ರಾಮನಗರ: ಕಳೆದೊಂದು ತಿಂಗಳಿಂದ ಬಿಸಿಲ ಬೇಗಿಯಿಂದ ಬಸವಳಿದಿದ್ದ ಜಿಲ್ಲೆಯ ನೆಲವನ್ನು ಗುರುವಾರ ರಾತ್ರಿ ಸುರಿದ ಮಳೆ ತಂಪಾಗಿಸಿದೆ. ಗುರುವಾರ ದಿಂದ ಪ್ರಾರಂಭವಾದ ಹುಬ್ಬೆಮಳೆ ಶುಭಾರಂಭ ಮಾಡಿದ್ದು, ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಕೊಂಚ ನಿರಾಳ ಭಾವ ಮೂಡಿಸಿದೆ.
ಗುರುವಾರ ರಾತ್ರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತೀವ್ರತೆಯಿಂದ ಕಂಗಾ ಲಾಗಿದ್ದ ಜನತೆಗೆ ಮಳೆಯಿಂದಾಗಿ ತಂಪೆನಿಸಿದೆ. ಇನ್ನು ಜಿಲ್ಲೆಯಲ್ಲಿ ಶೇ.36ರಷ್ಟು ಬಿತ್ತನೆ ನಡೆದಿದ್ದು, ಮಳೆ ಬಾರದ ಹಿನ್ನೆಲೆಯಲ್ಲಿ ರೈತರ ಹೊಲಗಳಲ್ಲಿ ಬೆಳೆದಿದ್ದ ಪೈರುಗಳು ಒಣಗುವ ಆತಂಕ ನಿರ್ಮಾಣ ವಾಗಿತ್ತು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಒಣಗುತಿದ್ದ ಪೈರುಗಳಿಗೆ ಕುಟುಕು ಜೀವ ಬಂದಂತಾಗಿದೆ.
44 ಮಿಮೀ ಮಳೆ: ಗುರುವಾರ ರಾತ್ರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ.723 ರಷ್ಟು ಹೆಚ್ಚು ಮಳೆ ಸುರಿದಿದೆ. ಕಳೆದ 50 ವರ್ಷಗಳ ಮಳೆ ಪ್ರಮಾಣವನ್ನು ಗಣನೆ ಮಾಡಿ ಆ.31 ರಂದು ಜಿಲ್ಲೆಯಲ್ಲಿ 5 ಮಿಮೀ ನಷ್ಟು ಮಳೆ ಬರುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಗುರುವಾರ ರಾತ್ರಿ 44 ಮಿಮೀ ನಷ್ಟು ಮಳೆ ಸುರಿ ದಿದ್ದು, ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ಬಿಸಿಲ ಝಳದಿಂದ ಬಣಗುಡುತಿದ್ದ ಭೂಮಿ ಇದೀಗ ಮೆದು ವಾಗಿದೆ. ಗುರುವಾರ ಇಡೀ ದಿನ ಬಿಸಿಲಿನ ತೀವ್ರತೆ ಹೆಚ್ಚಿದ್ದು 32 ಡಿಗ್ರಿ ಸೆಂ. ನಿಂದ 36 ಡಿಗ್ರಿ ಸೆಂ.ವರಗೆ ಇತ್ತು. ಈ ತಾಪ ಮಾನ ಬೇಸಿಗೆ ದಿನಗಳ ಮಟ್ಟ ತಲುಪಿತ್ತು. ಮಳೆ ಮುಂದುವರೆಯುವ ಸಾಧ್ಯತೆ: ಜಿಲ್ಲೆ ಯಾದ್ಯಂತ ಹುಬ್ಬೆ ಉತ್ತಮ ವರ್ಷಾರಂಭ ಮಾಡಿದೆ. ಇದರಿಂದಾಗಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿ ರುವ ಪೈರುಗಳಿಗೆ ಗುಟುಕು ಜೀವ ಬಂದಂತಾಗಿದೆ. ಬಿತ್ತನೆ ಮಾಡಿರುವ ರೈತರು ಮುಂದಿನ ಕಾರ್ಯ ಆರಂಭಿಸಿದ್ದಾರೆ.
ಇನ್ನೂ ನಾಲ್ಕೈದು ದಿನ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡುರುವುದು ಆಶಾದಾಯಕ ವೆನಿಸಿದ್ದು, ಬಿತ್ತನೆಯಾಗಿರುವ ಅಲ್ಪ ಸ್ವಲ್ಪ ಬೆಳೆ ರಕ್ಷಣೆಯಾಗುವ ಜೊತೆಗೆ ಬಿಸಿಲ ಜಳ ದಿಂದ ಕಂಗಾಲಾಗಿದ್ದ ಜನತೆಗೆ ಮಳೆ ತಂಪೆರೆತಲಿದೆ.
