ನವದೆಹಲಿ: ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನ ಅಕ್ಷರಶಃ ಹೈರಾಣಾಗಿದ್ಧಾರೆ. 4 ದಶಕಗಳಲ್ಲೇ ಕಂಡು ಕೇಳರಿಯದ ಮಹಾಮಳೆಗೆ ದೆಹಲಿ ನಲುಗಿಹೋಗಿದ್ದು ಜೀವನದಿ ಯಮುನೆ ಅಪಾಯದ ಮಟ್ಟವನ್ನು ಮೀರಿ ಹರಿಯತೊಡಗಿದ್ದಾಳೆ. 1978 ರ ನಂತರ ಅಂದರೆ ಬರೋಬ್ಬರಿ 45 ವರ್ಷದ ಬಳಿಕ ಯಮುನೆ ಮತ್ತೊಮ್ಮೆ ತನ್ನ ರೌದ್ರರೂಪ ತೋರಿದ್ದಾಳೆ. ಬುಧವಾರ ರಾತ್ರೆಯ ಹೊತ್ತಿಗೆ 208 ಮೀ.ನಷ್ಟಿದ್ದ ಯಮುನೆಯ ನೀರಿನ ಮಟ್ಟ ಗುರುವಾರ ಬೆಳಗ್ಗೆ 208.48 ಮೀಟರ್‌ಗೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಗೆ ದೊಡ್ಡ ಮಟ್ಟದ ಜಲಕಂಟಕ ಎದುರಾಗಿದೆ.
ದಶಕಗಳ ಬಳಿಕದ ಮಹಾಮಳೆಗೆ ದೆಹಲಿ ಸಾಕ್ಷಿಯಾಗಿದೆ. ಇದಕ್ಕೆ ಹಲವು ಕಾರಣಗಳಿದ್ದು, ಈ ಬಗ್ಗೆ ತಜ್ಙರು ಬೇರೆ ಬೇರೆ ಕಾರಣಗಳನ್ನೂ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಡಿಮೆ ಅವಧಿ… ಅಧಿಕ ಮಳೆ
ದೆಹಲಿಯ ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ರಾಷ್ಟ್ರೀಯ ಟ್ರಸ್ಟ್‌ನ ನೈಸರ್ಗಿಕ ಪರಂಪರೆ ವಿಭಾಗದ ಪ್ರಧಾನ ನಿರ್ದೇಶಕ ಮನು ಭಾಟ್ನಗರ್ ಅವರು, ʻದೆಹಲಿಯಾದ್ಯಂತ ಈ ವರೆಗೆ ಧೀರ್ಘ ಅವಧಿಯಲ್ಲಿ ಇಷ್ಟೇ ಮಳೆಯಾಗುತ್ತಿದರೂ ಇಷ್ಟಂದು ಗಂಭೀರ ಸ್ವರೂಪದ ಹಾನಿಯನ್ನು ಉಂಟು ಮಾಡಿರಲಿಲ್ಲ. ಆದರೆ ಈ ಬಾರಿ ಅತ್ಯಂತ ಕಡಿಮೆ ಅವಧಿಯಲ್ಲೇ ದೆಹಲಿ ಅಧಿಕ ಮಳೆಯನ್ನು ಕಂಡಿದ್ದು ಪ್ರವಾಹ ಪರಿಸ್ಥಿತಿಗೆ ಪ್ರಮುಖ ಕಾರಣʼ ಎಂದಿದ್ದಾರೆ.
ಹಾತ್ನೀಕುಂಡ್ ಅಣೆಕಟ್ಟಿನಿಂದ ನೀರು ಬಿಡುಗಡೆ
ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಹರ್ಯಾಣದ ಯಮುನಾನಗರದ ಹಾತ್ನೀಕುಂಡ್ ಅಣೆಕಟ್ಟಿನಿಂದ ದೊಡ್ಡ ಮಟ್ಟದ ನೀರು ಬಿಡುಗಡೆ ಮಾಡಿದ್ದು ಯಮುನೆಯ ನೀರಿನ ಮಟ್ಟ ಮೀರಿ ಹರಿಯಲು ಕಾರಣವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ನೀರು ದೆಹಲಿಯನ್ನು ತಲುಪಲು ಎರಡು-ಮೂರು ದಿನಗಳನ್ನು ತೆಗೆದುಕೊಳ್ಳುತ್ತದಾದರೂ ಸತತ ಮಳೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಸಿಡಬ್ಲೂಸಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಇದರ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಹಾತ್ನೀಕುಂಡ್ ಅಣೆಕಟ್ಟಿನಿಂದ ಸದ್ಯಕ್ಕೆ ನೀರು ಬಿಡುಗಡೆ ಮಾಡದಂತೆ ಹರ್ಯಾಣ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.
ಪ್ರವಾಹ ಪ್ರದೇಶಗಳ ಅತಿಕ್ರಮಣ
ಯಮುನೆಯ ರೌದ್ರಾವತಾರಕ್ಕೆ ದೆಹಲಿಯಲ್ಲಿನ ಪ್ರವಾಹ ಪ್ರದೇಶಗಳ ಅತಿಕ್ರಮಣವೂ ಒಂದು ಮಹತ್ವದ ಕಾರಣ ಎಂದು ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟದ ಭಾರತದ ಪ್ರತಿನಿಧಿ ಯಶ್ವೀರ್ ಭಾಟ್ನಗರ್ ಹೇಳಿದ್ದಾರೆ.
