Advertisement

ಮಳೆ ಹಾನಿ: ಶೀಘ್ರ ಪರಿಹಾರ ವಿತರಣೆ 

06:00 AM Jul 05, 2018 | Team Udayavani |

ಉಡುಪಿ: ಮಳೆ ಹಾನಿಯಿಂದ ನಷ್ಟ ಆದವರಿಗೆ ಮೊದಲ ಹಂತದ‌ ಪರಿಹಾರಧನ ವಿತರಿಸಲಾಗಿದೆ. ಎರಡನೇ ಹಂತದ ಪರಿಹಾರಧನ ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ತಿಳಿಸಿದ್ದಾರೆ.

Advertisement

ಜು.4ರಂದು ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ಉಡುಪಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

“ಮಳೆಯಿಂದ ಹೆಚ್ಚು ಹಾನಿ ಆದವರಿಗೂ 5,200 ರೂ.ಗಳನ್ನು ಮಾತ್ರ ನೀಡಲಾಗಿದೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಅವರು “ಈಗ ನೀಡಿರುವುದು ತುರ್ತು ಪರಿಹಾರ ಹಣ. ಈ ಹಿಂದೆ ಈ ರೀತಿ ಪರಿಹಾರ ನೀಡುವ ಯೋಜನೆ ಇರಲಿಲ್ಲ. ಈ ಬಾರಿ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿರುವುದರಿಂದ ಮೊದಲ ಹಂತದ ಪರಿಹಾರ ಹಣ ವಿತರಿಸಲಾಗಿದೆ. ಪಿಡಬ್ಲ್ಯುಡಿ ಇಲಾಖೆಯ ವರದಿ ಬಂದಿದ್ದು ಎರಡನೇ ಹಂತದ ಪರಿಹಾರ ಹಣವನ್ನು ಶೀಘ್ರ ವಿತರಿಸಲಾಗುವುದು’ ಎಂದು ತಿಳಿಸಿದರು.
 
108 ಆರೋಗ್ಯ ಕವಚ ಅವ್ಯವಸ್ಥೆ 
ಸದಸ್ಯೆ ಡಾ| ಸುನೀತಾ ಶೆಟ್ಟಿ ಅವರು ಆರೋಗ್ಯ ಕವಚ 108ರ ಅವ್ಯವಸ್ಥೆ ಕುರಿತು ಸಭೆಯ ಗಮನ ಸೆಳೆದರು.

ಆ್ಯಂಬುಲೆನ್ಸ್‌ಗಳು ತುರ್ತು ಸಂದರ್ಭ ಸರಕಾರಿ ಆಸ್ಪತ್ರೆಗೆ ತೆರಳಿ ಸೂಚನೆ ಬಂದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿವೆ. ಇದರಿಂದ ಚಿಕಿತ್ಸೆ ದೊರೆಯಲು ವಿಳಂಬವಾಗುತ್ತಿದೆ. ತುರ್ತು ಸಂದರ್ಭದಲ್ಲೂ ಹೀಗೆ ಸುತ್ತುವುದು ಸರಿಯಲ್ಲ ಎಂದರು. 

ಸದಸ್ಯ ಮೈಕಲ್‌ ದನಿಗೂಡಿಸಿ “ಕೆಲವೊಮ್ಮೆ ಗ್ರಾಮೀಣ ಭಾಗದಲ್ಲಿ ಆ್ಯಂಬ್ಯುಲೆನ್ಸ್‌   ಲಭ್ಯವಿರುವುದಿಲ್ಲ. ಕೇಳಿದರೆ ಇಎಂಟಿ ಇಲ್ಲ ಎಂಬ ಉತ್ತರ ಬರುತ್ತದೆ’ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕಾಡೂರು ಅಂಗನವಾಡಿ ಸಮಸ್ಯೆ 
ಕಾಡೂರಿನ ಅಂಗನವಾಡಿಯನ್ನು ಮಾನ್ಯ ಶಾಲೆಗೆ ಸ್ಥಳಾಂತರಿಸಿರುವ ಕುರಿತು ಸ್ಥಳೀಯ ತಾ.ಪಂ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. “ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಅಧ್ಯಕ್ಷೆ ಭರವಸೆ ನೀಡಿದರು. 

