ಚಿಕ್ಕಮಗಳೂರು:ಶತಮಾನ ಕಂಡರಿಯದ ಮಳೆ ಮತ್ತು ಗುಡ್ಡಗಳ ಕುಸಿತದಿಂದ ಕೊಡಗು ತತ್ತರಿಸಿ ಹೋಗಿರುವ ವೇಳೆಯಲ್ಲೇ ಚಿಕ್ಕಮಗಳೂರಿನಲ್ಲೂ ಮಳೆ ಮುಂದುವರಿದಿದ್ದು ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು ಜನರು ತೀವ್ರ ಆತಂಕಿತರಾಗಿದ್ದಾರೆ.
ಕೊಪ್ಪ ತಾಲೂಕಿನ ಮೂರು ಕಡೆ ಮನೆಗಳಿಗೆ ತಾಗಿದಂತೆ ಗುಡ್ಡ ಕುಸಿತವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹುಲುಗರಡಿ, ಬೈರದೇವರು ಮತ್ತು ಸಂಪಾನೆ ಯಲ್ಲಿ ಮನೆಗಳಿಗೆ ತಾಗಿದಂತೆ ಗುಡ್ಡ ಕುಸಿದು ಬಿದ್ದಿದೆ.
ಕಳೆದ ತಿಂಗಳಿನಿಂದ ನದಿಗಳು ತುಂಬಿ ಹರಿಯುತ್ತಿದ್ದು ಮತ್ತೆ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಕುದುರೆ ಮುಖ ಬಳಿ ಘಾಟಿಯಲ್ಲಿ ಹಲವೆಡೆ ಭಾನುವಾರ ಗುಡ್ಡ ಕುಸಿತವಾಗಿದ್ದು ಸಾವಿರಾರು ವಾಹನ ಸವಾರರು ಪರದಾಡಬೇಕಾಗಿದೆ. ಉಡುಪಿ ಮತ್ತು ಮಂಗಳೂರಿಗೆ ಸಂಪರ್ಕಕ್ಕೆ ಪ್ರಮುಖ ರಸ್ತೆಯಾಗಿರುವ ಹೆದ್ದಾರಿಯಲ್ಲಿ ಸಂಚರಿಸಲೂ ವಾಹನ ಸವಾರರು ಭಯ ಪಡುವಂತಾಗಿದೆ.