ಸಕಲೇಶಪುರ: ತಾಲೂಕಿನಲ್ಲಿ ಕೆಲದಿನಗಳವರೆಗೆ ಬಿಡುವು ನೀಡಿದ್ದ ಮುಂಗಾರು ಮಳೆಯು ಮತ್ತೆ ಆರಂಭವಾಗಿದೆ. ಬುಧವಾರ ಸಂಜೆ ಆರಂಭವಾದ ಮಳೆ ಗುರುವಾರ ಬೆಳಗ್ಗೆ 10 ಗಂಟೆವರೆಗೆ ಧಾರಾಕಾರವಾಗಿ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.
ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ 10ಕ್ಕೂ ಹೆಚ್ಚು ಕಡೆ ಭೂಕುಸಿತ ಉಂಟಾಗಿದೆ. ಮಳೆ ಜೊತೆಗೆ ಗಾಳಿಯೂ ಬೀಸಿದ್ದರಿಂದಾಗಿ ಹಲವು ಮರಗಳು ಧರೆಗುರುಳಿವೆ. ತಗ್ಗು ಪ್ರದೇಶದಲ್ಲಿ ಭತ್ತದ ಗದ್ದೆ, ಜಮೀನಿನಲ್ಲಿ ನೀರು ನಿಂತಿದ್ದು, ಕೃಷಿ ಚಟುವಟಿಕೆಗೆ ತೀವ್ರ ತೊಂದರೆಯಾಗಿದೆ.
ತಾಲೂಕಿನ ಕ್ಯಾಮನಹಳ್ಳಿ, ಮಠಸಾಗರ ರಸ್ತೆಗಳು ಕುಸಿದಿರುವ ಕಾರಣ ಸಂಚಾರಕ್ಕೆ ಅಡಚಣೆಯಾಗಿದೆ. ತಾಲೂಕಿನ ಅತ್ತಿಹಳ್ಳಿ, ಮಾರನಹಳ್ಳಿ, ಕಾಡುಮನೆ, ಕ್ಯಾಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಇದರಿಂದ ವಿದ್ಯುತ್ ಅಭಾವ ಉಂಟಾಗಿ ಜನ ಕತ್ತಲೆಯಲ್ಲಿ ಜೀವನ ಸಾಗಿಸುವಂತಾಗಿದೆ. ಹೇಮಾವತಿ ನದಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ಹಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಗೊರೂರು ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ತಾಲೂಕಿನಲ್ಲಿ ಕೇವಲ 12 ಗಂಟೆಯಲ್ಲಿ 150 ರಿಂದ 200 ಮಿಮೀ ಮಳೆ ಸುರಿದಿದೆ. ಗುರುವಾರ ಮುಂಜಾನೆಯಿಂದ ಮಳೆ ಬಿಡುವು ನೀಡಿದ್ದು, ಜನಜೀವನ ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದೆ. ಗುರವಾರ ಸಂಜೆ ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಮಳೆ ಎಡಬಿಡದೇ ಸುರಿದ ಕಾರಣ ಬುಧವಾರ ಸಂಜೆಯಿಂದ ಮನೆಯಲ್ಲೇ ಬಂಧಿಯಾಗಿದ್ದ ಜನ ಮನೆಗೆ ಬೇಕಾದ ಪದಾರ್ಥಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಜಿಲ್ಲೆಯ ವಿವಿಧೆಡೆ ತುಂತುರು ಮಳೆ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿದರೆ, ಜಿಲ್ಲೆಯ ಬಯಲುಸೀಮೆ, ಅರೆ ಮಲೆನಾಡು ಭಾಗದಲ್ಲಿ ತುಂತರು ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ.
ಹಲವು ರೈತರು ಆಲೂಗೆಡ್ಡೆ, ತಂಬಾಕು, ಮುಂತಾದ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಬಯಲುಸೀಮೆ ಭಾಗದಲ್ಲಿ ಹೆಸರು, ಮುಸುಕಿನ ಜೋಳ, ಮುಂತಾದ ದ್ವಿದಳ ಧಾನ್ಯಗಳನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದು, ಮಳೆ ಅಗತ್ಯವಾಗಿದೆ. ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಮಳೆಯಾಗದ ಕಾರಣ ಕೆಲವು ಬೆಳೆಗಳು ಬಾಡಲಾರಂಭಿಸಿವೆ.