ತಾತ್ಕಾಲಿಕ ಹಕ್ಕುಪತ್ರದಿಂದ ಸಮಸ್ಯೆ 
ತಾತ್ಕಾಲಿಕ ಹಕ್ಕುಪತ್ರ ನೀಡಿರುವುದ ರಿಂದ ಹಕ್ಕುಪತ್ರ ಪಡೆದವರಿಗೆ ಸಾಲ ವಿಚಾರವಾಗಿ ಸಮಸ್ಯೆಗಳಾಗಿವೆ ಎಂದು ಸದಸ್ಯರೊಬ್ಬರು  ದೂರಿದರು. ಇನ್ನೋರ್ವ ಸದಸ್ಯರು ಮಾತನಾಡಿ “ಚುನಾವಣೆ ಬಂತೆಂದು ಗಡಿಬಿಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಿದರೆ ಇದೇ ರೀತಿ ಸಮಸ್ಯೆಯಾಗುತ್ತದೆ’ ಎಂದು ಲೇವಡಿ ಮಾಡಿದರು. ಈ ವಿಚಾರವಾಗಿ ಕೆಲಕಾಲ ಇಬ್ಬರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು.  ಮಧ್ಯಪ್ರವೇಶಿಸಿದ ತಹಶೀಲ್ದಾರ್‌ ಶುಲ್ಕ ಪಾವತಿ ಮಾಡಬೇಕೆಂಬ ಉದ್ದೇಶದಿಂದ ಮಾತ್ರ ತಾತ್ಕಾಲಿಕ ಹಕ್ಕುಪತ್ರ ನೀಡಲಾಗಿದೆ. ಶುಲ್ಕ ಪಾವತಿಸಿದ ಕೂಡಲೇ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು.

ಸಭೆ ಸಂದರ್ಭದಲ್ಲಿ ಪದೇ ಪದೆ ಮೈಕ್‌ ಕೈ ಕೊಡುತ್ತಿದ್ದುದ ರಿಂದ ಸದಸ್ಯರು  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.12 ಗ್ರಾ.ಪಂ. ಅಧ್ಯಕ್ಷರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹೊಲಿಗೆ ತರಬೇತಿ ಪಡೆದ ಹಿಂದುಳಿದ, ಅಲ್ಪಸಂಖ್ಯಾಕ ಸಮುದಾಯದ 15 ಮಂದಿ ಫ‌ಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಿಸಲಾಯಿತು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಇ.ಓ ಮೋಹನ್‌ ರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ , ಬ್ರಹ್ಮಾವರ ಪ್ರೊಬೆಷನರಿ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

9/11 ಸಮಸ್ಯೆ 
ಕಾಪು ಪುರಸಭೆ ವ್ಯಾಪ್ತಿಯಲ್ಲಿ 9/11 ಸಮಸ್ಯೆ ಇರುವ ಕುರಿತು ಸದಸ್ಯರೊಬ್ಬರು ಸಭೆಯ ಗಮನ ಸೆಳೆದರು. ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್‌ “9/11 ಸಮಸ್ಯೆ ನಗರ ಪ್ರದೇಶಗಳಲ್ಲಿ  ಇದೆ. ಇದನ್ನು ಸರಕಾರದ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ’ ಎಂದರು. 

94ಸಿಗೆ ಅರ್ಜಿ ಆಹ್ವಾನ
94ಸಿಗೆ ಅರ್ಜಿ ಸಲ್ಲಿಸಲು ಸೆ.16 ಕೊನೆಯ ದಿನಾಂಕವಾಗಿದೆ. ಭೂ ಪರಿವರ್ತನೆಗೆ ಕಳೆದ ಎರಡು ದಿನಗಳಿಂದ ಆನ್‌ಲೈನ್‌ ಮೂಲಕ ಲಾಗಿನ್‌ ಆಗಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಎಂಜಿನಿಯರ್‌ ನಕ್ಷೆಯ ಆವಶ್ಯಕತೆ ಇದೆ ಎಂದು ತಹಶೀಲ್ದಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next