Advertisement
ಆರ್.ಟಿ.ನಗರದ 5ನೇ ಮುಖ್ಯರಸ್ತೆಯಲ್ಲಿ ಧರೆಗುರುಳಿದ ಬೃಹದಾಕಾರದ ಮರವನ್ನು ಮಂಗಳವಾರ ಬೆಳಿಗ್ಗೆವರೆಗೂತೆರವುಗೊಳಿಸಿರಲಿಲ್ಲ. ಈ ಮರವು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ಬಡಾವಣೆಯಲ್ಲಿ ಗಂಟೆಗಟ್ಟಲೆ ವಿದ್ಯುತ್ ಸಂಪರ್ಕ ಇರಲಿಲ್ಲ. ಸ್ಥಳೀಯರು ದೂರು ನೀಡಿದ ತುಸು ಹೊತ್ತಿನ ನಂತರ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ
ದುರಸ್ತಿಗೊಳಿಸಿದರು. ಈ ಮಧ್ಯೆ ನಗರದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಏಪ್ರಿಲ್ 4 ಮತ್ತು 5ರಂದು ಗುಡುಗುಸಹಿತ ಹಾಗೂ 6ರಿಂದ 8ರವರೆಗೆ ಹಗುರವಾದ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 77 ಹೆಕ್ಟೇರ್ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ನಾಶವಾಗಿದ್ದು, ಸುಮಾರು 40 ಲಕ್ಷ ರೂ. ನಷ್ಟ ಸಂಭವಿಸಿದೆ. ಮಾ. 30 ರಂದು ಕೋಲಾರ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಯಿಂದಾಗಿ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕು ಗಳಲ್ಲಿ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಬೆಳೆ ಹಾನಿಯಿಂದ 94 ರೈತರು ನಷ್ಟ ಅನುಭವಿಸಿದ್ದಾರೆ. ಮಾಲೂರು ತಾಲೂಕಿನ ಕಸಬಾ ಹೋಬಳಿ ಸೊಣ್ಣಹಳ್ಳಿ, ಪಿಚ್ಚಗುಂಟ್ರಹಳ್ಳಿ, ಗುಂಡನಹಳ್ಳಿ, ಮಾದನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಗೆ ಭಾರಿ ಹಾನಿಯಾಗಿದೆ. ತಾಲೂಕಿನ 10 ಮಂದಿ ರೈತರು, ಮಾಲೂರು ತಾಲೂಕಿನ 46 ಮಂದಿ ರೈತರು ಹಾಗೂ ಶ್ರೀನಿವಾಸಪುರ ತಾಲೂಕಿನ 38 ರೈತರು ಸೇರಿದಂತೆ ಒಟ್ಟು 94 ಮಂದಿ ರೈತರ ಬೆಳೆ ಹಾನಿಯಾಗಿದೆ.