2014 ಹಾಗೂ 2015ರಲ್ಲಿ 15 ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದರು. ಅನಂತರದಲ್ಲಿ ತೀವ್ರ ಸಿಡಿಲಿನ ತೊಂದರೆ ಉಂಟಾದ ಪ್ರದೇಶಗಳಲ್ಲಿ ಸಿಡಿಲು ನಿರೋಧಕ ವ್ಯವಸ್ಥೆ ಅಳವಡಿಸಲು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದು ಅಂದಿನ ತಹಶೀಲ್ದಾರ್‌ ಎಂ.ಟಿ. ಕುಳ್ಳೇಗೌಡ ಅವರು ಕೆಲವು ಪ್ರದೇಶಗಳನ್ನು ಗುರುತಿಸಿ ಸಿಡಿಲು ನಿರೋಧಕ ಅಳಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಅನಂತರದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಸಿಡಿಲು ನಿರೋಧಕ ಅಳವಡಿಕೆ ಪ್ರಸ್ತಾವನೆ ಹಂತದಲ್ಲೇ ಬಾಕಿಯಾಗಿದೆ.

ಇಲಾಖೆ ಸನ್ನದ್ಧ 
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಈ ವರ್ಷ ಅಧಿಕ ಪ್ರಮಾಣದಲ್ಲಿ ಹಾನಿ ಹಾಗೂ ನಷ್ಟ ಉಂಟಾಗಿದೆ. ಮನೆ ಮೇಲೆ ಧರೆ ಕುಸಿದು ಹೆಬ್ಟಾರಬೈಲುನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಮಳೆ ಬರುವ ಲಕ್ಷಣವಿದೆ. ಕಂದಾಯ ಇಲಾಖೆ ಸರ್ವ ಸನ್ನದ್ಧವಾಗಿದೆ.
– ಶ್ರೀಧರ್‌ ಕೆ.
ಉಪ ತಹಶೀಲ್ದಾರ್‌, ಪುತ್ತೂರು

Advertisement

ರಾಜೇಶ್‌ ಪಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next