ಹೂಳು ಶೇಖರಣೆ
ಅಣೆಕಟ್ಟುಗಳ ದಕ್ಷಿಣ ಏಷ್ಯಾ ನೆಟ್‌ವರ್ಕ್‌ನ ಸಹಾಯಕ ಸಂಯೋಜಕ ಭೀಮ್ ಸಿಂಗ್ ರಾವತ್ ಅವರು, ಯಮುನೆ ಈ ರೀತಿ ಪ್ರಕೋಪವನ್ನು ತೋರುವುದಕ್ಕೆ ನದಿ ಮೂಲದಲ್ಲಿ ಹಲವು ಸಮಯದಿಂದ ಮೇಲೆತ್ತಲಾಗದೇ ಉಳಿದಿರುವ ಹೂಳು ತುಂಬಿರುವುದೂ ಒಂದು ಕಾರಣ ಎಂದು ಹೇಳಿದ್ದಾರೆ. ನದಿಯಲ್ಲಿನ ಹೂಳನ್ನು ಕಾಲ ಕಾಲಕ್ಕೆ ತೆಗೆಯದಿದ್ದರೆ ಈ ರೀತಿಯ ಪ್ರವಾಹಕ್ಕೆ ಮಹತ್ವದ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ಧಾರೆ.
ಅಧಿಕ ಸೇತುವೆಗಳ ನಿರ್ಮಾಣ
ಯಮುನೆ ಹರಿಯುವ 22 ಕಿ.ಮೀ ವ್ಯಾಪ್ತಿಯಲ್ಲೇ ಸುಮಾರು 20 ಕ್ಕೂ ಹೆಚ್ಚು ದೊಡ್ಡ ದೊಡ್ಡ ಸೇತುವೆಗಳ ನಿರ್ಮಾಣ ಮಾಡಲಾಗಿದ್ದು ಇದು ಯಮುನೆಯ ಹರಿವಿನ ವೇಗವನ್ನು ಕಡಿಮೆಗೊಳಿಸುತ್ತದೆ. ಇದೂ ಪ್ರವಾಹ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ಭೀಮ್ ಸಿಂಗ್ ರಾವತ್ ಹೇಳಿದ್ದಾರೆ.
ಕಿರಿದಾದ ಚರಂಡಿ ವ್ಯವಸ್ಥೆ
ದೆಹಲಿಯ ಮಹಾನಗರಕ್ಕೆ ನೀರು ನುಗ್ಗಿದಾಗ ನೀರನ್ನು ಅತಿ ಶೀಘ್ರದಲ್ಲಿ ಹೊರಹಾಕಲು ಚರಂಡಿ ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದಾಗಿದೆ. ದೆಹಲಿಯ ನಗರದಾದ್ಯಂತ ಇರುವ ಕಿರಿದಾದ ಚರಂಡಿ ವ್ಯವಸ್ಥೆಯೂ ಅತಿವೃಷ್ಟಿಯ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಹಾಕಲು ವಿಫಲವಾಗುತ್ತದೆ. ಹೀಗಾಗಿ ರಸ್ತೆ, ಮನೆ, ಹಾಗೂ ಕಂಡ ಕಂಡಲ್ಲಿ ಚರಂಡಿ ನೀರು ನುಗ್ಗಿ ಜನಜೀವನವನ್ನು ದುಸ್ತರಗೊಳಿಸುತ್ತದೆ.
ಇದರೊಂದಿಗೆ ನಗರ ಜಲಮೂಲಗಳ ಸಮರ್ಪಕ ನಿರ್ವಹಣೆಯೂ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿವೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಇದರ ಗಂಭೀರತೆಯನ್ನು ಅನುಭವಿಸಬೇಕಾಗಬಹುದು ಎಂದು ಶಕ್ತಿ ಸಂಪನ್ಮೂಲ ಸಂಸ್ಥೆ ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ದೆಹಲಿಯಷ್ಟೇ ಅಲ್ಲದೆ ಹಿಮಾಚಲ ಪ್ರದೇಶ, ಉತ್ತರಾಖಾಂಡದಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು ಜನ ಎಚ್ಚರಿಕೆಯಿಂದಿರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ದೃಷ್ಟಿಯಿಂದ ದೆಹಲಿಯಲ್ಲಿ ಜುಲೈ 16 ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಖಾಸಗಿ, ಕೆಲ ವಿಭಾಗಗಳ ಸರ್ಕಾರಿ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಂʼಗೆ ಸೂಚಿಸಲಾಗಿದೆ.
ಇದನ್ನೂ ಓದಿ: Delhi ಗಟಾರವಾಗಿದೆ..ಎಚ್ಚೆತ್ತುಕೊಳ್ಳಿ ಜನರೇ : ಸಂಸದ ಗಂಭೀರ್