Advertisement
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಮುಂಜಾನೆ ಸಮಯದಲ್ಲಿ ಹಾಗೂ ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಂದಾರು, ಮೂಲ್ಕಿ, ಸುರತ್ಕಲ್ ಪರಿಸರದಲ್ಲಿ ಸಂಜೆಯ ವೇಳೆ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸೆಕೆಯ ಬೇಗೆ ಹೆಚ್ಚು ಇತ್ತು.
Related Articles
ಕಾಸರಗೋಡು: ಮೇ 20 ಮತ್ತು 21ರಂದು ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ. ಮೇ 18 ಮತ್ತು 19ರಂದು ಕೂಡಾ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಕಟಿಸಿದೆ.
Advertisement
ಸಿಡಿಲು ಸಹಿತ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಗತ್ಯಬಂದಲ್ಲಿ ಕಡಲ ಕಿನಾರೆಯ ಮನೆಗಳಲ್ಲಿರುವ ಮೀನುಗಾರರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕೆಂದು ತಿಳಿಸಲಾಗಿದೆ. ಮೀನುಗಾರಿಕೆ ನಿಷೇಧಿಸಲಾಗಿದೆ. ಪ್ರವಾಸಿಗರು ಸಮುದ್ರ ಕಿನಾರೆಗೆ ತೆರಳದಂತೆ ಸೂಚಿಸಲಾಗಿದೆ.
ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಮಂಗಲ್ಪಾಡಿ ಪ್ರತಾಪನಗರದ ನಿವಾಸಿ, ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಅವರ ಮನೆ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಮೇ 16 ರಂದು ರಾತ್ರಿ ಸುಮಾರು 10 ಗಂಟೆಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಇದೇ ಸಂದರ್ಭದಲ್ಲಿ ಹೊರಗಡೆ ಸಿಟ್‌ಔಟ್‌ನಲ್ಲಿ ಕುಳಿತುಕೊಂಡಿದ್ದ ಮನೆ ಮಂದಿ ಓಡಿ ಹೊರಗಡೆ ಹೋಗಿದ್ದಾರೆ. ಇದರಿಂದ ಅಪಾಯ ತಪ್ಪಿದೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿದ್ದು, ಅಷ್ಟರಲ್ಲೇ ಮಳೆ ಸುರಿದ ಕಾರಣದಿಂದ ಬೆಂಕಿ ಆರಿತು. ಈ ಪರಿಸರದ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಇದರಿಂದ ವಿದ್ಯುತ್ ಮೊಟಕುಗೊಂಡಿತು. ಮಂಜೇಶ್ವರ ಬಡಾಜೆ ರಸ್ತೆಗೆ ಖಾಸಗಿ ವ್ಯಕ್ತಿಯ ಗೇರು ಮರವೊಂದು ಮುರಿದು ಬಿದ್ದಿದೆ. ಕಾಸರಗೋಡು ಬೀರಂತಬೈಲ್‌ನಲ್ಲಿ ಅಶ್ವತ್ಥ ಮರವೊಂದು ಉರುಳಿ ಬಿದ್ದಿದೆ. ಮೀನು ಕಾರ್ಮಿಕರ ರಕ್ಷಣೆ
ಗಾಳಿ ಮಳೆ ಮತ್ತು ಕಡಲಬ್ಬರದಿಂದಾಗಿ ಮುಂದೆ ಸಾಗಲಾರದೆ ಕಾಸರಗೋಡು ಲೈಟ್ ಹೌಸ್ ಬಳಿಯ ಸಮುದ್ರ ಕಿನಾರೆ ಬಳಿಯಲ್ಲಿ ಸಿಲುಕಿಕೊಂಡ ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ ಆರು ಮಂದಿ ಬೆಸ್ತರನ್ನು ಕರಾವಳಿ ಪೊಲೀಸರು ಮತ್ತು ಸ್ಥಳೀಯ ಬೆಸ್ತರು ಸೇರಿ ರಕ್ಷಿಸಿದ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಾಗುತ್ತಿದ್ದಾಗ ಗಾಳಿ ಮಳೆಗೆ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ಕಟಪಾಡಿ
ಸಿಡಿಲು ಬಡಿದು ಮನೆಗೆ ತೀವ್ರ ಹಾನಿ
ಕಟಪಾಡಿ: ಇಲ್ಲಿನ ಕುರ್ಕಾಲು ಗ್ರಾಮದ ಸಾಲ್ಮರದಲ್ಲಿ ಪ್ರಭಾಕರ ಸೇರಿಗಾರ ಅವರ ಮನೆಗೆ ಗುರುವಾರ ತಡರಾತ್ರಿ ಸಿಡಿಲು ಬಡಿದು ಬೆಂಕಿ ಹತ್ತಿ ಉರಿದು ಹಾನಿಗೀಡಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಬೆಂಕಿಯಿಂದಾಗಿ ಹಂಚಿನ ಮನೆಯ ಮೇಲ್ಛಾವಣಿಯು ಹಾನಿಗೊಳಗಾಗಿದ್ದು, ಮನೆಯೊಳಗಿದ್ದ ಬಟ್ಟೆ ಬರೆ, ನಿತ್ಯೋಪಯೋಗಿ ವಸ್ತುಗಳು, ವಿದ್ಯುತ್ ಸಲಕರಣೆಗಳು, ಕವಾಟು, ವಾದ್ಯ ಸಹಿತ ಇತರ ಸೊತ್ತುಗಳು ಹಾನಿಗೀಡಾಗಿದ್ದು ಸುಮಾರು 40 ಸಾವಿರ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪರಿಹಾರದ ಭರವಸೆ
ಘಟನೆ ನಡೆದ ಸ್ಥಳಕ್ಕೆ ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಹಾನಿಯ ಪ್ರಮಾಣದ ಬಗ್ಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕೃತಿ ವಿಕೋಪ ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದ್ದು ಅಗತ್ಯಬಿದ್ದರೆ ಸಾರ್ವಜನಿಕರು ತಾಲೂಕು ಆಡಳಿತವನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮ ಆಡಳಿತಾಧಿಕಾರಿಗಳಾದ ಲೆಸ್ಟನ್ ಮತ್ತು ಅರುಣ್ ಇದ್ದರು.