ಬಿತ್ತನೆ ಸಾಧ್ಯವಿಲ್ಲ: ಉಬ್ಬೆ ಮಳೆ ಉಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಯೋಲ್ಲ ಎಂಬ ಗಾದೆ ಮಾತು ಜಾನಪದದಲ್ಲಿ ಚಾಲ್ತಿಯಲ್ಲಿದೆ. ಅದೇ ರೀತಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ ಯಾದರೂ, ಈ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ನೆರ ವಾಗುವುದಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ. ಈಗಾಗಲೇ ಬಿತ್ತನೆ ಅವದಿ ಮುಗಿದಿದ್ದು, ಮಳೆ ಆಶ್ರಿತ ಬೆಳೆ ಬೆಳೆಯುವರು ಇನ್ನು ಅಲ್ಪಾವಧಿ ಬೆಳೆಯ ತಳಿಗಳನ್ನು ಮಾತ್ರ ಬಿತ್ತನೆ ಮಾಡಬೇಕು. ಜಿಲ್ಲೆಯಲ್ಲಿ ಶೇ.70 ರಷ್ಟು ರೈತರು ಇನ್ನೂ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಹದಗೊಳಿಸಿ ಬಿತ್ತನೆ ಮಾಡಿದರೆ ಬೆಳೆ ಫಲ ಕೊಡುವ ಸಮಯಕ್ಕೆ ಮಳೆಗಾಲ ಮುಗಿದು ನೀರಿನ ಕೊರತೆ ಎದುರಾಗುವ ಕಾರಣ ಬಿತ್ತನೆ ಕಾರ್ಯ ಸಾಧ್ಯ ವಾಗುವುದಿಲ್ಲ. ಈ ಕಾರಣದಿಂದಾಗಿ ರೈತರ ಬಿತ್ತನೆಗೆ ಇದೀಗ ಸುರಿದಿರುವ ಮಳೆಯಿಂದ ಸಹಕಾರವಾಗುವುದಿಲ್ಲ.
ತಾಲೂಕುಗಳ ಪೈಕಿ ಮಾಗಡಿಯಲ್ಲಿ ಹೆಚ್ಚು ಮಳೆ: ಜಿಲ್ಲೆಯ 5 ತಾಲೂಕುಗಳ ಪೈಕಿ ಮಾಗಡಿ ತಾಲೂಕಿಗೆ ಹೆಚ್ಚು ಮಳೆಯಾಗಿದೆ. ಮಾಗಡಿ ತಾಲೂಕಿನ ವಾಡಿಕೆ ಮಳೆ 6 ಮಿಮೀ ಇತ್ತು. ಗುರುವಾರ ರಾತ್ರಿ58.4 ಮಿಮೀ ಮಳೆ (ಶೇ.873 ರಷ್ಟು ಹೆಚ್ಚು) ಸುರಿದಿದೆ. ಇನ್ನು ಚನ್ನಪಟ್ಟಣ ತಾಲೂಕಿಗೆ 7.9 ಮಿಮೀ ವಾಡಿಕೆ ಮಳೆಯಿದ್ದು, 52.9 ಮಿಮೀ ಮಳೆಯಾಗಿದೆ. (ಶೇ.570 ರಷ್ಟು ಹೆಚ್ಚು). ರಾಮನಗರ ತಾಲೂಕಿಗೆ 8.3 ಮಿಮೀ ವಾಡಿಕೆ ಮಳೆ ಇದ್ದು, 40.1 ಮಿಮೀ ಮಳೆಯಾಗಿದೆ. (ಶೇ.383 ರಷ್ಟು ಹೆಚ್ಚು), ಕನಕಪುರ ತಾಲೂಕಿಗೆ ಶೇ.3.8ಮಿಮೀ ವಾಡಿಕೆ ಮಳೆ ಇದ್ದು 30.4 ಮಿಮೀ ಮಳೆಯಾಗಿದ್ದು(ಶೇ.700 ರಷ್ಟು ಹೆಚ್ಚು), ಹಾರೋ ಹಳ್ಳಿ ತಾಲೂಕಿನಲ್ಲಿ ಶೇ.5.5 ಮಿಮೀ ವಾಡಿಕೆ ಮಳೆಯಿದ್ದು 43.1 ಮಿಮೀ ಮಳೆ ಸುರಿದಿದೆ(ಶೇ.684 ರಷ್ಟು ಹೆಚ್ಚು).
ಗುರುವಾರ ರಾತ್ರಿ ಉತ್ತಮ ಮಳೆ ಸುರಿದಿದೆಯಾದರೂ, ಬಿತ್ತನೆ ಅವಧಿ ಪೂರ್ಣ ಗೊಂಡಿರುವ ಹಿನ್ನೆಲೆಯಲ್ಲಿ ಬಿತ್ತನೆ ಚಟುವಟಿಕೆಗೆ ಸಹಕಾರಿಯಾಗುವುದಿಲ್ಲ. ಈಗಾ ಗಲೇ ಮೊದಲ ಉಳುಮೆ ಮಾಡಿ ಭೂಮಿ ಹದಗೊಳಿಸಿರು ವವರು ಬಿತ್ತನೆ ಮಾಡಬಹುದು. ಹೊಸದಾಗಿ ಚೊಚ್ಚಲ ಉಳುಮೆ ಮಾಡುವವರು ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ.
-ಬೊಮ್ಮೇಶ್, ಕೃಷಿ ತಾಂತ್ರಿಕ ಅಧಿಕಾರಿ ಚನ್ನಪಟ್ಟಣ
– ಸು.ನಾ.ನಂದಕುಮಾರ್