ಕುಳಗೇರಿ ಕ್ರಾಸ್ (ಬಾಗಲಕೋಟೆ) : ಹಗಲು-ರಾತ್ರಿ ಎನ್ನದೆ ಸತತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಗ್ರಾಮೀಣ ಭಾಗದ ಜನತೆಯಲ್ಲಿ ಭಯ ಶುರುವಾಗಿದೆ. ಮಳೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಗ್ರಾಮಗಳಲ್ಲಿನ ಮಣ್ಣಿನ ಮನೆಗಳು ಕುಸಿಯುತ್ತಿರುವ ಪರಿಣಾಮ ಆತಂಕದಲ್ಲಿ ಜನರು ತಮ್ಮ ನಿತ್ಯ ಜೀವನ ದೂಡುತ್ತಿದ್ದಾರೆ.
ಚಿಮ್ಮನಕಟ್ಟಿ ಗ್ರಾಮದ ಲಾಲಸಾಬ ಡಂಗಿ, ದ್ಯಾಮನಗೌಡ ಪಾಟೀಲ ಎಂಬುವರ ಎರೆಡು ಮಣ್ಣಿನ ಮನೆಗಳ ಮೇಲ್ಛಾವಣಿಯು ಮದ್ಯಭಾಗದಲ್ಲೇ ಕುಸಿದಿದ್ದರ ಪರಿಣಾಮ ಬಾರಿ ತೊಂದರೆ ಜೊತೆಗೆ ನಷ್ಟ ಉಂಟಾಗಿದೆ. ಇನ್ನು ನರಸಾಪೂರ ಗ್ರಾಮದಲ್ಲೂ ಎರಡು ಮನೆಗಳು, ಮುಷ್ಟಿಗೇರಿ ಗ್ರಾಮದಲ್ಲಿ ಎರೆಡು ಮನೆಗಳು, ಮತ್ತಲಗೇರಿ ಗ್ರಾಮದಲ್ಲಿ ಒಂದು ಮನೆ ಬಿದ್ದ ವರದಿಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಿಗಳಲ್ಲಿನ ಕಲ್ಲು-ಮಣ್ಣಿನ ಮಣೆಗಳ ಮೇಲ್ಚಾವಣಿ ಮತ್ತು ಗೋಡೆ ಕುಸಿಯುವುದು ಮುಂದುವರೆದಿದೆ. ಮನೆಗಳ ಕುಸಿತದಿಂದಾಗಿ ಕೆಲವರಿಗೆ ಆಶ್ರಯ ಇಲ್ಲದಂತಾಗಿದೆ. ಈ ವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ಎ ಡಿ ಸಾರವಾಡ ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳಾದ ಎಸ್ ಜೆ ದ್ಯಾಪೂರ, ಜಿ ಎಸ್ ಹಂಪಿಹೊಳಿ, ಲಕ್ಷ್ಮಣ ತಳವಾರ, ಹನಮಂತ ಮಡಿವಾಳ, ಸರಳಾ ಸೊಪ್ಪಿನ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.