ಸಿಡ್ನಿ: ರಷ್ಯಾ, ಉಕ್ರೇನ್ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಮತ್ತೊಂದೆಡೆ ಆಸ್ಟ್ರೇಲಿಯಾದ ಪೂರ್ವ ಕರಾವಳಿ ಭಾಗ ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಘಟನೆ ಸೋಮವಾರ (ಫೆ.28) ನಡೆದಿದೆ. ತಗ್ಗು ಪ್ರದೇಶ, ನಗರ ಪ್ರದೇಶಗಳು ಜಲಾವೃತಗೊಂಡಿದ್ದು, ನಿವಾಸಿಗಳು ಮಹಡಿಯ ಮೇಲೆ ಕುಳಿತು ಸಹಾಯಕ್ಕಾಗಿ ಕಾಯುತ್ತಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಸಾಲು ಮರಗಳ ತೆರವಿಗೆ ಕಟ್ಟಬೇಕಾದುದುದು 395 ಕೋಟಿ, ಕಟ್ಟಿದ್ದು 43 ಲಕ್ಷ.!
ಗುರುವಾರದಿಂದ ಆರಂಭಗೊಂಡಿರುವ ಧಾರಾಕಾರ ಮಳೆ, ಪ್ರವಾಹಕ್ಕೆ ಈವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಕಣ್ಮರೆಯಾಗಿರುವುದಾಗಿ ವರದಿ ತಿಳಿಸಿದೆ. ಕ್ವೀನ್ ಲ್ಯಾಂಡ್ ನಲ್ಲಿ ಸುಮಾರು 1,400 ಮನೆಗಳು ಪ್ರವಾಹಕ್ಕೆ ಸಿಲುಕಿದ್ದು, 28,000 ಮನೆಗಳು ವಿದ್ಯುತ್ ಸರಬರಾಜು ಇಲ್ಲದೆ ಜನರು ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ.
ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಜನರು ಮನೆಯೊಳಗಿದ್ದು, ಅನಾವಶ್ಯಕ ತಿರುಗಾಟ ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. “ ಇದೊಂದು ಹವಾಮಾನ ಬಾಂಬ್” ಆಗಿದ್ದು ದಿಢೀರನೆ ಧಾರಾಕಾರವಾಗಿ ಸುರಿದ ಮಳೆಯಿಂದ ಭಾರೀ ಹಾನಿಯಾಗಿದೆ. ಪ್ರವಾಹ ಪೀಡಿತ ಸ್ಥಳಗಳಿಗೆ ರಕ್ಷಣಾ ಸಿಬಂದಿಗಳು ತೆರಳಿ ಜನರನ್ನು ರಕ್ಷಿಸುವಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.
ಕ್ವೀನ್ ಲ್ಯಾಂಡ್ ರಾಜಧಾನಿಯಲ್ಲಿರುವ ಬ್ರಿಸ್ಬೇನ್ ನದಿಯ ನೀರಿನ ಮಟ್ಟ ತುಂಬಿ ಹರಿಯುತ್ತಿದ್ದು, ಆಸ್ಟ್ರೇಲಿಯಾದ ಹಲವಾರು ಬೀದಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಕಾರು, ಕಸ, ತಾತ್ಕಾಲಿಕ ಶೆಡ್ ಗಳ ಮನೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.