Advertisement

ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ

10:53 AM Aug 05, 2019 | Team Udayavani |

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಳೆ ಅರ್ಭಟ ಜೋರಾಗಿದೆ. ವಿವಿಧೆಡೆ ಕಡಲ್ಕೊರೆತ ಮುಂದುವರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ರವಿವಾರ ಸಂಜೆ 4.30ರಿಂದ ಐದು ಕ್ರಸ್ಟ್‌ಗೇಟ್‌ಗಳನ್ನು ತೆಗೆದು ನೀರು ಹೊರ ಬಿಡಲಾಗಿದೆ.

Advertisement

ಸತತ ಮಳೆಯ ಕಾರಣ ಕ್ರಸ್ಟ್‌ ಗೇಟ್ನಿಂದ 5.30ರ ನಂತರವೂ ನೀರು ನದಿಗೆ ಹರಿದಿತ್ತು. ಜಲಾಶಯದಿಂದ ನೀರು ಬಿಟ್ಟ ಸೊಬಗು ನೋಡಲು ಕದ್ರಾ ಮತ್ತು ಮಲ್ಲಾಪುರದ ಜನರು ಸುರಿವ ಮಳೆಯಲ್ಲೂ ಜಮಾಯಿಸಿದ್ದರು.

ಕಾಳಿ ನದಿ ದಡದ ಪಕ್ಕದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಜನ ಜಾನುವಾರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕದ್ರಾ ಜಲಾಶಯಕ್ಕೆ 38000 ಕ್ಯೂಸೆಕ್‌ ನೀರು ಹರಿದು ಬರತೊಡಗಿದೆ. ಜಲಾಶಯ 34.50 ಮೀಟರ್‌ ಎತ್ತರವಿದ್ದು, ಬೆಳಗಿನ ವೇಳೆಗೆ 33.70ರಷ್ಟು ಭರ್ತಿಯಾಗಿತ್ತು. ಮಳೆ ಮುಂದುವರಿದ ಕಾರಣ ಅದು ಸಂಜೆಗೆ 33.85 ತಲುಪುತ್ತಿದ್ದಂತೆ ಅಣೆಕಟ್ಟಿನ ನಾಲ್ಕು ಕ್ರಸ್ಟ್‌ಗೇಟ್ ತೆಗೆದು ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಯಿತು. ಜು. 11ರಂದು ಜಲಾಶಯ ಭರ್ತಿಯಾದ ಕಾರಣ ಎರಡು ತಾಸು ಸತತವಾಗಿ ನೀರನ್ನು ಹೊರಬಿಡಲಾಗಿತ್ತು. 2019ರಲ್ಲಿ ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿರುವುದು ಇದು ಎರಡನೇ ಸಲವಾಗಿದೆ. ಕದ್ರಾದ ಮೂರು ವಿದ್ಯುತ್‌ ಉತ್ಪಾದನಾ ಘಟಕಗಳಿಂದ ಸತತ 24 ತಾಸು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕಾಳಿ ಕೊಳ್ಳದ ಜಲಾಶಯಗಳ ಮುಖ್ಯ ಎಂಜಿನಿಯರ್‌ ನಿಂಗಣ್ಣ, ಕದ್ರಾ ಜಲಾಶಯ ಭರ್ತಿಯಾಗಿದ್ದು, ಇದೇ ವರ್ಷ ಎರಡು ಸಲ ಕದ್ರಾ ಕ್ರಸ್ಟ್‌ ಗೇಟ್ನಿಂದ ನೀರು ಹೊರಬಿಡುತ್ತಿದ್ದೇವೆ. ಕೊಡಸಳ್ಳಿ ಜಲಾಶಯ ಸಹ ಭರ್ತಿಯಾಗುತ್ತಿದೆ. ಇದು ಉತ್ತಮ ಮಳೆಗೆ ಸಾಕ್ಷಿಯಾಗಿದೆ. ಸೂಪಾ ಜಲಾಶಯದ ಹಿನ್ನೀರಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಈ ಸಲವೂ ಸೂಪಾ ಜಲಾಶಯ ಭರ್ತಿಯಾಗುವ ಆಶಯವಿದೆ ಎಂದರು.

ಕಾರವಾರದ ಪಂಚರಿಶಿವಾಡ ಸೇರಿದಂತೆ ನ್ಯೂಕೆಎಚ್ಬಿ ಕಾಲೋನಿ, ದೇವಳಿವಾಡ, ಪದ್ಮನಾಭ ನಗರಗಳು ಜಲಾವೃತವಾಗಿದ್ದವು. ಯಾವುದೇ ಅನಾಹುತಗಳಾಗಿಲ್ಲ. ಕಾರವಾರದಲ್ಲಿ ಆಗಾಗ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ರವಿವಾರದ ಸಂತೆಯಲ್ಲಿ ಮಾರಾಟಗಾರರು ಮಳೆಯಿಂದ ಪರದಾಡುವಂತಾಯಿತು. ಸುರಿವ ಮಳೆಯಲ್ಲೂ ಜನ ವ್ಯಾಪಾರದಲ್ಲಿ ತೊಡಗಿದ್ದರು. ಆಗಾಗ ವಿದ್ಯುತ್‌ ಸಹ ಕೈಕೊಡುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ತುಂಬಿ ಹರಿಯುತ್ತಿದೆ ಹಳ್ಳ-ಕೊಳ್ಳ:

ಕಳೆದ 10-12 ದಿನಗಳಿಂದ ತಾಲೂಕಿನಾದ್ಯಂತ ಹಾಗೂ ಗಡಿಭಾಗವಾದ ಖಾನಾಪುರ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬಹುತೇಕ ಎಲ್ಲ ಕೆರೆಗಳು ತುಂಬಿಕೊಂಡಿವೆ. ಅಲ್ಲದೇ ಹಳಿಯಾಳದ ಮಂಗಳವಾಡ ಮೂಲಕ ಹರಿದು ಹೋಗುವ ಹಳ್ಳ ಅನೇಕ ವರ್ಷಗಳ ಬಳಿಕ ಇದೀಗ ಸಂಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ. ಮಂಗಳವಾಡದ ಹಳೆಯ ಸೇತುವೆ, ಬಾಂದಾರಗಳು ಸಂಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗಿ ನೀರು ಭಾರೀ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ.
ಗೋಕರ್ಣ: ತಗ್ಗು ಪ್ರದೇಶ ಜಲಾವೃತ: ಮಳೆ-ಗಾಳಿಯ ಆರ್ಭಟಕ್ಕೆ ಇಲ್ಲಿನ ಸುತ್ತಮುತ್ತಲಿನ ಮೂಡಂಗಿ, ಹೊಸ್ಕಟ್ಟಾ ಭಾಗಗಳಲ್ಲಿ ತಗ್ಗು ಪ್ರದೇಶ, ರಸ್ತೆ ಸೇರಿದಂತೆ ಕೆರೆ-ಕಟ್ಟೆಗಳೆಲ್ಲ ನೀರಿನಿಂದ ತುಂಬಿವೆ. ಸಮೀಪದ ಬಾವಿಕೊಡ್ಲ ಭಾಗಗಳಲ್ಲಿ ಸಮುದ್ರದ ಅಲೆಗಳು ಮುನ್ನುಗ್ಗಿ ಭೂಭಾಗವನ್ನು ಕಬಳಿಸುತ್ತಿವೆ. ಇದು ಈ ಭಾಗಗಳ ಜನರಿಗೆ ತೀವ್ರ ಆತಂಕವುಂಟು ಮಾಡಿವೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಭಾಗಗಳ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next